ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.9: ಭಾರತ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ದಾಳಿ ನಡೆಯಬಹುದು ಎಂದು ಗುಪ್ತಚರ ಸಂಸ್ಥೆ ವರದಿ ಮಾಡಿದೆ. ರಾಜಸ್ತಾನದ ಭಾರತ-ಪಾಕ್ ಗಡಿ ಮೂಲಕ ದಾಳಿ ನಡೆಯಬಹುದು ಎಂದು ಇಂಟಲಿಜೆನ್ಸ್ ತಿಳಿಸಿದೆ. ತದನಂತರ ದೇಶದಲ್ಲಿ ಮುನ್ನೆಚ್ಚರಿಕೆ ಹೊರಡಿಸಲಾಗಿದ್ದು, ರಾಜಸ್ತಾನ ಗಡಿಯಲ್ಲಿ ಪಾಕಿಸ್ತಾನ ಹೆಚ್ಚುವರಿ ಸೈನ್ಯವನ್ನು ನಿಯೋಜಿಸಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿದೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ.
ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‍ನನ್ನು ಪಾಕಿಸ್ತಾನ ರಹಸ್ಯವಾಗಿ ಬಿಡುಗಡೆಗೊಳಿಸಿದೆ ಎನ್ನಲಾಗಿದ್ದು ಭಾರತದೊಂದಿಗೆ ಯುದ್ಧ ಪರಿಸ್ಥಿತಿ ಇರುವುದರಿಂದ ಸಂಘಟನೆಯೊಂದಿಗೆ ಕೈಜೋಡಿಸಿ ಭಯೋತ್ಪಾದನೆ ಚಟುವಟಿಕೆಗಳಿಗೆ ರೂಪು ನೀಡಲು ಯತ್ನಿಸಲಾಗುತ್ತಿದೆ ಎಂದು ಇಂಟಲಿಜೆನ್ಸ್ ಹೇಳುತ್ತಿದೆ.
ಪುಲ್ವಾಮ ಭಯೋತ್ಪಾದನಾ ದಾಳಿಯ ಬಳಿಕ ಅಝರ್‌ನನ್ನು ಪಾಕಿಸ್ತಾನ ಬಂಧಿಸಿದೆ ಎಂದು ವರದಿಯಾಗಿತ್ತು. ಕಳೆದ ವಾರ ಕಾಶ್ಮೀರದಲ್ಲಿ ಲಷ್ಕರೆ ತಯ್ಯಿಬದೊಂದಿಗೆ ಸಂಬಂಧ ಇರುವ ಭಯೋತ್ಪಾದಕರಿಬ್ಬರನ್ನು ಸೇನೆ ಬಂಧಿಸಿತ್ತಲ್ಲದೇ ಅವರು ತಪ್ಪೊಪ್ಪಿಕೊಂಡಿದ್ದರು. ಪಾಕಿಸ್ತಾನದ ಸಹಾಯದಲ್ಲಿ ಲಷ್ಕರ್ ಭಯೋತ್ಪಾದಕರು ನುಸುಳಲು ಯೋಜನೆ ಹಾಕಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.












