ವೆನೆಜುವೆಲಾ ಭೂಕಂಪಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ; ಮಾನವೀಯ ನೆರವಿಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಆಗ್ರಹ

0
205

ಸನ್ಮಾರ್ಗ ವಾರ್ತೆ

ವೆನೆಜುವೆಲಾದಲ್ಲಿ ಇತ್ತೀಚೆಗೆ ಸಂಭವಿಸಿರುವ ಭೂಕಂಪದಲ್ಲಿ 920 ಜನರು ಸಾವನ್ನಪ್ಪಿದ್ದಾರೆ ಮತ್ತು ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮುಖ್ಯಸ್ಥ ಟಾಮ್ ಫ್ಲೆಚರ್ ತಿಳಿಸಿರುವುದು ಜೂನ್‌ 27 ರಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಮಾಅತೆ ಇಸ್ಲಾಮೀ ಹಿಂದ್‌ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್‌ ಸಾದತುಲ್ಲಾಹ್‌ ಹುಸೈನಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ವ್ಯಾಪಕ ಜೀವಹಾನಿ, ಗಾಯಗಳು ಮತ್ತು ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಗಿರುವ ಈ ವಿನಾಶಕಾರಿ ಭೂಕಂಪದ ಹಿನ್ನೆಲೆಯಲ್ಲಿ, ಜಮಾಅತೆ ಇಸ್ಲಾಮೀ ಹಿಂದ್ ಪರವಾಗಿ ವೆನೆಜುವೆಲಾದ ಜನತೆಗೆ ಮತ್ತು ಸರ್ಕಾರಕ್ಕೆ ಹೃದಯಾಂತರಾಳದ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.

ಸಾದತುಲ್ಲಾಹ್‌ ಅವರು ಮುಂದುವರಿದು, “ಈ ಭೀಕರ ದುರಂತದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ವೆನೆಜುವೆಲಾದ ಜನರೊಂದಿಗೆ ನಾವಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಶೋಕತಪ್ತ ಕುಟುಂಬಗಳು, ಗಾಯಗೊಂಡವರು ಮತ್ತು ಈ ವಿಪತ್ತಿನಿಂದ ಬಾಧಿತರಾದ ಎಲ್ಲರೊಂದಿಗಿವೆ. ದುಃಖಿತ ಕುಟುಂಬಗಳಿಗೆ ಸರ್ವಶಕ್ತನು ಶಕ್ತಿ ಮತ್ತು ತಾಳ್ಮೆಯನ್ನು ನೀಡಲಿ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುವಂತಾಗಲಿ ಮತ್ತು ಈ ಸವಾಲಿನ ಸಂದರ್ಭದಲ್ಲಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ರಕ್ಷಣೆ ಹಾಗೂ ಪರಿಹಾರ ತಂಡಗಳಿಗೆ ಯಶಸ್ಸು ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದ್ದಾರೆ.

ಮಾನವೀಯತೆ ಮತ್ತು ನೆರವಿನ ಬಗ್ಗೆ ಉಲ್ಲೇಖಿಸುತ್ತಾ, “ನೈಸರ್ಗಿಕ ವಿಕೋಪಗಳು ಪರಸ್ಪರ ಮಾನವೀಯತೆಯನ್ನು ಮತ್ತು ಸಂಕಟದ ಸಮಯದಲ್ಲಿ ಒಟ್ಟಿಗೆ ನಿಲ್ಲುವ ಪ್ರಾಮುಖ್ಯತೆಯನ್ನು ನಮಗೆ ನೆನಪಿಸುತ್ತವೆ. ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ಬೆಂಬಲ ನೀಡಲು ಅಂತರರಾಷ್ಟ್ರೀಯ ಸಮುದಾಯ ಮತ್ತು ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ಮಾನವೀಯ ಹಾಗೂ ತಾಂತ್ರಿಕ ನೆರವನ್ನು ನೀಡಬೇಕು” ಎಂದು ಆಗ್ರಹಿಸಿದ್ದಾರೆ.