ಸತ್ಯಕ್ಕೆ ಬದ್ಧತೆ ತೋರಿದ ಅಪರೂಪದ ವ್ಯಕ್ತಿತ್ವ: ಮನಮೋಹನ್ ಸಿಂಗ್ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಸಂತಾಪ

0
590

ಸನ್ಮಾರ್ಗ ವಾರ್ತೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ಅರ್ಥ ವ್ಯವಸ್ಥೆಯ ಬದಲಾವಣೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ ವ್ಯಕ್ತಿ ಅವರಾಗಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ, ಆರ್ ಟಿ ಇ, ಆಹಾರ ಭದ್ರತಾ ಕಾಯ್ದೆ ಮತ್ತು ಮನ್ ರೇಗಾದಂತಹ ಜನಪರ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದ ವ್ಯಕ್ತಿ ಅವರಾಗಿದ್ದರು ಎಂದು ಹುಸೇನಿ ಶ್ಲಾಘಿಸಿದ್ದಾರೆ.

ದೇಶದ ಗ್ರಾಮೀಣ ಜನರಿಗೆ ಉದ್ಯೋಗದ ಅವಕಾಶವನ್ನು ನೀಡುವ ಹೊಸ ಯೋಜನೆಯನ್ನು ಪರಿಚಯಿಸಿದವರು ಮನಮೋಹನ್ ಸಿಂಗ್ ಆಗಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ಕೊಡುವ ಯೋಜನೆಯನ್ನು ಪ್ರಾರಂಭಿಸಿದವರೂ ಮನಮೋಹನ್ ಸಿಂಗ್ ಆಗಿದ್ದಾರೆ.

ಜಾತ್ಯತೀತ ಸಿದ್ದಾಂತಕ್ಕೆ ಬದ್ಧವಾಗಿ ಬದುಕಿದವರು ಮನಮೋಹನ್ ಸಿಂಗ್ ಆಗಿದ್ದಾರೆ. ತುಳಿತಕ್ಕೊಳಗಾದವರು ಮತ್ತು ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅವರು ಕಾಳಜಿ ವಹಿಸಿದ್ದರು. ಸಾಚಾರ್ ಕಮಿಟಿಯನ್ನು ರೂಪಿಸಿದ್ದು ಇವರೇ ಆಗಿದ್ದರು ಎಂದು ಹುಸೇನಿ ಹೇಳಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿ ಸತ್ಯದ ಪರವಾಗಿ ಬದ್ಧತೆಯನ್ನು ವ್ಯಕ್ತಪಡಿಸಿದ್ದಲ್ಲದೆ ಅತ್ಯಂತ ವಿನಯ ಮತ್ತು ಸೌಜನ್ಯದಿಂದ ಇಡೀ ಬದುಕನ್ನು ಬದುಕಿದವರಾಗಿದ್ದಾರೆ. ಕೋಮು ಸೌಹಾರ್ದತೆಗಾಗಿ ಅವರ ಕೊಡುಗೆ ಬಹಳ ದೊಡ್ಡದು. ಇವತ್ತಿನ ರಾಜಕೀಯದಲ್ಲಿ ಬಹುತೇಕ ಇಲ್ಲದ ಸಜ್ಜನಿಕೆಯನ್ನು ಅವರು ಒಂದು ಮಾದರಿಯಾಗಿ ತೋರ್ಪಡಿಸಿದರು ಎಂದು ಹುಸೇನಿ ಪ್ರಶಂಸಿಸಿದ್ದಾರೆ.