PFI ಮೇಲಿನ ಎನ್‌ಐಎ, ಇಡಿ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಮಾಅತೆ ಇಸ್ಲಾಮಿ ಹಿಂದ್

0
371

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶಾದ್ಯಂತ ಪಿಎಫ್‌ಐ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ಎನ್‌ಐಎ ಮತ್ತು ಇಡಿ ನಡೆಸಿದ ದಾಳಿಗಳು ಮತ್ತು ದಬ್ಬಾಳಿಕೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಸೈಯದ್ ಸದಾತುಲ್ಲಾ ಹುಸೇನಿ ಅವರು ಖಂಡಿಸಿದ್ದಾರೆ.

“ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಗಳು ಮತ್ತು ಅವರ ಮುಖಂಡರ ಮೇಲೆ ಎನ್.ಐಎ ಮತ್ತು ಇಡಿ ನಡೆಸಿದ ದಾಳಿಗಳ ಬಗ್ಗೆ ಜಮಾಅತೆ ಇಸ್ಲಾಮೀ ಹಿಂದ್ ಕಳವಳ ವ್ಯಕ್ತಪಡಿಸುತ್ತದೆ” ಎಂದು ಅವರು ಹೇಳಿದರು.

ಎನ್‌ಐಎ ನಂತಹ ಏಜೆನ್ಸಿಗಳು ತನಿಖೆ ನಡೆಸಬಹುದು. ಆದರೆ, ಜನರ ವಿರುದ್ಧ ಸ್ಪಷ್ಟವಾದ ಸಾಕ್ಷ್ಯಗಳಿರಬೇಕು. ಅಂತಹ ಕ್ರಮಗಳು ಪಕ್ಷಪಾತವಿಲ್ಲದೆ ಮತ್ತು ರಾಜಕೀಯ ಪ್ರೇರಣೆಯಿಂದ ಮುಕ್ತವಾಗಿರಬೇಕು. ಎನ್‌ಐಎ, ಇಡಿ ದಾಳಿಗಳಲ್ಲಿ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವನ್ನು ಅನುಸರಿಸುತ್ತಿದೆಯೇ?

ಎನ್‌ಐಎ ಮತ್ತು ಇಡಿ ದೇಶಾದ್ಯಂತ ಪಿಎಫ್‌ಐ‌ಅನ್ನು ಗುರಿಯಾಗಿಟ್ಟುಕೊಂಡು ಏಕಕಾಲದಲ್ಲಿ ದಾಳಿ ನಡೆಸಿದ ವಿಧಾನ ಸಮಾಜದ ಮುಂದೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಿಶೇಷವಾಗಿ ಕೇಂದ್ರ ಸರ್ಕಾರದ ಏಜೆನ್ಸಿಗಳು ಅವರ ವಿರೋಧಿ ಗುಂಪುಗಳು ಮತ್ತು ನಾಯಕರ ವಿರುದ್ಧ NIA, ED, CBI ಮತ್ತು ಪೋಲಿಸ್‌ನಂತಹ ವಿವಿಧ ರಾಜ್ಯ ಏಜೆನ್ಸಿಗಳ ಮೂಲಕ ಕಳೆದ ಕೆಲವು ವರ್ಷಗಳಿಂದ ಹಲವಾರು ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಯು ಅನುಮಾನಾಸ್ಪದವಾಗಿದೆ. ನಮ್ಮ ಪ್ರಜಾಸತ್ತಾತ್ಮಕ ನೀತಿಯನ್ನು ಘಾಸಿಗೊಳಿಸುತ್ತಿದೆ ಮತ್ತು ಅಧಿಕಾರದಲ್ಲಿರುವವರನ್ನು ಟೀಕಿಸುವ ಮತ್ತು ಮೌಲ್ಯಮಾಪನ ಮಾಡುವ ನಾಗರಿಕರ ಹಕ್ಕುಗಳಿಗೆ ಅಪಾಯವನ್ನುಂಟು ಮಾಡುತ್ತಿದೆ.

ಬಹಿರಂಗವಾಗಿ ದ್ವೇಷ ಪ್ರಚೋದನೆ ಮತ್ತು ಹಿಂಸಾಚಾರದಲ್ಲಿ ತೊಡಗಿರುವ ಹಲವಾರು ಗುಂಪುಗಳ ವಿರುದ್ಧ ಇಂತಹ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಈ ಕ್ರಮವು ಪ್ರಶ್ನಾರ್ಹವಾಗಿದೆ. ಆದ್ದರಿಂದ, ಈ ದಾಳಿಗಳು ಸಮಾಜದಲ್ಲಿ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ದಾಳಿಗಳು ನಿರ್ದಿಷ್ಟ ಕ್ಷೇತ್ರವನ್ನು ಸಮಾಧಾನಪಡಿಸಲು ಉದ್ದೇಶಿಸಲಾಗಿದೆಯೇ? ಹಾಗಿದ್ದಲ್ಲಿ ಇದು ಒಂದು ರೀತಿಯ ತುಷ್ಟಿಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣವಲ್ಲವೇ? ಎಂದು ಅವರು ಪ್ರಶ್ನಿಸಿದರು.

“ಜನರು ಪ್ರತಿಪಕ್ಷಗಳು, ಅಲ್ಪಸಂಖ್ಯಾತರು ಅಥವಾ ಸಮಾಜದ ಯಾವುದೇ ಸಾಮಾಜಿಕ ವರ್ಗಕ್ಕೆ ಸೇರಿದವರಾಗಿದ್ದರೂ ಅನ್ಯಾಯದ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುವ ಎಲ್ಲಾ ದಾಳಿಗಳು ಮತ್ತು ಕ್ರಮಗಳನ್ನು ಜೆಐಹೆಚ್ ಖಂಡಿಸುತ್ತದೆ. ರಾಜ್ಯ ಸಂಸ್ಥೆಗಳು ಪುರಾವೆ ಮತ್ತು ಸಮರ್ಥನೆ ಇಲ್ಲದೆ ಪಕ್ಷಪಾತದ ರೀತಿಯಲ್ಲಿ ಅವರ ವಿರುದ್ಧ ಬಲವಂತದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದರೆ, ಈ ನಡೆಯು ನ್ಯಾಯಯುತ ಸಮಾಜಕ್ಕೆ ಆರೋಗ್ಯಕರವಲ್ಲ. ಜೆಐಹೆಚ್‌ ಎಂದಿಗೂ ದ್ವೇಷ ಮತ್ತು ಹಿಂಸೆಯನ್ನು ಅನುಮೋದಿಸುವುದಿಲ್ಲ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ” ಎಂದು ಅವರು ಹೇಳಿದರು‌.