ಸನ್ಮಾರ್ಗ ಸಂಪಾದಕೀಯ‘
2001 ರಿಂದ 2006ರ ವರೆಗೆ ಅಧಿಕಾರದಲ್ಲಿದ್ದ ಬೇಗಂ ಖಲೀದಾ ಝಿಯಾ ಅವರ ಸರಕಾರದ ಪಾಲುದಾರನಾಗಿ ಜಮಾಅತೆ ಇಸ್ಲಾಮಿಯು ಬಾಂಗ್ಲಾ ದೇಶದ ನಾಗರಿಕರ ಗಮನ ಸೆಳೆದಿತ್ತು. ಜಮಾಅತ್ ಅಧ್ಯಕ್ಷರಾಗಿದ್ದ ಮೌಲಾನಾ ಮುತೀರ‍್ರಹ್ಮಾನ್ ನಿಝಾಮಿ ಅವರು ಕೃಷಿ ಮತ್ತು ಉದ್ಯಮ ಸಚಿವರಾಗಿ ಆಯ್ಕೆಯಾದುದಲ್ಲದೆ, ತನ್ನ ಭ್ರಷ್ಟರಹಿತ ಪಾರದರ್ಶಕ ನೀತಿಯಿಂದ ಜನಪ್ರಿಯರಾದರು. ಇವರೂ ಸಹಿತ 2001ರಲ್ಲಿ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದ ಜಮಾಅತ್‌ನ ಎಲ್ಲಾ 18 ಮಂದಿ ಸಂಸದರಲ್ಲಿ ಯಾರೊಬ್ಬರೂ ಭ್ರಷ್ಟಾಚಾರದಲ್ಲಿ ಸಿಲುಕಿಕೊಳ್ಳಲಿಲ್ಲ. ಅದೇವೇಳೆ,
2006ರ ಚುನಾವಣೆಯಲ್ಲಿ ಖಲೀದಾ ಝಿಯಾ ಸರ್ಕಾರ ಪತನಗೊಳ್ಳುವುದಕ್ಕೆ ಭ್ರಷ್ಟಾಚಾರವೂ ಒಂದು ಪ್ರಬಲ ಕಾರಣವಾಗಿತ್ತು. ಈ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಅವಾಮೀ ಲೀಗ್ ಪಕ್ಷ ಬಹುಮತ ಪಡಕೊಂಡಿತಾದರೂ ಜಮಾಅತೆ ಇಸ್ಲಾಮಿಯನ್ನು ಬಾಂಗ್ಲಾದೇಶಿಯರು ಭವಿಷ್ಯದ ಆಡಳಿತ ಪಕ್ಷವಾಗಿ ಸ್ವೀಕರಿಸುವ ಸೂಚನೆಯನ್ನು ನೀಡಿದ್ದರು. ಆಡಳಿತ ವಿರೋಧಿ ಅಲೆಯಿಂದಾಗಿ ಜಮಾಅತ್ ಗಣನೀಯ ಸಂಖ್ಯೆಯಲ್ಲಿ ಪಾರ್ಲಿಮೆಂಟ್ ಸೀಟನ್ನು ಕಳಕೊಂಡರೂ ತಳಮಟ್ಟದಲ್ಲಿ ಅದು ತನ್ನ ಜಾಲವನ್ನು ವಿಸ್ತರಿಸಿಕೊಂಡಿತ್ತು. ಶಿಕ್ಷಣ, ಆರೋಗ್ಯ ಮತ್ತು ನಾಗರಿಕ ಸೌಲಭ್ಯ ಕ್ಷೇತ್ರಗಳಲ್ಲಿ ಅದು ಬಾಂಗ್ಲಾದೇಶೀಯರ ಮನೆ-ಮನಕ್ಕೆ ತಲುಪಿತ್ತು. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶೇಖ್ ಹಸೀನಾ ಅವರಿಗೆ ಕಂಟಕವಾಗುವ ಎಲ್ಲ ಸೂಚನೆಯನ್ನೂ ಅದು ನೀಡಿತ್ತು. ಭ್ರಷ್ಟಾಚಾರ ಮತ್ತು ಜನಾಕ್ರೋಶಕ್ಕೆ ತುತ್ತಾಗಿದ್ದ ಖಾಲಿದಾ ಝಿಯಾ ಅವರ ಪಕ್ಷವನ್ನು ಎದುರಿಸುವಷ್ಟು ಸುಲಭವಾಗಿ ಬೇರುಮಟ್ಟ ದಲ್ಲಿ ಕಾರ್ಯಕರ್ತರನ್ನು ಹೊಂದಿರುವ ಜಮಾಅತೆ ಇಸ್ಲಾಮಿಯನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಹಸೀನಾ ತಿಳಿದುಕೊಂಡರು. 2006ರ ಚುನಾವಣಾ ಪ್ರಚಾರದಲ್ಲೇ ಇದು ಅವರಿಗೆ ಮನವರಿಕೆ ಯಾಗಿತ್ತು. ಆದ್ದರಿಂದಲೇ, ‘ಅಧಿಕಾರಕ್ಕೆ ಬಂದರೆ ಯುದ್ಧಾಪರಾಧ ನ್ಯಾಯಮಂಡಳಿ’ ರಚಿಸುವುದಾಗಿ ಘೋಷಿಸಿದ್ದರು. 2009ರಲ್ಲಿ ಅವರು ಯುದ್ಧಾಪರಾಧ ನ್ಯಾಯಮಂಡಳಿಯನ್ನು ರಚಿಸಿದರು. ನಿಜವಾಗಿ,
ಯುದ್ಧಾಪರಾಧಗಳನ್ನು ತನಿಖಿಸುವುದೇ ಅವರ ಉದ್ದೇಶವಾಗಿದ್ದರೆ 1996ರಿಂದ 2001ರ ವರೆಗೆ ಪ್ರಧಾನಿಯಾಗಿದ್ದಾಗಲೇ ಅವರಿಗೆ ಈ ನ್ಯಾಯಮಂಡಳಿಯನ್ನು ರಚಿಸಬಹುದಿತ್ತು. ಅಲ್ಲದೇ 1996ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶೇಖ್ ಹಸೀನಾರನ್ನು ಜಮಾಅತೆ ಇಸ್ಲಾಮೀ ಬೆಂಬಲಿಸಿತ್ತು ಮತ್ತು ಖಲೀದಾ ಝಿಯಾಗೆ ವಿರುದ್ಧವಾಗಿ ನಿಂತಿತ್ತು. ಆದರೆ ಶೇಖ್ ಹಸೀನಾ ಸರಕಾರದಲ್ಲಿ ಜಮಾಅತ್ ಭಾಗಿಯಾಗಲಿಲ್ಲ ಮತ್ತು 1998ರಲ್ಲಿ ಖಲೀದಾ ಝಿಯಾರ ಜೊತೆ ಮೈತ್ರಿ ಮಾಡಿಕೊಂಡಿತು. ಇದಕ್ಕಿಂತ ಮೊದಲು ಶೇಖ್ ಹಸೀನಾರ ತಂದೆ ಶೇಖ್ ಮುಜೀಬರ‍್ರಹ್ಮಾನ್‌ರು 1971ರಲ್ಲಿ ಹೊಸದಾಗಿ ರಚನೆಗೊಂಡ ಬಾಂಗ್ಲಾದೇಶದ ಪ್ರಪ್ರಥಮ ಪ್ರಧಾನಿಯಾಗಿದ್ದರು. ಅವರನ್ನು ಬಾಂಗ್ಲಾದ ರಾಷ್ಟ್ರ ಪಿತ ಎಂದು ಕರೆಯಲಾಗು ತ್ತದೆ. ಪ್ರತ್ಯೇಕ ಬಾಂಗ್ಲಾದೇಶದ ರಚನೆಗಾಗಿ 1971ರಲ್ಲಿ ಮುಜೀಬರ‍್ರಹ್ಮಾನ್ ನೇತೃತ್ವದಲ್ಲಿ ನಡೆದ ಹೋರಾಟದ ವೇಳೆ ನಡೆದ ನಾಗರಿಕರ ನರಮೇಧವನ್ನು ಶೇಖ್ ಹಸೀನಾ ಅವರು ಯುದ್ಧಾಪರಾಧ ಎಂದು ಕರೆಯುತ್ತಿದ್ದಾರೆ. ಜಮಾಅತೆ ಇಸ್ಲಾಮೀ ಇದರಲ್ಲಿ ಭಾಗಿಯಾಗಿದೆ ಎಂಬುದು ಅವರ ಆರೋಪ. ಆದರೆ,
ಈ ವಿಷಯದಲ್ಲಿ ಅತೀ ಹೆಚ್ಚು ತಿಳಿದವರು ಶೇಖ್ ಮುಜೀಬರ‍್ರಹ್ಮಾನ್. ಪ್ರಧಾನಿಯಾಗಿದ್ದ ಮತ್ತು ಬಾಂಗ್ಲಾದ `ಗಾಂಧೀಜಿ’ಯಾಗಿದ್ದ ಅವರಿಗೆ ಇಂಥದ್ದೊಂದು ನ್ಯಾಯಮಂಡಳಿ ರಚಿಸುವುದಕ್ಕೆ ಸರ್ವ ಸ್ವಾತಂತ್ರ್ಯವೂ ಇತ್ತು. ಆದರೂ ಅವರು ರಚಿಸಲಿಲ್ಲ. ಪಾಕಿಸ್ತಾನದ ವಿಭಜನೆಗೆ ಜಮಾಅತೆ ಇಸ್ಲಾಮಿಯ ಬೆಂಬಲ ಇರಲಿಲ್ಲವಾದರೂ ಮತ್ತು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನವನ್ನು ಸ್ವಾಯತ್ತ ಪ್ರದೇಶವಾಗಿ, ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಪಾಲಿಮೆಂಟ್‌ನ ರಚನೆಗಾಗಿ ಮುಜೀಬರ‍್ರಹ್ಮಾನ್ ನಡೆಸಿದ್ದ ಹೋರಾಟವನ್ನು ವಿರೋಧಿಸಿತ್ತಾದರೂ ಅದು ಎಂದೂ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿರಲಿಲ್ಲ ಎಂಬುದೇ ಸತ್ಯ. ಇಲ್ಲದಿದ್ದರೆ ಮುಜೀಬರ‍್ರಹ್ಮಾನ್‌ರು ಖಂಡಿತ ಯುದ್ಧಾಪರಾಧ ನ್ಯಾಯ ಮಂಡಳಿಯನ್ನು ರಚಿಸುತ್ತಿದ್ದರು. ಆದರೆ,
2009ರಲ್ಲಿ ಪ್ರಧಾನಿ ಶೇಖ್ ಹಸೀನಾ ಯುದ್ಧಾಪರಾಧ ನ್ಯಾಯ ಮಂಡಳಿಯನ್ನು ರಚಿಸಿದರು. ಜಮಾಅತೆ ಇಸ್ಲಾಮಿಯನ್ನು ಹಣಿಯುವುದೇ ಅವರ ಉದ್ದೇಶವಾಗಿತ್ತು. ಈ ನ್ಯಾಯಮಂಡಳಿ ಎಷ್ಟು ಏಕಮುಖವಾಗಿ ವಿಚಾರಣೆ ನಡೆಸಿತ್ತೆಂದರೆ, ಇಂಟರ್‌ನ್ಯಾಶನಲ್ ಬಾರ್ ಅಸೋಸಿಯೇಶನ್, ನೋ ಪೀಸ್ ವಿದೌಟ್ ಜಸ್ಟಿಸ್, ಅಮೇರಿಕದ ಪಾರ್ಲಿಮೆಂಟ್ ಸದಸ್ಯರು, ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯರು, ಬ್ರಿಟನ್ ಮತ್ತು ವೇಲ್ಸ್ ಮಾನವ ಹಕ್ಕು ಸಮಿತಿ, ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ಗಳು ನ್ಯಾಯ ಮಂಡಳಿಯ ಉದ್ದೇಶಶುದ್ಧಿಯನ್ನೇ ಪ್ರಶ್ನಿಸಿದುವು. ಆದರೆ, ಹಸೀನಾ ಇವಾವುದನ್ನೂ ಕಿವಿಗೆ ಹಾಕಿ ಕೊಳ್ಳಲೇ ಇಲ್ಲ. ಜಮಾಅತ್‌ನ ಪ್ರಮುಖ ನಾಯಕರಾದ ಅಲಿ ಅಹ್ಸನ್ ಮುಜಾಹಿದ್, ಅಬ್ದುಲ್ ಕಾದರ್ ಮುಲ್ಲಾ, ಮುಹಮ್ಮದ್ ಕಮರುಝ್ಝಮಾನ್, ಅಲಿ ಕಾಸಿಂ ಮತ್ತು ಖಲೀದಾ ಝಿಯಾ ಸರಕಾರದಲ್ಲಿ ಸಚಿವರಾಗಿದ್ದ ಮುತೀವುರ‍್ರಹ್ಮನ್ ನಿಝಾಮಿಯನ್ನು ಗಲ್ಲಿಗೇರಿಸಿತು. ಈ ತೀರ್ಪುಗಳನ್ನು ಸುಪ್ರೀಮ್ ಕೋರ್ಟ್ನಲ್ಲಿ ಪ್ರಶ್ನಿಸಲಾಯಿತಾದರೂ ಪ್ರಯೋಜ ನವಾಗಲಿಲ್ಲ. ಅಂದಹಾಗೆ, ಇತ್ತೀಚೆಗೆ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಹೋರಾಟಗಾರರು ಸುಪ್ರೀಮ್ ಕೋರ್ಟನ್ನು ಸುತ್ತುವರಿದಿದ್ದಲ್ಲದೇ, ಮುಖ್ಯ ನ್ಯಾಯಾಧೀಶ ರಾಜೀನಾಮೆ ಕೊಡುವಂತೆ ಮಾಡಿದ್ದು ಇಲ್ಲಿ ಸ್ಮರಣಾರ್ಹ. ಕೋರ್ಟ್ ನ ಉಳಿದ ಐವರು ನ್ಯಾಯಾಧೀಶರ ರಾಜೀನಾಮೆಯನ್ನೂ ಈ ಹೋರಾಟಗಾರರು ಆಗ್ರಹಿಸಿದ್ದರು ಎಂಬುದೂ ಇಲ್ಲಿ ಮುಖ್ಯ. ರಾಜೀನಾಮೆ ನೀಡಿದ ಮುಖ್ಯ ನ್ಯಾಯಾಧೀಶರು ಹಸೀನಾ ಅವರ ಆಪ್ತರೂ ಬಂಧುವೂ ಆಗಿದ್ದರು ಎಂಬುದನ್ನು ಪರಿಗಣಿಸಿದರೆ, ಒಟ್ಟು ನ್ಯಾಯಾಂಗ ವ್ಯವಸ್ಥೆಯನ್ನು ಹಸೀನಾ ಹೇಗೆ ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ಮನದಟ್ಟಾಗುತ್ತದೆ. ಆಘಾತಕಾರಿ ಸಂಗತಿ ಏನೆಂದರೆ,
ಹೆದರಿಸಿ, ಬೆದರಿಸಿ, ಅಪಹರಿಸಿ ಸಾಕ್ಷಿಗಳಿಂದ ಸಾಕ್ಷ್ಯ ಪಡೆಯಲಾಗಿತ್ತು ಎಂಬುದು. ಪಶ್ಚಿಮ ಪಾಕಿಸ್ತಾನದ ಬೋಶುಗೋರಿ ಗ್ರಾಮದಲ್ಲಿ ನಡೆದ 450 ಮಂದಿಯ ಹತ್ಯೆಗೆ ನಿಝಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. ಆ ಹತ್ಯಾಕಾಂಡ ನಡೆಸಲು ನಿಝಾಮಿ ಅವರು ಪಾಕ್ ಸೈನಿಕರಿಗೆ ಗ್ರಾಮದ ದಾರಿ ತೋರಿಸಿದ್ದರು ಎಂಬುದು ಆರೋಪ. ಇದೇ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಲಾಗಿತ್ತು. ಆ ಹತ್ಯಾಕಾಂಡದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯನ್ನು ಹೇಗೆ ಬಂದೂಕಿನ ಮೊನೆಯಲ್ಲಿಟ್ಟು ಸಾಕ್ಷ್ಯ ಪಡೆಯಲಾಗಿತ್ತು ಎಂಬುದನ್ನು ಆ ಬಳಿಕದ ಸ್ಟಿಂಗ್ ಆಪರೇಶನ್ ಹೇಳಿತ್ತು. ಇದರ ಆಧಾರದಲ್ಲೇ ಲಂಡ ನ್‌ನ ದಿ ಟೆಲಿಗ್ರಾಫ್ ಪತ್ರಿಕೆಯು ನಿಝಾಮಿ ವಿಚಾರಣಾ ಪ್ರಕ್ರಿಯೆಯನ್ನೇ ಬೋಗಸ್ ಎಂದು ಹೇಳಿತ್ತು. ಆ ಸ್ಟಿಂಗ್ ಆಪರೇ ಶನ್‌ನಲ್ಲಿ ಆ ವ್ಯಕ್ತಿ ತನ್ನನ್ನು ಪೊಲೀಸರು ಅಪಹರಿಸಿದ್ದು, ಮಂತ್ರಿಯ ಬಳಿಗೆ ಕೊಂಡೊಯ್ದದ್ದು ಮತ್ತು ಜೀವಬೆದರಿಕೆ ಹಾಕಿದ್ದನ್ನೆಲ್ಲಾ ಹೇಳಿಕೊಂಡಿದ್ದ. ಅಲ್ಲದೇ, ಚುನಾವಣೆಯಲ್ಲಿ ತಾನು ಜಮಾಅತೆ ಇಸ್ಲಾಮಿಗೆ ಓಟು ಹಾಕಿದ್ದೆ ಎಂದೂ ಹೇಳಿದ್ದ. ಪಾಕ್ ಸೇನೆಗೆ ದಾರಿ ತೋರಿಸಿದವನ ಹೆಸರು ಅಸದ್ ಎಂದಾಗಿದ್ದು, ಆತನನ್ನು ಸ್ವಾತಂತ್ರ‍್ಯ ಹೋರಾಟಗಾರರು ಬಂಧಿಸಿದರಲ್ಲದೇ ಜನತಾ ನ್ಯಾಯಾಯಲದಲ್ಲಿ ವಿಚಾರಣೆಗೆ ಒಳಪಡಿಸಿ ನೇಣಿಗೇರಿಸಿದ್ದರು ಎಂದೂ ಆತ ಸ್ಟಿಂಗ್ ಆಪರೇಶನ್ ನಲ್ಲಿ ಹೇಳಿದ್ದ. ನಿಝಾಮಿ ವಿರುದ್ಧ ತಾನು ಸಾಕ್ಷ್ಯ ನುಡಿಯದಿದ್ದರೆ ಪೊಲೀಸ್ ಇಲಾಖೆಯಲ್ಲಿರುವ ತನ್ನ ಮಗನ ಕೆಲಸ ಹೋಗಲಿದೆ ಎಂಬ ಭೀತಿಯನ್ನೂ ಆತ ವ್ಯಕ್ತಪಡಿಸಿದ್ದ.
ಬಾಂಗ್ಲಾದ ಯುದ್ಧಾಪರಾಧ ನ್ಯಾಯ ಮಂಡಳಿಯ ವಿವಿಧ ಪ್ರಕ್ರಿಯೆಯನ್ನು ಅಧ್ಯಯನ ನಡೆಸಿದರೆ, ಹಸೀನಾ ಎಂಥ ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿದ್ದರು ಅನ್ನುವುದು ಗೊತ್ತಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜಮಾಅತೆ ಇಸ್ಲಾಮೀ ವಿರುದ್ಧ ನಿಷೇಧ ಹೊರಡಿಸುವುದಕ್ಕೂ ಅವರು ಸಫಲವಾದರು. ತನ್ನ ವಿರುದ್ಧದ ಪ್ರತಿ ಧ್ವನಿಯನ್ನೂ ಹತ್ತಿಕ್ಕಿದರು. ಜಮಾಅತೆ ಇಸ್ಲಾಮಿಯ ಸಾವಿರಾರು ಕಾರ್ಯಕರ್ತರು ತಲೆಮರೆಸಿಕೊಂಡೋ ನಿರಾಶ್ರಿತರಾಗಿಯೋ ಬದುಕಿದರು. ಅವರ ನಾಯಕರನ್ನು ಜೈಲಿಗಟ್ಟಿದರು. ಅದರ ಚಟುವಟಿಕೆಗಳನ್ನು ಹತ್ತಿಕ್ಕಿದರು. ಇದರಿಂದ ನಾಗರಿಕರು ಎಷ್ಟು ರೋಸಿಹೋದರೆಂದರೆ, 2022ರ ಪಾರ್ಲಿಮೆಂಟ್ ಚುನಾವಣೆಯನ್ನು ಬಹುತೇಕ ಬಹಿಷ್ಕರಿಸಿದರು. ಕೇವಲ 40% ಮಂದಿಯಷ್ಟೇ ಮತದಾನ ಮಾಡಿದರು. ಹಸೀನಾರ ದಮನ ನೀತಿಯನ್ನು ಸ್ವತಃ ಅಮೇರಿಕವೇ ವಿರೋಧಿಸಿತು. ಈಗಿನ ಮಧ್ಯಂತರ ಸರಕಾರದ ಪ್ರಧಾನಿ ಮುಹಮ್ಮದ್ ಯೂನುಸ್ ವಿರುದ್ಧವೇ 200ರಷ್ಟು ಕೇಸ್‌ಗಳನ್ನು ದಾಖಲಿಸಿ ಈ ಹಸೀನಾ ಬಾಂಗ್ಲಾದಿಂದಲೇ ಓಡಿಸಿದ್ದರು. ಇದೀಗ,
ಅಂಥ ಹಸೀನಾರೇ ಮರಣ ದಂಡನೆ ಭೀತಿಯನ್ನು ಎದುರಿಸುತ್ತಿದ್ದಾರೆ. ಭಾರತ ಸರ್ಕಾರ ಒಂದೊಮ್ಮೆ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾನ್ತರಿಸಿದರೆ ಅವರಿಗೆ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಕಾಲ ಅತ್ಯಂತ ಶೀಘ್ರವಾಗಿ ಮತ್ತು ಕಟುವಾಗಿ ಪ್ರತಿಕ್ರಿಯಿಸುತ್ತದೆ, ಅಲ್ಲವೇ?