ಮತಾಂತರ ತಡೆ ಕಾಯ್ದೆಗಳನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಮೆಟ್ಟಲೇರಿದ ಜಮೀಅತ್ ಉಲಮಾ ಏ ಹಿಂದ್

0
188

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಉತ್ತರಾಖಂಡ ಹಾಗೂ ಮಧ್ಯಪ್ರದೇಶದಲ್ಲಿ ಜಾರಿಗೆ ತಂದಿರುವ ಮತಾಂತರ ತಡೆಗೆ ಸಂಬಂಧಿಸಿದ ವಿವಿಧ ಕಾಯಿದೆಗಳನ್ನು ಪ್ರಶ್ನಿಸಿ ದೇಶದ ಪ್ರಮುಖ ಮುಸ್ಲಿಂ ವಿದ್ವಾಂಸರ ಸಂಘಟನೆ ಜಮೀಅತ್ ಉಲಮಾ ಏ ಹಿಂದ್‌ ಗುರುವಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆ, ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ‍್ಯ ಕಾಯಿದೆ, ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ ಕಾಯಿದೆ, ಮಧ್ಯ ಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ ಕಾಯಿದೆ, ತಿದ್ದುಪಡಿಯಾದ ಗುಜರಾತ್ ಧಾರ್ಮಿಕ ಸ್ವಾತಂತ್ರ‍್ಯ ಕಾಯಿದೆಗಳ ಸಿಂಧುತ್ವ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಅಂತರ್‌ಧರ್ಮೀಯ ವಿವಾಹವಾದ ಜೋಡಿಗೆ ಕಿರುಕುಳ ನೀಡಲು ಮತ್ತು ಅವರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಲೆಂದು ಕಾಯಿದೆ ಜಾರಿಗೆ ತರಲಾಗಿದೆ ಎಂದು ವಕೀಲ ಎಜಾಝ್ ಮಕ್ಬೂಲ್ ಅವರ ಮೂಲಕ ಸಲ್ಲಿಸಲಾದ ಮನವಿ ಕಳವಳ ವ್ಯಕ್ತಪಡಿಸಿದೆ.

ಈ ಎಲ್ಲಾ ಕಾಯಿದೆಗಳು ಒಬ್ಬ ವ್ಯಕ್ತಿ ನಂಬಿರುವ ಧರ್ಮವನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತವೆ ಮತ್ತು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುತ್ತವೆ. ಜೊತೆಗೆ ಅಂತರ್ ಧರ್ಮೀಯ ವಿವಾಹವಾಗುವ ವ್ಯಕ್ತಿಗಳ ಕುಟುಂಬದ ಸದಸ್ಯರ ಮೇಲೆ ಎಫ್‌ಐಆರ್ ದಾಖಲಿಸಲು ಅವಕಾಶ ನೀಡುವ ಮೂಲಕ ಮತಾಂತರಗೊಂಡವರಿಗೆ ಕಿರುಕುಳ ನೀಡಲು ಕಾಲ್ಪನಿಕವಾದ ಹೊಸ ಸಾಧನವೊಂದನ್ನು ಒದಗಿಸುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.