ಸನ್ಮಾರ್ಗ ವಾರ್ತೆ-
ನವದೆಹಲಿ; ಸೆ.9- ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಚುನಾವಣೆಯಲ್ಲಿ ವೆಲ್ಫೇರ್ ಪಾರ್ಟಿಯ ವಿದ್ಯಾರ್ಥಿ ವಿಭಾಗವಾದ ಫ್ರೆಟರ್ನಿಟಿಯು ಮೊದಲ ಗೆಲುವು ದಾಖಲಿಸಿದೆ. ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ ಅಸೋಸಿಯೇಶನ್ (BAPSA)ನ ಬೆಂಬಲದೊಂದಿಗೆ ಫ್ರೆಟರ್ನಿಟಿಯ ಅಭ್ಯರ್ಥಿಯಾಗಿ ಭಾಷಾ ವಿಭಾಗದಲ್ಲಿ ವಿದ್ಯಾರ್ಥಿ ಯೂನಿಯನ್ ಗೆ ಸ್ಪರ್ಧಿಸಿದ್ದ ಅಫ್ರೀನ್ ಫಾತಿಮಾ ಜಯಗಳಿಸಿದ್ದಾರೆ. ಅದೇವೇಳೆ, BAPSAದ ಬೆಂಬಲದೊಂದಿಗೆ ಕಾರ್ಯದರ್ಶಿ ಸ್ಥಾನಕ್ಕಾಗಿ ಸ್ಪರ್ದಿಸಿದ್ದ ಫ್ರಟೆರ್ನಿಟಿ ಅಭ್ಯರ್ಥಿ ವಸೀಮ್ ಅಹ್ಮದ್ 1232 ಮತಗಳನ್ನು ಗಳಿಸುವ ಮೂಲಕ 3 ನೇ ಸ್ಥಾನ ಪಡೆದಿದ್ದಾರೆ. BAPSA ಮತ್ತು ಫ್ರಟೆರ್ನಿಟಿಯು ಈ ವಿದ್ಯಾರ್ಥಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದುವು. ಅಫ್ರೀನ್ ಫಾತಿಮಾ ಅವರು ವೆಲ್ಫೇರ್ ಪಾರ್ಟಿಯ ಉತ್ತರಪ್ರದೇಶದ ರಾಜ್ಯ ಕಾರ್ಯದರ್ಶಿ ಜಾವೇದ್ ಮೊಹಮ್ಮದ್ ಅವರ ಪುತ್ರಿಯಾಗಿದ್ದಾರೆ.
ಇದೇವೇಳೆ, ಜೆಎನ್ ಯು ವಿದ್ಯಾರ್ಥಿ ಚುನಾವಣೆಯಲ್ಲಿ ಎಡರಂಗವು ಪ್ರಾಬಲ್ಯ ಸ್ಥಾಪಿಸಿದೆ. ಆದರೆ, ಚುನಾವಣಾ ಫಲಿತಾಂಶವನ್ನು ತಡೆಹಿಡಿಯುವಂತೆ ದೆಹಲಿ ಹೈಕೋರ್ಟ್ ಹೊರಡಿಸಿರುವುದರಿಂದ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಲಾಗಿಲ್ಲ. ಜೆಎನ್ ಯು ಚುನಾವಣಾ ಸಮಿತಿಯು ಲಿಂಗ್ದೋ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪದೊಂದಿಗೆ ದೆಹಲಿ ಹೈಕೋರ್ಟಿಗೆ ಕೆಲವರು ದೂರು ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದ್ದು, ಈ ಬಗ್ಗೆ ವಿಚಾರಣೆ ನಡೆಯಬೇಕಾಗಿರುವುದರಿಂದ ಸೆ. 17 ರ ನಂತರ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುವುದು. ಈಗಾಗಲೇ, ಸೀಲ್ ಮಾಡಲಾದ ಕವರ್ ನಲ್ಲಿ ಚುನಾವಣಾ ಫಲಿತಾಂಶವನ್ನು ಇರಿಸಿ ಚುನಾವಣಾ ಸಮಿತಿಯು ಕೋರ್ಟ್ ಸೂಚನೆಯಂತೆ ವಿದ್ಯಾರ್ಥಿ ಡೀನ್ ಗೆ ಹಸ್ತಾ೦ತರಿಸಿದೆ.

ಈ ನಡುವೆ ಚುನಾವಣಾ ಫಲಿತಾಂಶ ಲಭ್ಯವಾಗಿದ್ದು,ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಎಡರಂಗದ ಐಶ್ ಘೋಷ್ ಅವರು 2313 ಮತಗಳನ್ನು ಪಡೆದಿದ್ದು, ABVP ಯ ಅಭ್ಯರ್ಥಿ ಮನೀಶ್ ಜಂಗಿದ್ ಗಿಂತ 185 ಮತಗಳನ್ನು ಹೆಚ್ಚು ಪಡೆದು ವಿಜಯಿಯಾಗಿದ್ದಾರೆ. ಮನೀಶ್ ಜಂಗಿದ್ ಒಟ್ಟು 1128 ಮತಗಳನ್ನು ಪಡೆದಿದ್ದಾರೆ. ಇದೇವೇಳೆ, BAPSA ಮತ್ತು ಫ್ರೆಟರ್ನಿಟಿ ಮೈತ್ರಿಕೂಟದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಜಿತೇಂದ್ರ ಸುನ ಅವರು 1122 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಉಪಾಧ್ಯಕ್ಷ ಹುದ್ದೆಯೂ ಎಡರಂಗದ ಪಾಲಾಗಿದ್ದು, ಸಾಕೇತ್ ಮೂನ್ ಅವರು 3365 ಮತಗಳನ್ನು ಪಡೆದಿದ್ದಾರೆ ಮತ್ತು ABVP ಯ ಶ್ರುತಿ ಅಗ್ನಿಹೋತ್ರಿ ಅವರು 1335 ಮತ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಡರಂಗದ ಸತೀಶ್ ಯಾದವ್ 2518 ಮತಗಳನ್ನು ಪಡೆದು ಜಯಶಾಲಿಯಾದರೆ, ABVP ಅಭ್ಯರ್ಥಿ ಶಬ್ರೀಶ್ ಅವರು 1355 ಮತಗಳನ್ನು ಪಡೆದಿದ್ದಾರೆ. ಜೊತೆ ಕಾರ್ಯದರ್ಶಿ ಹುದ್ದೆಯೂ ಎಡರಂಗದ ಪಾಲಾಗಿದ್ದು, ಮೊಹಮ್ಮದ್ ದಾನಿಶ್ ಅವರು 3295 ಮತಗಳನ್ನು ಪಡೆದು ಜಯಗಳಿಸಿದ್ದಾರೆ.












