ಸನ್ಮಾರ್ಗ ವಾರ್ತೆ
✍️ಅಶೀರುದ್ದೀನ್ ಆಲಿಯಾ
ಜನ ಸೇವಾ ರಂಗದಲ್ಲಿ ಸ್ಥಿರ ಪರಿಚಿತರಾಗಿದ್ದ ಕೆ.ಎಂ ನಮ್ಮೆಲ್ಲರ ಪ್ರೀತಿಯ ದಿವಂಗತ ಕೆ. ಮುಹಮ್ಮದ್ ರವರ ಪರಿಚಯವಾಗಿದ್ದು 2013 ರಲ್ಲಿ ಅದು #sio ನಡೆಸಿಕೊಡುವ ವಾರದ ಸಭೆಯಲ್ಲಿ.
ಕುರ್ ಆನನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವವರು ಕರ್ನಾಟಕದಲ್ಲಿ ಯಾರು ಇರಲಿಕ್ಕಿಲ್ಲ ಅದೇನಿದ್ದರೂ ಕೇರಳಿಗರ ಸೊತ್ತು ಎಂಬ ಪೂರ್ವಾಗ್ರಹ ನನ್ನಲ್ಲಿತ್ತು. ಸಾಧಾರಣವಾಗಿ ವಾರದ ಸಭೆಗಳನ್ನು ಅರ್ಧದಲ್ಲಿ ತೊರೆಯುತ್ತಿದ್ದ ನಾನು ಅಂದು ಕೊನೆಯವರೆಗೂ ಅವರ ಕುರ್ ಆನ್ ಕ್ಲಾಸನ್ನು ಪೂರ್ತಿ ಆಲಿಸಿ ಪ್ರಶ್ನೋತ್ತರಗಳಲ್ಲಿ ಕೂಡಾ ಭಾಗವಹಿಸಿದ್ದೆ.
ಅಪಾರವಾದ ಜ್ಞಾನ ಭಂಡಾರದಿಂದ ಕೂಡಿದ ತರಗತಿಯಾಗಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮಳೆಯಾಳಂ, ಬ್ಯಾರಿ, ತುಳು ಭಾಷೆಗಳ ಅರಿವು ಮತ್ತು ಸಾಮಾಜಿಕ ಕಳಕಳಿ ತರಗತಿಯುದ್ದಕ್ಕೂ ಪ್ರಸ್ತಾವನೆಗೊಳ್ಳುತ್ತಿತ್ತು.
ಆಂದೋಲನ, ಸಾಮರಸ್ಯ, ಶಿಕ್ಷಣ, ಸಮಾಜ ಸೇವೆ, ರಾಜಕೀಯ ಇತ್ಯಾದಿ ವಿಷಯಗಳಲ್ಲಿ ಹೊಸತನ ಹುಡುಕುವ ಅನೇಕ ಚರ್ಚೆಗಳು ನಮ್ಮ ನಡುವೆ ನಿರಂತರ ನಡೆಯುತ್ತಿತ್ತು. ಕೆಲವು ಚರ್ಚಾ ಕೂಟಗಳಲ್ಲಿ ವೇದಿಕೆ ಹಂಚಿಕೊಂಡಿದ್ದೆವು.
ನಾನು #sioullal ಘಟಕದ ಅಧ್ಯಕ್ಷನಾಗಿದ್ದ ಎರಡು ಅವಧಿಯಲ್ಲೂ ಅವರಿಂದ ಅನೇಕ ಪ್ರಯೋಜನ ಪಡೆದಿದ್ದೆ. ಈ ಕಾರಣದಿಂದ ನಮ್ಮ ನಡುವೆ ಆಳವಾದ ವೈಚಾರಿಕ ಸಂಬಂಧ ಬೆಳೆದಿತ್ತು. ಅದು ಅವರ ಕುಟುಂಬದೊಂದಿಗೆ ನನ್ನನ್ನು ಜೋಡಿಸುವಷ್ಟು ಮುಂದುವರಿಯಿತು. ಅಲ್ ಹಮ್ದು ಲಿಲ್ಲಾಹ್! ಮಂಚಿಲದ ಬಾವಾ ಕಾಟೇಜ್ ನೊಳಗೆ ನಾನೂ ಸೇರಿಕೊಂಡೆ.
2020ರ ನವೆಂಬರ್ 23 ರ ರಾತ್ರಿ ನಾವು ಒಟ್ಟಿಗೆ ಊಟ ಮಾಡಿ ಸುಮಾರು ಒಂದು ತಾಸುಗಿಂತ ಹೆಚ್ಚು ಸಮಯ ಮತ್ತೆ ಚರ್ಚಿಸಿದ್ದೆವು. ಆದರೆ, ಅದು ಲಾಸ್ಟ್ ಸಪ್ಪರ್ ಆಗಬಹುದೆಂದು ನಾನು ಊಹಿಸಿರಲಿಲ್ಲ. 26 ರಂದು ಬೆಳಿಗ್ಗೆ ಅವರ ಮರಣ ವಾರ್ತೆ ನಮ್ಮನ್ನು ಆಘಾತಗೊಳಿಸಿತ್ತು. ಅವರ ಇಲ್ಲದಿರುವಿಕೆ ಅರಗಿಸಿಕೊಳ್ಳಲಾಗಲಿಲ್ಲ.
ಆಂದೋಲನಕ್ಕಾಗಿ ಸಂಪೂರ್ಣ ತೊಡಗಿಸಿಕೊಂಡ ವ್ಯಕ್ತಿ. ಶಿಕ್ಷಣ ಮತ್ತು ಸೌಹಾರ್ದತೆಗಾಗಿ ಹೆಚ್ಚು ಒತ್ತುಕೊಟ್ಟವರು. ಹಿರಾ ಕಾಲೇಜಿನ ಕಂಬಗಳು ಅವರ ಶ್ರಮವನ್ನು ನಿತ್ಯ ಸ್ಮರಿಸುತ್ತದೆ. ಅವರ ಭಾಷಣಗಳು, ವಿಚಾರಗಳು ಕೇವಲ ಆಲಂಕಾರಿಕ ಪದಗಳ ಜೋಡನೆಯಾಗಿರಲಿಲ್ಲ. ಹೃದಯಕ್ಕೆ ನಾಟುವಂತೆ ಮಾರ್ಮಿಕವಾಗಿತ್ತು.
ಹೃದಯದೊಳಗೆ ನೋವುಗಳನ್ನು ಬಚ್ಚಿಟ್ಟು ಸಮಾಜಕ್ಕೆ ನಗೆಯನ್ನು ಚೆಲ್ಲುತ್ತಿದ್ದರು. ಅಹಂ ಅಲ್ಪವೂ ಇಲ್ಲದಿರುವುದೇ ಅವರ ದೊಡ್ಡ ಗುಣ. ಅಂತಹ ಅಪರೂಪದ ವ್ಯಕ್ತಿತ್ವಗಳನ್ನು ನಿರಂತರ ನೆನಪಿಸುವುದರಿಂದ ನಮ್ಮಲ್ಲಿ ಆತ್ಮ ಸಂಸ್ಕರಣೆ ಉಂಟಾಗುತ್ತದೆ ಎಂಬುವುದು ನಿಜ.
ನನ್ನ ಮಗನಿಗೆ ಅವರ ಹೆಸರನ್ನು ಗೌರವಾರ್ಥವಾಗಿ ಸೂಚಿಸಿದ್ದೇನೆ. Mohammed Zaroon Asheer ಅವನ ಪೂರ್ತಿ ಹೆಸರು. ಸಾಮಾಜಿಕ ಕಳಕಳಿ ಮತ್ತು ವೈಚಾರಿಕವಾಗಿ ಬೆಳೆಯಲಿ ಎಂಬ ಹಾರೈಕೆ.
ಕೊಟೆಕ್ಕಾರ್ ಮುಹಮ್ಮದ್ ಎಂಬ ಕೆ.ಎಂ ನಮ್ಮನ್ನಗಲಿ ಇಂದಿಗೆ 3 ವರ್ಷ ಒಂದು ನೆನಪು. ಅವರ ಬರ್ಝಕೀ ಜೀವ ಅಲ್ಲಾಹು ಯಶಸ್ಸುಗೊಳಿಸಲಿ ಎಂಬ ಪ್ರಾರ್ಥನೆ… ಆಮೀನ್












