ಕಾಶ್ಮೀರದಲ್ಲಿ ಜಮಾಅತ್ ನಾಯಕರ ಬಂಧನ: ಯಾವುದೇ ಆಶಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ- ಮೆಹಬೂಬಾ ಮುಫ್ತಿ ಟ್ವೀಟ್

0
769

ಶ್ರೀನಗರ: ಪುಲ್ವಾಮ ಭಯೋತ್ಪಾದನ ದಾಳಿಯ ಬೆನ್ನಿಗೆ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ನಾಯಕ ಯಾಸಿನ್ ಮಲಿಕ್, ಕಾಶ್ಮೀರದ ಜಮಾಅತ್ ಇಸ್ಲಾಮೀ ಅಮೀರ್ ಡಾ. ಅಬ್ದುಲ್ ಹಾಮಿದ್ ಫಯಾಝ್ ಸಹಿತ ಹಲವು ನಾಯಕರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಮಧ್ಯ ರಾತ್ರೆಯಲ್ಲಿ ಘಟನೆ ನಡೆದಿದೆ.

ಉತ್ತರ-ದಕ್ಷಿಣ- ಮಧ್ಯ ಕಾಶ್ಮೀರದಿಂದ ಜಮಾಅತೆ ಇಸ್ಲಾಮಿಗೆ ಸಂಬಂಧಿಸಿದ 24 ಮಂದಿಯನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಪೊಲೀಸರು ಪ್ರತಿಕ್ರಿಯೆ ನೀಡಿಲ್ಲ. ಆದರೆ ವಲಯದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ನಡೆಯುತ್ತಿದೆ ಎಂದು ಕಾಶ್ಮೀರ ಜಮಾಅತೆ ಇಸ್ಲಾಮೀ ಪ್ರತಿಕ್ರಿಯಿಸಿದೆ. ಶುಕ್ರವಾರ ರಾತ್ರೆ ಪೊಲೀಸರು ಮತ್ತು ಇತರ ಅಧಿಕಾರಿಗಳು ವ್ಯಾಪಕ ದಾಳಿ ನಡೆಸಿದರು. ಸಂಘಟನೆಯ ಡಝನ್‍ಗಟ್ಟಲೆ ರಾಜ್ಯ, ಜಿಲ್ಲಾ ನಾಯಕರನ್ನು ಬಂಧಿಸಲಾಗಿದೆ.

ಡಾ. ಅಬ್ದುಲ್ ಹಾಮಿದ್ ಫಯಾಝ್‍ರಲ್ಲದೆ ಸಂಘನೆಯ ವಕ್ತಾರ ನ್ಯಾಯವಾದಿ ಝಾಹಿದ್ ಅಲಿ, ಮಾಜಿ ಪ್ರಧಾನ ಕಾರ್ಯದರ್ಶಿ ಗುಲಾಂ ಕಾದಿರ್ ಲೋನ್ ರನ್ನು ಕೂಡ ಬಂಧಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಕಾಶ್ಮೀರ ಹೇಳಿಕೆಯಲ್ಲಿ ತಿಳಿಸಿದೆ.

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಪೊಲೀಸರ ಕ್ರಮಕ್ಕಾಗಿ ಕೇಂದ್ರ ಸರಕಾರವನ್ನು ಟೀಕಿಸಿದರು. ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಹುರಿಯತ್ ಮತ್ತು ಜಮಾಅತ್ ನಾಯಕರು ಬಂಧಿಸಲಾಗಿದ್ದು ಇಂತಹ ಏಕ ಪಕ್ಷೀಯ ಕ್ರಮ ಯಾಕೆಂದು ಗೊತ್ತಾಗಿಲ್ಲ. ಇದು ಕಾಶ್ಮೀರದ ಸ್ಥಿತಿ ಇನ್ನಷ್ಟು ಕೆಡಲು ಸಹಾಯಕವಾಗಬಹುದು . ಇವರ ಬಂಧನಕ್ಕೆ ಸಮರ್ಥನೆಗಳೇನಿದೆ? ವ್ಯಕ್ತಿಯನ್ನು ಜೈಲಿಗೆ ಹಾಕಬಹುದು. ಆದರೆ, ಯಾವುದೇ ಆಶಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ ಎಂದು ಮುಫ್ತಿ ಟ್ವೀಟ್ ಮಾಡಿದರು.