ಪ್ರಧಾನಿ ಮೋದಿಯವರು ಮನ್ ಕಿ ಬಾತ್ ನಲ್ಲಿ ಹೇಳಿದ ಕಾಮೇಗೌಡರು ಯಾರು? ಓದಿ, ಕುತೂಹಲಕಾರೀ ಸ್ಟೋರಿ

0
489

ಸನ್ಮಾರ್ಗ ವಾರ್ತೆ

ರಾಜೇಂದ್ರ ಭಟ್ ಕೆ.

ನಮ್ಮ ದೇಶದ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಉಲ್ಲೇಖ ಮಾಡುವ ಮೊದಲು ಹೆಚ್ಚಿನವರಿಗೆ ಅವರು ಯಾರು ಅಂತ ಗೊತ್ತಿರಲಿಲ್ಲ. He is really GREAT and the country must feel PROUD of him!

ಹೆಸರು ಕಾಮೇಗೌಡ. ಅಂದಾಜು ವಯಸ್ಸು 84. ಊರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾ.ನ ದಾಸನ ದೊಡ್ಡಿ. ಶಾಲೆಗೆ ಹೋದದ್ದೇ ಇಲ್ಲ. ಊರಲ್ಲಿ ಎರಡು ಎಕರೆ ಜಮೀನು ಇದೆ. ಒಂದು ಗುಡಿಸಲಿನ ಹಾಗೆ ಇರುವ ಸಣ್ಣ ಮನೆ ಇದೆ. ಐದನೇ ವರ್ಷದಿಂದ ಕುರಿ ಕಾಯುವ ಕಾಯಕ. ಇದಿಷ್ಟು ಅವರ ಹಿನ್ನೆಲೆ!

ಅವರ ಊರಿನ ತೆಕ್ಕೆಯಲ್ಲಿ ಇತ್ತು ‘ಕುಂದಿನಿ ಬೆಟ್ಟ’. ಅವರು ಕುರಿ ಮೇಯಿಸಲು ದಿನವೂ ಅದೇ ಬೆಟ್ಟಕ್ಕೆ ಹೋಗುವವರು. ಆ ಬೆಟ್ಟದ ಮೇಲೆ ಎಲ್ಲಿಯೂ ನೀರಿನ ಆಶ್ರಯ ಇರಲಿಲ್ಲ. ಮಳೆ ಸುರಿದರೂ ನೀರು ಹರಿದು ಹೋಗುತ್ತಿತ್ತು. ಪ್ರಾಣಿ, ಪಕ್ಷಿಗಳು ನೀರಿಗೆ ತತ್ವಾರ ಪಡುವುದನ್ನು ನೋಡಿ ದುಃಖ ಪಡುತ್ತಿದ್ದರು. ತೀವ್ರ ಬೇಸಗೆ ಬಂದರೆ ಪ್ರಾಣಿಗಳಿಗೆ ನೀರು ಸಿಗದೆ ಆಕ್ರಂದನ ಮಾಡುವುದು ಅವರ ಗಮನಕ್ಕೆ ಬಂದಿತು. ‘ನಾನೇನು ಮಾಡಬಹುದು?’ ಎಂದವರು ಯೋಚನೆ ಮಾಡಿದರು. ಸರಕಾರಕ್ಕೆ, ಜನ ಪ್ರತಿನಿಧಿಗಳಿಗೆ ಅರ್ಜಿ ಹಾಕುತ್ತ ಕಾದು ಕುಳಿತುಕೊಳ್ಳಲಿಲ್ಲ.

ಒಂದೆರಡು ಕುರಿಗಳನ್ನು ಮಾರಿ ಕೆರೆ ತೋಡುವ ಸಾಮಗ್ರಿ ಖರೀದಿ ಮಾಡಿದರು. ಒಂದು ದಿನ ತಾವೊಬ್ಬರೇ ಕೆರೆಯನ್ನು ತೋಡಲು ಶುರು ಮಾಡಿದರು. ಬೆಳಿಗ್ಗೆ ಐದು ಘಂಟೆಗೆ ಬುತ್ತಿ ಕಟ್ಟಿಕೊಂಡು, ಹೆಗಲ ಮೇಲೆ ಕಂಬಳಿ ಹೊದ್ದು ಕೊಂಡು ಹೊರಟು ಬೆಟ್ಟಕ್ಕೆ ಬರುವವರು. ಬೆಳಿಗ್ಗೆ 5ರಿಂದ 9 ಕೆರೆ ತೋಡುವ ಕಾಯಕ. ನಂತರ ಸಂಜೆ 7ರ ವರೆಗೆ ಕುರಿ ಮೇಯಿಸುವ ಕೆಲಸ. ಬೇಸಗೆ, ಮಳೆ, ಚಳಿ, ಗಾಳಿ ಯಾವುದೂ ಅವರಿಗೆ ಅಡ್ಡಿ ಮಾಡಲಿಲ್ಲ. ಒಂದು ದಿನವೂ ರಜೆ ಮಾಡಲಿಲ್ಲ.

ಊರಿನ ಜನಗಳು ಆರಂಭದಲ್ಲಿ ಅವರನ್ನು ‘ಹುಚ್ಚ’ ಎಂದರು. ಮನೆಯವರು ಅವರನ್ನು ನಿಷ್ಪ್ರಯೋಜಕ ಎಂದು ಬೈದರು! ಸುಮ್ಮನೆ ದುಡ್ಡು ಖರ್ಚು ಎಂದರು. ಆದರೆ ಅದಕ್ಕೆಲ್ಲ ಗೌಡರದು ಜಾಣ ಕಿವುಡು!

ಮೊದಲ ಬಾರಿ ಕೆರೆಯಲ್ಲಿ ಶುದ್ಧವಾದ ತಿಳಿನೀರು ಬಂದಾಗ ಅವರ ಮುಖದಲ್ಲಿ ಝಗ್ ಅಂತ ಬೆಳಕು! ಯುರೇಕಾ ಫೀಲಿಂಗ್! ಅದರ ನೀರು ಕುಡಿದು ಪುಟ್ಟ ಮಗುವಾದರು ಗೌಡರು. ಅಲ್ಲಿಂದ ಅವರ ಯಶಸ್ಸಿನ ಯಾತ್ರೆ ನಿಲ್ಲಲೇ ಇಲ್ಲ. ಕಳೆದ 42 ವರ್ಷಗಳಲ್ಲಿ ಕಾಮೆಗೌಡರು ಹದಿನಾರು ಕೆರೆಗಳನ್ನು ತೋಡಿ ಮುಗಿಸಿದ್ದಾರೆ! ಎಲ್ಲಾ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ಸಮೃದ್ಧ ನೀರು ಇರುತ್ತದೆ. ಪ್ರಾಣಿ ಪಕ್ಷಿಗಳ ಆಕ್ರಂದನ ಈಗ ಕೇಳುತ್ತಿಲ್ಲ!

ಆರಂಭದಲ್ಲಿ ‘ಗೌಡರಿಗೆ ತಲೆ ಕೆಟ್ಟಿದೆ ‘ಎಂದ ಊರವರು ನಂತರ ಅವರ ಉತ್ಸಾಹವನ್ನು ನೋಡಿ ಖುಷಿ ಪಟ್ಟರು. ಅವರನ್ನು ‘ ಕೊಳದ ಅಣ್ಣ ‘ ಎಂದು ಕರೆದರು. ಬಿಡುವಿದ್ದಾಗ ಬಂದು ಶ್ರಮದಾನವನ್ನು ಮಾಡಿದರು. ಕೆಲವರು ಧನ ಸಹಾಯ ಮಾಡಿದರು. ಹತ್ತಾರು ಜನ ಸನ್ಮಾನ ಸಮಾರಂಭ ಮಾಡಿ ಬಹುಮಾನ ಕೊಟ್ಟರು. ಅದೆಲ್ಲ ದುಡ್ಡನ್ನು ಗೌಡರು ತಮ್ಮ ಮನೆಯ ಖರ್ಚಿಗೆ ಬಳಸದೇ ಪೈಸೆ ಪೈಸೆ ಕೂಡ ಕೆರೆಯನ್ನು ತೋಡುವ ಕಾಯಕಕ್ಕೆ ಸುರಿದಿದ್ದಾರೆ! ಕೆಲವು ಕಡೆ ಜೆಸಿಬಿ ಯಂತ್ರವನ್ನು ಉಪಯೋಗ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಈ ವರೆಗೆ 15 ಲಕ್ಷಕ್ಕಿಂತ ಹೆಚ್ಚು ದುಡ್ಡನ್ನು ಅವರು ಕೆರೆ ತೋಡುವ ಕೆಲಸದಲ್ಲಿ ಖರ್ಚು ಮಾಡಿದ್ದಾರೆ. ಅದರ ಫಲವಾಗಿ ಎಲ್ಲ 16 ಕೆರೆಗಳೂ ಗೌಡರ ದುಡಿಮೆಯನ್ನು ಸಾರುತ್ತ ಸಿಹಿ ನೀರಿನಿಂದ ತುಂಬಿ ನಿಂತಿವೆ!

ಕಾಮೇಗೌಡರು ಶಾಲೆಗೆ ಹೋಗದಿದ್ದರೂ ಒಬ್ಬ ಅದ್ಭುತ ಜಲ ವಿಜ್ಞಾನಿ! ಅವರು ತಮ್ಮ ಜೀವನದ ಅನುಭವದಿಂದ ನೀರಿನ ಒರತೆಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ.

“ಯುಗಾದಿ ಮತ್ತು ಶಿವರಾತ್ರಿ ನಡುವೆ ಭೂಮಿಯು ತೇವಾಂಶವನ್ನು ಹಿಡಿದಿಟ್ಟು ಕೊಳ್ಳುತ್ತದೆ. ಆಗ ಅಂತರಜಲದ ಒರತೆ ಪತ್ತೆ ಹಚ್ಚುವುದು ಸುಲಭ” ಎನ್ನುತ್ತಾರೆ. ಅವರು ತೋಡಿದ ಯಾವ ಕೆರೆಯೂ ಇದುವರೆಗೆ ಬರಡು ಆಗಿಲ್ಲ ಎನ್ನುವುದು ಗೌಡರ ಹೆಗ್ಗಳಿಕೆ! ಮೊದಲು ತೋಡಿದ ಎರಡು ಕೆರೆಗಳಿಗೆ ಅವರು ತಮ್ಮ ಮಕ್ಕಳಾದ ಪೂಜಾ ಮತ್ತು ಪೂರ್ವಿ ಅವರ ಹೆಸರು ಇಟ್ಟಿದ್ದಾರೆ. ನಂತರದ ಎಲ್ಲಾ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಮತ್ತು ಮರಿ ಮಕ್ಕಳ ಹೆಸರು ಇಟ್ಟಿದ್ದಾರೆ.

ಈಗ 84 ವರ್ಷ ಆಗಿದ್ದರೂ ಅವರ ಉತ್ಸಾಹ ಕುಂದಿಲ್ಲ. ದಿನಚರಿ ಬದಲಾಗಲಿಲ್ಲ. ದೃಷ್ಟಿ, ಮಾತು, ಆರೋಗ್ಯ, ನಡಿಗೆ, ತಾಕತ್ತು, ನೆನಪಿನ ಶಕ್ತಿ ಎಲ್ಲವೂ ಹಾಗೆ ಇವೆ! ‘ಪ್ರಧಾನಿಗಳು ನಿಮ್ಮ ಬಗ್ಗೆ ಉಲ್ಲೇಖ ಮಾಡಿದ್ದಾರಲ್ಲ ಗೌಡರೇ’ ಅಂದಾಗ ಅವರ ಮುಖದಲ್ಲಿ ಮಂದಹಾಸ ಮೂಡಿತ್ತು.

“ಮೋದಿ ಸಾಹೇಬರು ನನ್ನ ಬಗ್ಗೆ ಹೇಳಿದ್ದು ಖುಷಿ ಕೊಟ್ಟಿದೆ. ಭಾರತದಲ್ಲಿ ಹುಟ್ಟಿದ್ದು ಸಾರ್ಥಕ ಅನ್ನಿಸುತ್ತಿದೆ. ನಾನು ಸಾಯುವ ತನಕ ನನ್ನ ಕೆರೆ ತೋಡುವ ಕಾಯಕ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ.

ಗೌಡರು ಶಾಲೆಗೆ ಹೋಗದೆ ಇದ್ದದ್ದು ಒಳ್ಳೆಯದಾಯಿತು ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ಅವರು ಶಾಲೆಗೆ ಹೋಗಿದ್ದರೆ ಕೆರೆ ತೋಡುವ ನಿರ್ಧಾರವನ್ನು ಖಂಡಿತವಾಗಿ ಮಾಡುತ್ತಿರಲಿಲ್ಲ!

ಏನಿದ್ದರೂ ಕಾಮೇಗೌಡರ ಜಲ ತಪಸ್ಸಿಗೆ ಒಮ್ಮೆ ಜೈ ಹೇಳೋಣ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.