ಸನ್ಮಾರ್ಗ ವಾರ್ತೆ
ಬೆಂಗಳೂರು,ಸೆ.24: ಕರ್ನಾಟಕದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ 17 ಶಾಸಕರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ಬುಧವಾರ ವಿಚಾರಣೆ ನಡೆಸಲಿದೆ. ಅರ್ಜಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ಅಧ್ಯಕ್ಷ ಕುಮಾರ ಸ್ವಾಮಿ, ಸಿದ್ದರಾಮಯ್ಯರಿಗೆ ಸುಪ್ರೀಂಕೋರ್ಟು ನೋಟಿಸು ಜಾರಿ ಮಾಡಿದೆ. ಶಾಸಕರ ಅನರ್ಹತೆಯಿಂದ ತೆರವಾದ ಹದಿನೈದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅನುಮತಿ ನೀಡಬೇಕು ಅಥವಾ ಉಪಚುನಾವಣೆಯನ್ನು ಮುಂದೂಡಬೇಕೆಂದು ಇನ್ನೊಂದು ಅರ್ಜಿಯನ್ನು ಅತೃಪ್ತ ಶಾಸಕರು ಸೋಮವಾರ ಸಲ್ಲಿಸಿದ್ದರು. ಜಸ್ಟಿಸ್ ಎನ್‍ವಿ ರಮಣ, ಸಂಜೀವ್ ಖನ್ನ, ಕೃಷ್ಣ ಮಾರುತಿಯವರ ಸುಪ್ರೀಂಕೋರ್ಟು ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಅಕ್ಟೋಬರ್ 21ಕ್ಕೆ ನಡೆಯುವ ಉಪಚುನಾವಣೆ ಮುಂದೂಡಬೇಕು. ಇಲ್ಲದಿದ್ದರೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಶಾಸಕರಿಗಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದ್ದಾರೆ.
ಉಪಚುನಾವಣೆ ಮುಂದೂಡಲಾಗದು ಎಂದು ಚುನಾವಣಾ ಆಯೋಗಕ್ಕಾಗಿ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಕೋರ್ಟಿಗೆ ತಿಳಿಸಿದ್ದಾರೆ. ಅನರ್ಹತೆಯ ಕ್ರಮವನ್ನು ತೆಗೆದು ಹಾಕಲು ಆಯೋಗಕ್ಕೆ ಸಾಧ್ಯವಿಲ್ಲ. ಚುನಾವಣೆ ಸ್ಪರ್ಧಿಸದಂತೆ ಮಾಡಲು ಸ್ಪೀಕರ್‍ಗೂ ಸಾಧ್ಯವಿಲ್ಲ ಎಂದು ದ್ವಿವೇದಿ ಕೋರ್ಟಿನಲ್ಲಿ ಹೇಳಿದ್ದಾರೆ. ಚುನಾವಣಾ ಆಯೋಗದ ನಿಲುವು ಅಚ್ಚರಿದಾಯಕ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಅರ್ಜಿಗೆ ಅಭಿಪ್ರಾಯ ಸೂಚಿಸಲು ಹೆಚ್ಚು ಸಮಯವನ್ನು ಅವರು ಕೋರ್ಟಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.












