ಸನ್ಮಾರ್ಗ ವಾರ್ತೆ
ಮಂಗಳೂರು: ಕಾರುಣ್ಯ ಸೌಹಾರ್ದ ಸಹಕಾರಿ ನಿ. ಇದರ ತೃತೀಯ ಮಹಾಸಭೆಯು( 2019) ಇತ್ತೀಚಿಗೆ ಸಹಕಾರಿಯ ಅಧ್ಯಕ್ಷರಾದ ಮುಹಮ್ಮದ್ ಕುಂಞಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಳಮಟ್ಟದ, ಮಧ್ಯಮ ವರ್ಗದ ಜನರಿಗೆ ಸೇವೆಯನ್ನು ಮಾಡುವ ದೃಷ್ಟಿಯಲ್ಲಿ ಕಾರಣ್ಯ ಸೌಹಾರ್ದ ಕ್ರೆಡಿಟ್ ಸಹಕಾರಿಯನ್ನು ಹುಟ್ಟು ಹಾಕಲಾಗಿದೆ. ಇದು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಪ್ರತಿಯೊಬ್ಬ ಸದಸ್ಯರು ಪ್ರಯತ್ನಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಬಡ್ಡಿ ರಹಿತ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಚಿನ್ನಾಭರಣದ ಮೇಲೆ ನೀಡಲಾಗುವ ಸಾಲ ವ್ಯವಸ್ಥೆ, ಕನಿಷ್ಠ ಶುಲ್ಕ ವ್ಯವಸ್ಥೆಯು ಗಮನ ಸೆಳೆಯಿತು.
ಸರ್ವ ಸದಸ್ಯರ ಸಭೆಯ ನೋಟೀಸನ್ನು ನಿರ್ದೇಶಕರಾದ ಶೇಖ್ ಅನ್ವರ್ ಸಾಹೇಬರು ವಾಚಿಸಿದರು. ವಾರ್ಷಿಕ ವರದಿ ಮಂಡನೆಯನ್ನು ನಿರ್ದೇಶಕರಾದ ಸರ್ಫರಾಝ್ ನಿರ್ವಹಿಸಿದರು.2018-19 ಲೆಕ್ಕ ಪರಿಶೋಧಿತ ಆರ್ಥಿಕ ತಖ್ತೆಯನ್ನು ನಿರ್ದೇಶಕರಾದ ಕೆ.ಎಮ್.ಮುಶ್ತಾಕ್ರವರು ಮಂಡಿಸಿದರು. 2019-20 ರ ಮುಂಗಡ ಪತ್ರವನ್ನು (ಬಜೆಟ್) ನಿರ್ದೇಶಕರಾದ ಎ.ಇಸ್ಹಾಕ್ ಹಸನ್ ಮಂಡಿಸಿದರು.
ಉಪಾಧ್ಯಕ್ಷರಾದ ಜಾವೆದ್ ಅಖ್ತಾರ್ ಸಹಕಾರಿಯ ಠೇವಣಿ ಮತ್ತು ಚಿನ್ನದ ಈಡಿನ ಮೇಲಿನ ಸಾಲದ ನಿಯಮವನ್ನು ವಿವರಿಸಿ, ಸಭೆಯ ಅನುಮೋದನೆಯನ್ನು ಪಡೆದರು. ಕೆ.ಎಮ್ ಕಾಸಿಮ್ ರವರನ್ನು ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ನಿರ್ದೇಶಕ ಮುಹಮ್ಮದ್ ಸಾಲಿಹ್ ಉಪಸ್ಥಿತರಿದ್ದರು. ವ್ಯವಸ್ಥಾಪಕರಾದ ಕೆ.ಎಮ್ ಕಾಸಿಮ್ ರವರು ಅತಿಥಿಯನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.















