ಒಂದು ಟ್ವೀಟ್‌ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್‌ ಆದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ

0
208

ಸನ್ಮಾರ್ಗ ವಾರ್ತೆ

ಪುದುಚೇರಿ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ವಿಟರ್ ನಲ್ಲಿ ಹಂಚಿಕೊಂಡ ಅದೊಂದು ವಿಡಿಯೋಗಾಗಿ ಸಿಕ್ಕಾಪಟ್ಟೆ, ಟ್ರೋಲ್ ಗೆ ಒಳಗಾಗಿದ್ದಾರೆ.

‘ಸಮುದ್ರದಿಂದ ಮೇಲಕ್ಕೆ ಹಾರಿದ ಶಾರ್ಕ್ ಮೀನು ಹೆಲಿಕಾಪ್ಟರ್ ಮೇಲೆ ದಾಳಿ ಮಾಡುವ ಹಾಗೂ ಕೆಲವು ಜನರು ಬೋಟ್‌‌ನಲ್ಲಿ ಈ ದೃಶ್ಯವನ್ನು ಕಂಡು ಭಯಭೀತರಾಗುವ’ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಕಿರಣ್ ಬೇಡಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

“ವೀಡಿಯೊದ ಹಕ್ಕುಗಳನ್ನು ಪಡೆಯಲು ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ಈ ವಿಡಿಯೋಗಾಗಿ $1 ಮಿಲಿಯನ್ ಪಾವತಿಸಿದೆ ಎಂದು ವೀಡಿಯೊದಲ್ಲಿ ಶೀರ್ಷಿಕೆ ಹಾಕಲಾಗಿದೆ” ಇದನ್ನು ಕಿರಣ್ ಬೇಡಿ ಅವರು ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಇದು 2017ರ ಚಲನಚಿತ್ರ 5 ಹಡೆಡ್ ಶಾರ್ಕ್ ಅಟ್ಯಾಕ್ ನ ದೃಶ್ಯವಾಗಿದೆ. ಈ ಪೋಸ್ಟ್ ಗೆ ಟ್ವಿಟರ್ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವೈರಲ್ ವಿಡಿಯೊ ಸುಮಾರು ಎರಡು ಮೂರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು 2020ರಲ್ಲಿ ಆಲ್ಟ್ ನ್ಯೂಸ್ ಇದನ್ನು ಫ್ಯಾಕ್ಟ್‌ಚೆಕ್ ಮಾಡಿದೆ. ಈ ವಿಡಿಯೋವನ್ನು ನಿಜವೆಂದು ನಂಬಿ ಕಿರಣ್‌ ಬೇಡಿಯು “ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಒಂದು ಮಿಲಿಯನ್ ಡಾಲರ್ ಪಾವತಿಸಿದೆ” ಎಂಬ ಸುಳ್ಳನ್ನು ಪರಿಶೀಲಿಸದೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

“ನೀವು ಲಕ್ಷಗಟ್ಟಲೆ ಐಎಎಸ್‌/ಐಪಿಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದೀರಿ. ನಿಮ್ಮಂಥವರು ಇಂತಹ ವೀಡಿಯೋಗಳನ್ನು ಹಂಚಿ ಟ್ವೀಟ್ ಮಾಡಬಹುದೆ’ ಎಂದು ಪ್ರಶ್ನಿಸಿ, ವ್ಯಂಗ್ಯವಾಡಿದ್ದಾರೆ.

“ಕಿರಣ್ ಬೇಡಿಯವರು ಕೂಡ ವಾಟ್ನಾಪ್ ವಿಶ್ವವಿದ್ಯಾನಿಲಯದ ಪದವೀಧರರಾಗಬಹುದು ಎಂದು ಈಗ ನಾನು ಅರ್ಥಮಾಡಿಕೊಂಡಿದ್ದೇವೆ’ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

ತಮ್ಮ ವಿಡಿಯೋಗೆ ಕಟುವಾದ ಟೀಕೆ ಮತ್ತು ಟ್ರೋಲ್ ಆಗುವುದನ್ನು ಗಮನಿಸಿದ ನಂತರ ಕಿರಣ್ ಬೇಡಿ ಅದೇ ವೀಡಿಯೊವನ್ನು ಮತ್ತೊಂದು ಟ್ವೀಟ್‌ನಲ್ಲಿ ಮತ್ತೊಮ್ಮೆ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.

“ಈ ಧೈರ್ಯಶಾಲಿ ವಿಡಿಯೋದ ಮೂಲವು ಮುಕ್ತವಾಗಿದೆ ಮತ್ತು ಪರಿಶೀಲನೆಗೆ ಒಳಪಡಿಸಲು ಹಾಕಿದ್ದೇನೆ. ಅಧಿಕೃತ ಮತ್ತು ನಿಜವಾದ ಮೂಲ ಯಾವುದಾದರೂ ಅದು ಭಯಾನಕವಾಗಿದೆ. ಇದನ್ನು ಸೃಷ್ಟಿಸಿರುವುದು ಪ್ರಶಂಸನೀಯ ದಯವಿಟ್ಟು ಈ ಎಚ್ಚರಿಕೆಯ ವಿರುದ್ಧ ಅದನ್ನು ವೀಕ್ಷಿಸಿ” ಎಂದು ವಿವರಣೆ ಹಾಕಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ತನ್ನ ಟ್ವಿಟರ್ ಪೋಸ್ಟ್ ಗಾಗಿ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ.

2020ರ ಜನವರಿಯಲ್ಲಿ ನಕಲಿ ವೀಡಿಯೋವೊಂದನ್ನು ಹಂಚಿಕೊಂಡು, ಅದು ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ರೆಕಾರ್ಡ್ ಮಾಡಿದ ಸೂರ್ಯನ ಧ್ವನಿಯಲ್ಲಿ “ಓಂ” ಜಪ ಕೇಳಿಬರುತ್ತಿವೆ ಎಂದು ಹೇಳಿಕೊಂಡಿದ್ದರು.

2017ರಲ್ಲಿ, “97 ನೇ ವಯಸ್ಸಿನಲ್ಲಿ ದೀಪಾವಳಿಯ ಸ್ಪೂರ್ತಿ” ಎಂಬ ಶೀರ್ಷಿಕೆಯೊಂದಿಗೆ ವಯಸ್ಸಾದ ಮಹಿಳೆಯೊಬ್ಬರು ನೃತ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಪ್ರಧಾನಿ ನರೇಂದ್ರಮೋದಿಯವರ ತಾಯಿ ಹೀರಾಬೆನ್ ಮೋದಿ ತಮ ಮನೆಯಲ್ಲಿ ದೀಪಾವಳಿಯನ್ನು ಆಚರಿಸುತ್ತಿರುವ ಶೈಲಿ ಎಂದು ಟ್ವೀಟ್ ಮಾಡಿದ್ದರು. ತಪ್ಪು ತಿಳಿದ ನಂತರ ಕ್ಷಮೆ ಕೋರಿ, ಸರಿಪಡಿಸಿಕೊಂಡಿದ್ದರು.