ಸನ್ಮಾರ್ಗ ವಾರ್ತೆ
ಮಂಗಳೂರು, ಆಗಸ್ಟ್ 15: ಕುದ್ರೋಳಿಯ ಬ್ರೈಟ್ ಮೊಡೆಲ್ ಸ್ಕೂಲ್ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವು ವಿದ್ಯಾರ್ಥಿಗಳಾದ ಬಿಲಾಲ್ ರ ಕುರ್ ಆನ್ ಪಠಣ, ಇಮಾದ್ ಇಬ್ರಾಹೀಮ್ ರ ಅನುವಾದ ಹಾಗೂ ವಿದ್ಯಾರ್ಥಿನಿಯರು ಸುಶ್ರಾವ್ಯ ಪ್ರಾರ್ಥನಾ ಗೀತೆಯೊಂದಿಗೆ ಚಾಲನೆಗೊಂಡಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕವಿತಾ ಜಲೇಂದ್ರ ಅವರು ಗಣ್ಯ ಅತಿಥಿಗಳು, ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ರಿಫಾ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀ (RCCI) ಕರ್ನಾಟಕ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಜಬ್ಬಾರ್ ಫಯಾಜ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಪ್ರಮುಖ ಭಾಷಣ ಮಾಡುತ್ತಾ ನಾವು ಪರಸ್ಪರ ಕಚ್ಚಾಡುವವರಾಗಬಾರದು. ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುವವರಾಗಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೌಥ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್, ಕತರ್ ಇದರ ಅಧ್ಯಕ್ಷರಾದ ಇಮ್ರಾನ್ ಅಹ್ಮದ್ ಭಾವ, ಮಾಜಿ ಕಾರ್ಪೊರೇಟ್ ಗಳಾದ ಶಂಶುದ್ದೀನ್ ಹಾಗೂ ಅಬ್ದುಲ್ ಅಝೀಝ್ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುತ್ತಾ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ ಮುಖ್ಯ ಅತಿಥಿಗಳಿಗೆ ಶಾಲೆಯ ವತಿಯಿಂದ ಗೌರವ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ವಿದ್ಯಾರ್ಥಿ ಮುಹಮ್ಮದ್ ಹನೀಫ್ ರಿಫಾಝ್ ಭಾಷಣ ಮಾಡಿದರೆ, ಇನ್ನೋರ್ವ ವಿದ್ಯಾರ್ಥಿ ಮುಸಬ್ ಇಬ್ರಾಹೀಮ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಕೊಡುಗೆಗಳನ್ನು ಅರಬಿ ಭಾಷೆಯಲ್ಲಿ ವಿವರಿಸಿದರು.
ಬಳಿಕ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಭಿಕರನ್ನು ಮನರಂಜಿಸಿದರು.

ಕಾರ್ಯಕ್ರಮವನ್ನು ಕುಮಾರಿ ರಾಬಿಯತುಲ್ ಹೈಫಾ ಹಾಗೂ ರಾಬಿಯ ಝೋಯಾ ಅಚ್ಚುಕಟ್ಟಾಗಿ ಹಾಗೂ ಆಕರ್ಷಕವಾಗಿ ನೆರವೇರಿಸಿದರು.

ಕೊನೆಯಲ್ಲಿ ವಿದ್ಯಾರ್ಥಿನಿ ಕುಮಾರಿ ಆಯಿಷಾ ಶಿಝಾ ಸಿರೀನ್ ಧನ್ಯವಾದ ಅರ್ಪಿಸಿದರು.
ಶಾಲೆಯ ಉಪಾಧ್ಯಕ್ಷರಾದ ಆಸಿಫ್ ಹುಸೈನ್, ಕಾರ್ಯದರ್ಶಿ ಮುಹಮ್ಮದ್ ಸಲೀಮ್, ಕಚಾಂಚಿ ಮುತ್ತಲಿಬ್, ಶಾಲಾ ಸಂಚಾಲಕರಾದ ಯು.ಎನ್ ಹಂಝ, ಸಹ ಸಂಚಾಲಕ ಮುನವ್ವರ್ ಅಹ್ಮದ್, ಸದಸ್ಯರಾದ ಅಮೀರ್ ಸಿದ್ದೀಕ್, ಮಕ್ಬೂಲ್ ಅಹ್ಮದ್, ಮುಹಮ್ಮದ್ ಸಲ್ಮಾನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಶ್ರಫ್ ಹುಸೈನ್ ಹಾಗೂ ಸದಸ್ಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.





















