ಗೆಳೆಯನ ನೆಮ್ಮದಿಯನ್ನೇ ಕೆಡಿಸಿಬಿಟ್ಟ ಒಂದು ವಾಟ್ಸಾಪ್ ವೀಡಿಯೋ ಕಾಲ್

0
89

ಏ.ಕೆ. ಕುಕ್ಕಿಲ

ಹತ್ತಿರದ ಗೆಳೆಯರೊಬ್ಬರು ಹಂಚಿಕೊಂಡ  ಘಟನೆ ಇದು

ರಾತ್ರಿ ಸುಮಾರು 10 ಗಂಟೆ. ಮೊಬೈಲ್ ರಿಂಗಾಗುತ್ತದೆ. ಅವರಿನ್ನೂ ಮನೆಗೆ ತಲುಪಿರಲಿಲ್ಲ. ವೃತ್ತಿಯಲ್ಲಿ ಫೋಟೋಗ್ರಾಫರ್.  ಕಂಪ್ಯೂಟರ್ ತಂತ್ರಜ್ಞಾನದಲ್ಲೂ ಪರಿಣತರು. ಬೈಕ್ ನಿಲ್ಲಿಸಿ ಜೇಬಿನಿಂದ ಮೊಬೈಲ್ ಎತ್ತುತ್ತಾರೆ. ಅದು ವಾಟ್ಸಾಪ್  ವೀಡಿಯೋ ಕಾಲ್. ಕರೆ ಸ್ವೀಕರಿಸಬೇಕೋ ಬೇಡವೋ ಎಂಬ ಅನುಮಾನ ಅವರನ್ನು ಕಾಡುತ್ತದೆ. ಯಾಕೆಂದರೆ, ಅಪರಿಚಿತ  ವ್ಯಕ್ತಿಯ ಕರೆ. ಅವರು ಕರೆಯನ್ನು ನಿರ್ಲಕ್ಷಿಸುವ ನಿರ್ಧಾರ ಮಾಡುತ್ತಾರೆ ಮತ್ತು ಕರೆಯನ್ನು ತುಂಡರಿಸುತ್ತಾರೆ. ಆದರೆ,  ಮರಳಿ ಅದೇ ಸಂಖ್ಯೆಯಿಂದ  ವೀಡಿಯೋ ಕಾಲ್ ಬರುತ್ತದೆ. ಅವರು ತುಸು ಗೊಂದಲಕ್ಕೆ ಒಳಗಾಗುತ್ತಾರೆ. ಅಪರಿಚಿತ  ಅಂದ ಮಾತ್ರಕ್ಕೇ ಕರೆಯನ್ನು ತಿರಸ್ಕರಿಸುವುದು ಸರಿಯೇ ಎಂಬ ಪ್ರಶ್ನೆಯೊಂದು ಅವರೊಳಗೆ ಮೂಡುತ್ತದೆ. ಈ  ಹಿಂದೆಯೂ ಅಪರಿಚಿತ ಕರೆಯನ್ನು ಸ್ವೀಕರಿಸಿದ್ದಿದೆ. ವೃತ್ತಿಗೆ ಸಂಬಂಧಿಸಿ ಅಪರಿಚಿತ ಕರೆ ಸಹಜವೂ ಹೌದು. ಮದುವೆ,  ಸಾರ್ವಜನಿಕ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ವೃತ್ತಿ ತನ್ನದಾಗಿರುವುದರಿಂದ ಕರೆ  ಮಾಡಿದವರು ತನ್ನ ಗ್ರಾಹಕರೂ ಆಗಿರಬಹುದು ಎಂದು ಆಲೋಚಿಸುತ್ತಾರೆ. ಫೋಟೋಗ್ರಾಫ್‌ಗಾಗಿ ಆಹ್ವಾನಿಸಲು ಕರೆ  ಮಾಡಿರಬಾರದೇಕೆ ಎಂದೂ ಅಂದುಕೊಳ್ಳುತ್ತಾರೆ. ಅಲ್ಲದೇ, 

ತಾನು ಫೇಸ್‌ಬುಕ್‌ನಲ್ಲೂ ಇರುವುದರಿಂದ ಮತ್ತು ಅಲ್ಲಿ ತನ್ನ  ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿರುವುದರಿಂದ ಈ ಕರೆಯನ್ನು ಅನುಮಾನಿಸಬೇಕಿಲ್ಲ ಎಂಬ ನಿರ್ಧಾರಕ್ಕೂ  ಬರುತ್ತಾರೆ ಮತ್ತು ಕರೆ ಸ್ವೀಕರಿಸುತ್ತಾರೆ. ಹಲೋ ಹಲೋ ಅನ್ನುತ್ತಾರೆ. ಆ ಕಡೆಯಿಂದಲೂ ಹಲೋ ಹಲೋ ಅನ್ನುವ  ಪ್ರತಿಕ್ರಿಯೆಯೇ ಬರುತ್ತದೆ. ಮೊಬೈಲ್ ಸ್ಕ್ರೀನ್‌ನಲ್ಲಿ ಆ ಅಪರಿಚಿತ ವ್ಯಕ್ತಿಯ ಮುಖ ಕಾಣುತ್ತದೋ ಎಂದು ನೋಡುತ್ತಾರೆ.  ಇಲ್ಲ. ವಂಚಕರು ಇರಬಹುದೋ ಎಂದು ಶಂಕಿಸುತ್ತಾರೆ ಮತ್ತು ಕರೆಯನ್ನು ತುಂಡರಿಸುತ್ತಾರೆ. ಇನ್ನೇನು ಮೊಬೈಲನ್ನು  ಜೇಬಿಗೆ ಹಾಕಿ ಘಟನೆಯನ್ನು ಮರೆಯಬೇಕು ಅಂದುಕೊಳ್ಳುವಷ್ಟರಲ್ಲೇ  ಮತ್ತೆ ರಿಂಗುಣಿಸುತ್ತದೆ. ಮತ್ತೆ ಮೊಬೈಲ್  ಎತ್ತಿಕೊಳ್ಳುತ್ತಾರೆ. ನೋಡಿದರೆ,

ವಾಟ್ಸಾಪ್ ಕಾಲ್. ವೀಡಿಯೋ ಕಾಲ್ ಅಲ್ಲ. ಅವರು ಕರೆ ಸ್ವೀಕರಿಸುತ್ತಾರೆ. ಹಲೋ ಅನ್ನುತ್ತಾರೆ. ಅತ್ತ ಕಡೆಯಿಂದ ಗಂಡಸಿನ  ಧ್ವನಿ-

‘ನಿನ್ನ ವಾಟ್ಸಾಪ್‌ಗೆ ವೀಡಿಯೋ ಕಳಿಸಿದ್ದೇನೆ, ನೋಡು..’ ಎಂದು ಹೇಳಿ ಆ ವ್ಯಕ್ತಿ ಕರೆ ಸ್ಥಗಿತಗೊಳಿಸುತ್ತಾನೆ. ಆ ಧ್ವನಿಯಲ್ಲಿ  ನಾಜೂಕುತನ ಇಲ್ಲದಿರುವುದನ್ನು ಮತ್ತು ಆಜ್ಞೆ ರೂಪದ ಗಡಸುತನ ಇರುವುದನ್ನು ಗೆಳೆಯ ಗುರುತಿಸುತ್ತಾರೆ. ಏನೋ  ಹೇಗೆಯೋ ಎಂಬ ಕುತೂಹಲ ಮಿಶ್ರಿತ ಭಯ ಅವರನ್ನು ಆವರಿಸುತ್ತದೆ. ವಾಟ್ಸಾಪ್ ತೆರೆಯಬೇಕೋ ಬೇಡವೋ ಎಂಬ  ದಿಗಿಲೂ ಉಂಟಾಗುತ್ತದೆ. ಧೈರ್ಯ ಮಾಡಿ ವಾಟ್ಸಾಪ್ ತೆರೆಯುತ್ತಾರೆ ಮತ್ತು ಆ ವೀಡಿಯೋ ನೋಡುತ್ತಾರೆ. ಅಷ್ಟೇ.  ಅವರ ಕೈ ಅದುರತೊಡಗುತ್ತದೆ. ಎದೆ ಢವಢವ ಹೊಡೆದುಕೊಳ್ಳತೊಡಗುತ್ತದೆ. ನಿಂತ ನೆಲವೇ ಕುಸಿದ ಅನುಭವ. ತಾನೆ ಲ್ಲಿದ್ದೇನೆ ಎಂಬುದೇ ಮರೆತು ಹೋಗುತ್ತದೆ. ಅವರು ಅಕ್ಕ-ಪಕ್ಕ ನೋಡುತ್ತಾರೆ. ವಿರಳ ಜನಸಂದಣಿ. ಅವರು ಮತ್ತೊಮ್ಮೆ ಆ  ವೀಡಿಯೋ ನೋಡುತ್ತಾರೆ. ಮೈಯಿಡೀ ಕಂಪಿಸುತ್ತದೆ. ಹೌದು,
‘ಆ ವೀಡಿಯೋದಲ್ಲಿರುವ ವ್ಯಕ್ತಿ ನಾನೇ. ನನ್ನದೇ ಮುಖ. ನಗ್ನ ಹೆಣ್ಣಿನ ಜೊತೆ ತಾನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ವೀಡಿಯೋ.’ ಎಡಿಟಿಂಗ್ ಎಷ್ಟು ಚೆನ್ನಾಗಿ ಮಾಡಿದ್ದಾ ರೆಂದರೆ, ತಕ್ಷಣಕ್ಕೆ ಯಾರೂ ಅದನ್ನು ನಕಲಿ ಎಂದೇ  ಒಪ್ಪ ಲಾರರು. ತನ್ನದೇ ಮುಖ. ದೇಹವೂ ತನ್ನಂತೆಯೇ ಇದೆ. ಬಹುಶಃ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ತನ್ನ  ಫೋಟೋವನ್ನೋ ವೀಡಿಯೋವನ್ನೋ ಅವರು ದುರ್ಬಳಕೆ ಮಾಡಿಕೊಂಡಿರ ಬಹುದು ಎಂದು ಅವರಿಗೆ ಅನಿಸಿತು. ಏನು ಮಾಡೋದು? ತನಗೆ ಈ ವೀಡಿಯೋವನ್ನು ಕಳಿಸಿದವರ ಉದ್ದೇಶವೇನು? ಹಣಕ್ಕಾಗಿ ಒತ್ತಾಯಿಸುತ್ತಾರಾ? ಕೊಡದಿದ್ದರೆ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳಬಹುದಾ? ಹಾಗೇನೂ ಆದರೆ ತಾನು ಈವರೆಗೂ ಕಾಪಾಡಿಕೊಂಡು  ಬಂದ ಘನತೆ, ಗೌರವದ ಸ್ಥಿತಿ ಏನಾದೀತು.. ಎಂದೆಲ್ಲಾ ಆಲೋಚಿಸುತ್ತಿರುವಾಗಲೇ ಮತ್ತೆ ಮೊಬೈಲ್ ರಿಂಗುಣಿಸುತ್ತದೆ. ಈಗ  ಅವರ ಕೈ ಅಕ್ಷರಶಃ ನಡುಗುತ್ತಿತ್ತು. ಕರೆ ಸ್ವೀಕರಿಸಿದ ಕೂಡಲೇ ಅತ್ತ ಕಡೆಯಿಂದ ಅದೇ ಗಡಸು ಧ್ವನಿ. ಇವರಿಗೆ ಧ್ವನಿಯೇ  ಬರುವುದಿಲ್ಲ.

‘ವೀಡಿಯೋ ನೋಡಿದಿರಾ? ನಿಮ್ಮ ಗೆಳೆಯರಿಗೆ ಈ ವೀಡಿಯೋವನ್ನು ಕಳುಹಿಸಿಕೊಡಬಾರದು ಎಂದಾದರೆ ತಕ್ಷಣಕ್ಕೆ 25  ಸಾವಿರ ರೂಪಾಯಿಯನ್ನು ನೀಡಬೇಕು. ಅಕೌಂಟ್ ನಂಬರ್ ನಿನ್ನ ವಾಟ್ಸಾಪ್‌ಗೆ ಕಳುಹಿಸಿಕೊಟ್ಟಿದ್ದೇನೆ. ನಿನ್ನ ಹತ್ತಿರದ  ಗೆಳೆಯರ ಪಟ್ಟಿಯನ್ನು ನಾನು ಫೇಸ್‌ಬುಕ್‌ನಿಂದ ಸಂಗ್ರಹಿಸಿದ್ದೇನೆ. ಕ್ಲೋಸ್ ಫ್ರೆಂಡ್ಸ್ ಎಂದು ನೀವು ಮಾಡಿರುವ ಗ್ರೂಪ್ ನಿಂದ ನಿನ್ನ ಗೆಳೆಯರು ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಪಡೆದಿದ್ದೇನೆ. ತಕ್ಷಣಕ್ಕೆ ನಾನು ಹೇಳಿದಷ್ಟು ಹಣ ಹಾಕು.  ನಿರಾಕರಿಸಿದರೆ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತೇನೆ. ನಿನ್ನ ಮನೆ ನರಕವಾಗಬಾರದೆಂದಾದರೆ ನಾನು  ಹೇಳಿದಂತೆ ಮಾಡು..’ ಎಂದು ಆದೇಶದ ಧ್ವನಿಯಲ್ಲಿ ಆ ವ್ಯಕ್ತಿ ಹೇಳುತ್ತಾನೆ.

ಗೆಳೆಯರಿಗೆ ಮಾತೇ ಹೊರಡುವುದಿಲ್ಲ. ಹಣ ಕಳುಹಿಸುತ್ತೇನೆ ಅಥವಾ ಕಳುಹಿಸುವುದಿಲ್ಲ ಎಂದೂ ಹೇಳಲಾಗದಷ್ಟು  ಆಘಾತಕ್ಕೆ ಒಳಗಾಗುತ್ತಾರೆ. ಅಷ್ಟು ಹಣವನ್ನು ಸಂಗ್ರಹಿಸುವುದು ಹೇಗೆ ಎಂಬುದು ಒಂದು ಪ್ರಶ್ನೆಯಾದರೆ ಅವರು  ಹೇಳಿದಷ್ಟು ಹಣ ಕೊಟ್ಟರೂ ಪುನಃ ಕೇಳಲಾರನೆಂದು ನಂಬುವುದು ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ತನ್ನ ಪತ್ನಿ ಮತ್ತು  ಮಕ್ಕಳಿಗೆ ಈ ವೀಡಿಯೋ ಸಿಕ್ಕರೆ ಏನಾಗಬಹುದು? ಹೆತ್ತವರು ತನ್ನನ್ನು ಏನಂದುಕೊಂಡಾರು? ಗೆಳೆಯರು ಮತ್ತು  ಕುಟುಂಬ ತನ್ನನ್ನು ಹೇಗೆ ನಡೆಸಿಕೊಂಡೀತು? ತನ್ನ ವತ್ತಿಯ ಮೇಲೆ ಈ ವೀಡಿಯೋ ಹೇಗೆ ಪರಿಣಾಮ ಬೀರಬಹುದು?  ಆ ವೀಡಿಯೋದಲ್ಲಿರುವ ವ್ಯಕ್ತಿ ತಾನಲ್ಲ ಎಂದು ಹೇಳಿದರೆ ಮನೆಯವರು ನಂಬಿಯಾರೇ? ಗೆಳೆಯರು ನನ್ನ ಮೇಲೆ ವಿಶ್ವಾಸ  ತಾಳಿಯಾರೇ? ತನ್ನ ಸುತ್ತಮುತ್ತಲಿನವರೇ ತನ್ನ ಪ್ರಾಮಾಣಿಕತೆಯನ್ನು ಶಂಕಿಸಿಯಾರೇ?… ಎಂದೆಲ್ಲಾ ಅಂದುಕೊಂಡು   ಅವರು ನುಚ್ಚುನೂರಾಗುತ್ತಾರೆ. ಹೀಗಿರುತ್ತಾ ಪುನಃ ವಾಟ್ಸಾಪ್ ಕರೆ ಬರುತ್ತದೆ. ‘ಹಣ ಕಳುಹಿಸುತ್ತೀಯೋ ಇಲ್ಲ ನಿನ್ನ  ಗೆಳೆಯರೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲೋ..’ ಎಂದು ನೇರವಾಗಿಯೇ ಆ ವ್ಯಕ್ತಿ ಪ್ರಶ್ನಿಸುತ್ತಾನೆ. ಬೆದರಿಕೆಯ ಧ್ವನಿ.  ಗೆಳೆಯ ತುಸು ಧೈರ್ಯ ತಂದುಕೊಳ್ಳುತ್ತಾರೆ,

‘ನೀವು ಹೇಳಿದಷ್ಟು ಹಣ ತಕ್ಷಣಕ್ಕೆ ಹೊಂದಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಗೆಳೆಯರಿಂದ ಸಾಲ ಪಡೆದು  ಕೊಡಬೇಕಾದರೂ ತುಸು ಸಮಯ ಬೇಕು..’ ಎಂದು ಅವರು ಉತ್ತರಿಸುತ್ತಾರೆ. ಮಾತ್ರವಲ್ಲ, ತನ್ನ ಉತ್ತರದ ಬಗ್ಗೆ ಅವರಿಗೇ  ಅಚ್ಚರಿಯಾಗುತ್ತದೆ. ‘ತಾನು ಇಂಥ ಉತ್ತರ ಹೇಗೆ ಕೊಟ್ಟೆ’ ಎಂದೂ ಗಾಬರಿಯಾಗುತ್ತಾರೆ. ಆತ ಅರ್ಧಗಂಟೆಯ ಸಮಯ  ಕೊಡುತ್ತಾನೆ. ಇನ್ನರ್ಧ ಗಂಟೆಯೊಳಗೆ ಹಣ ಕಳುಹಿಸದಿದ್ದರೆ ನಿನ್ನ ಮಾನ ತೆಗೆಯುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ.  ಮಾತಿಗೆ ತಪ್ಪಬೇಡ ಎಂದು ಮತ್ತೆ ಮತ್ತೆ ಎಚ್ಚರಿಸಿ ಕರೆ ಸ್ಥಗಿತಗೊಳಿಸುತ್ತಾನೆ.

ಗೆಳೆಯ ಚುರುಕಾಗುತ್ತಾರೆ. ತನ್ನ ಪರಿಚಿತ ಪೊಲೀಸರನ್ನು ಸಂಪರ್ಕಿಸುತ್ತಾರೆ. ಈಗಾಗಲೇ ರಾತ್ರಿ 10 ಗಂಟೆ ಕಳೆದಿದೆ. ಈಗ  ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸುವ ಅಗತ್ಯ ಇಲ್ಲ. ನೀವು ಬೇರೆ ಬೇರೆ ಕಾರಣ ಕೊಟ್ಟು ಬೆಳಗಿನ ತನಕ ಆ  ವ್ಯಕ್ತಿ ಕಾಯುವಂತೆ ಮಾಡಿ. ಬೆಳಿಗ್ಗೆ ಹಣ ಕೊಡುತ್ತೇನೆ ಎಂದು ಹೇಳಿ ನಂಬಿಸಿ. ಏನಿದ್ದರೂ ನಾಳೆ ವಿಚಾರಿಸುವಾ ಎಂದು  ಅವರು ಧೈರ್ಯ ತುಂಬುತ್ತಾರೆ. ಗೆಳೆಯನಲ್ಲಿದ್ದ ಭಯ ನಿಧಾನಕ್ಕೆ ತಂತ್ರವಾಗಿ ಮಾರ್ಪಾಟುಗೊಳ್ಳುತ್ತದೆ. ಬೆಳಿಗ್ಗಿನ ವರೆಗೆ  ಆತನನ್ನು ಕಾಯುವಂತೆ ಮಾಡುವುದು ಹೇಗೆ, ಆತ ಒಪ್ಪದಿದ್ದರೆ ಒಪ್ಪುವಂತೆ ನಂಬಿಸುವುದು ಹೇಗೆ, ಬೇರೇನಾದರೂ ಷರತ್ತು  ಒಡ್ಡಿದರೆ ಹೇಗೆ ಪ್ರತಿಕ್ರಿಯಿಸಬೇಕು.. ಎಂಬಿತ್ಯಾದಿಯಾಗಿ ಆಲೋಚಿಸುತ್ತಾ ಆತನ ಕರೆಗೆ ಕಾಯುತ್ತಾರೆ. ನಿರೀಕ್ಷೆಯಂತೆಯೇ  ಮತ್ತೆ ಆತ ಕರೆ ಮಾಡುತ್ತಾನೆ. ಬೆದರಿಸುತ್ತಾನೆ. ಆದರೆ ಗೆಳೆಯ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಾರೆ. ಆತನ  ವೀಡಿಯೋಕ್ಕೆ ಭಯಗೊಂಡವರಂತೆ ನಟಿಸುತ್ತಾರೆ ಮತ್ತು ಬೆಳಿಗ್ಗೆ ಹಣ ಖಂಡಿತ ಜಮೆ ಮಾಡುವುದಾಗಿ ನಂಬಿಸುತ್ತಾರೆ. ಆತ  ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೆ. ಗೆಳೆಯ ಒಂದಷ್ಟು ನಿರಾಳವಾಗುತ್ತಾರೆ. ನಡೆದ ಘಟನೆಯನ್ನು ಪತ್ನಿಯಲ್ಲಿ  ಹಂಚಿಕೊಳ್ಳುತ್ತಾರೆ. ವೀಡಿಯೋ ತೋರಿಸುತ್ತಾರೆ. ಪತ್ನಿ ಹೇಗೆ ಪ್ರತಿಕ್ರಿಯಿಸಬಹುದು ಎಂದೂ ಭಯಪಡುತ್ತಾರೆ. ಆದರೆ,  ಪತ್ನಿಯ ಪ್ರತಿಕ್ರಿಯೆ ಅವರಲ್ಲಿ ನೂರು ಆನೆಯ ಬಲವನ್ನು ತುಂಬುತ್ತದೆ,

‘ನೀವೇನೂ ಭಯಪಡಬೇಡಿ, ನಿಮ್ಮ ಮೇಲೆ ನನಗೆ ವಿಶ್ವಾಸವಿದೆ, ಆತನ ವಿರುದ್ಧ ಕೇಸು ದಾಖಲಿಸಿ, ನಿಮ್ಮ ಜೊತೆ ನಾನಿದ್ದೇನೆ..’ ಎಂದು ಪತ್ನಿ ಬೆನ್ನು ತಟ್ಟುತ್ತಾರೆ.

ಅವರಲ್ಲಿ ಅದ್ಭುತ ಶಕ್ತಿ ಸಂಚಯವಾಗುತ್ತದೆ. ಭಯ ಹೊರಟು ಹೋಗುತ್ತದೆ. ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು  ದಾಖಲಿಸುತ್ತಾರೆ. ಇಂಥದ್ದೇ  ವೀಡಿಯೋ ತೋರಿಸಿ ವಾರದ ಹಿಂದೆ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ವಸೂಲು  ಮಾಡಿರುವ ಪ್ರಕರಣವನ್ನು ಪೊಲೀಸರು ಇವರೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯ ವಾಟ್ಸಾಪ್ ಅನ್ನು ಡಿಲೀಟ್ ಮಾಡಿ,  ಫೇಸ್‌ಬುಕ್‌ಗೆ ಲಾಕ್ ಹಾಕು ಎಂದು ಪೊಲೀಸರು ಹೇಳಿಕೊಳ್ಳುತ್ತಾರೆ. ಯಾವುದೇ ಅಪರಿಚಿತ ಕರೆಯನ್ನು ಎರಡು ದಿನಗಳ  ಕಾಲ ಸ್ವೀಕರಿಸಬೇಡಿ ಎಂದೂ ಹೇಳುತ್ತಾರೆ. ಈ ವೀಡಿಯೋ ಮಾಡಿದಾತ ಮಧ್ಯ ಪ್ರದೇಶದಲ್ಲಿದ್ದಾನೆ ಮತ್ತು ನಿಮ್ಮಲ್ಲಿ  ವೈಯಕ್ತಿಕ ದ್ವೇಷ ಇಲ್ಲದೇ ಇರುವುದರಿಂದ ನಿಮ್ಮ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾರ  ಎಂದು ಧೈರ್ಯ ತುಂಬುತ್ತಾರೆ. ನೀವಿಲ್ಲದಿದ್ದರೆ ಇನ್ನೊಬ್ಬರು ಎಂದು ಆತ ಮುಂದೆ ಹೋಗುವ ಸಾಧ್ಯತೆಯೇ ಹೆಚ್ಚು  ಎಂದೂ ವಿವರಿಸುತ್ತಾರೆ. ಗೆಳೆಯ ಹಾಗೆಯೇ ಮಾಡುತ್ತಾರೆ. ಅಲ್ಲಿಗೆ ಆ ಪ್ರಕರಣ ಕೊನೆಗೊಳ್ಳುತ್ತದೆ. ವಾರಗಳ ಬಳಿಕ  ಗೆಳೆಯ ವಾಟ್ಸಪ್ ಡೌನ್‌ಲೌಡ್ ಮಾಡಿ ಎಂದಿನಂತೆ ಚಟುವಟಿಕೆಯಲ್ಲಿ ತೊಡಗುತ್ತಾರೆ. ಹಾಗಂತ,

ಇದು ನನ್ನ ಗೆಳೆಯರೋರ್ವರ ವೈಯಕ್ತಿಕ ಅನುಭವವಷ್ಟೇ ಆಗಬೇಕಿಲ್ಲ. ಇಂಥವು ನಿತ್ಯ ನಡೆಯುತ್ತಿರುತ್ತವೆ. ಹೆಚ್ಚಿನವರು  ಮರ್ಯಾದೆಗೆ ಅಂಜಿ ವಂಚಕರ ಸಂಚಿಗೆ ಬಲಿಯಾಗುತ್ತಾರೆ. ಹಣ ಕೊಟ್ಟೂ ಕೊಟ್ಟೂ ಖಿನ್ನತೆಗೆ ಜಾರುತ್ತಾರೆ. ಕೆಲವೊಮ್ಮೆ  ಬದುಕು ಕೊನೆಗೊಳಿಸಿಕೊಳ್ಳುವುದೂ ಇದೆ. ಇಂಥ ಸಂದರ್ಭಗಳಲ್ಲಿ ಮನೆಯವರ ಪಾತ್ರ ಬಹಳ ಮುಖ್ಯ. ಹಾಗೆಯೇ,  ವಂಚನೆಗೆ ಸಿಲುಕಿಕೊಂಡ ವ್ಯಕ್ತಿ ತಾಳುವ ನಿರ್ಧಾರವೂ ಅಷ್ಟೇ ಮುಖ್ಯ. ಸಂಗತಿಯನ್ನು ಅಡಗಿಸಿಡದೇ ಮನೆಯವರಲ್ಲಿ ಮನಸು ಬಿಚ್ಚಿ ಹೇಳುವ ಧೈರ್ಯವನ್ನು ವ್ಯಕ್ತಿ ಮೊದಲಾಗಿ ಪ್ರದರ್ಶಿಸಬೇಕು. ನಡೆದಿರುವುದೇನು ಎಂದು ಪತ್ನಿ-ಮಕ್ಕಳು ಅಥವಾ  ತಂದೆ-ತಾಯಿ, ಸಹೋದರರಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು. ಮನೆಯವರೂ ಅಷ್ಟೇ, ಆ ಕ್ಷಣದಲ್ಲಿ ಪೂರ್ಣ ಬೆಂಬಲ  ನೀಡಬೇಕು. ಧೈರ್ಯ ತುಂಬಬೇಕು. ಆ ಸಿಕ್ಕಿನಿಂದ ಬಿಡುಗಡೆಗೊಳ್ಳುವುದಕ್ಕೆ ಬೇಕಾದ ತಂತ್ರಗಳನ್ನು ಜೊತೆಯಾಗಿ  ಹೆಣೆಯಬೇಕು. ತನ್ನ ಜೊತೆ ತನ್ನ ಮನೆ ಮತ್ತು ಕುಟುಂಬ ಇದೆ ಎಂಬ ವಿಶ್ವಾಸ ವ್ಯಕ್ತಿಯಲ್ಲಿ ಯಾವಾಗ ಮೂಡುತ್ತೋ  ಅದು ಆತನಲ್ಲಿ ಬೆಟ್ಟದಷ್ಟು ಆತ್ಮವಿಶ್ವಾಸವನ್ನು ತುಂಬುತ್ತದೆ. ಪ್ರಕರಣವನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು  ಹುಟ್ಟು ಹಾಕುತ್ತದೆ. ಅಂದಹಾಗೆ,

ಸೋಶಿಯಲ್ ಮೀಡಿಯಾ ಎಂಬುದು ಎರಡು ಅಲಗಿನ ಕತ್ತಿಯಂತಿದೆ. ಅದು ಏಕಕಾಲದಲ್ಲಿ ವರವೂ ಶಾಪವೂ  ಆಗಬಲ್ಲುದು. ಅತ್ಯಂತ ಪ್ರಾಮಾಣಿಕ ಮತ್ತು ಸಜ್ಜನರನ್ನೂ ಅಪರಾಧಿಗಳಂತೆ ಮತ್ತು ತಲೆತಗ್ಗಿಸುವ ಕೃತ್ಯ ಮಾಡಿದವರಂತೆ  ಬಿಂಬಿಸುವ ಸಾಮರ್ಥ್ಯ ಸೋಶಿಯಲ್ ಮೀಡಿಯಾಕ್ಕಿದೆ. ತುಸು ಯಾಮಾರಿದರೂ ಅದು ನಿಮ್ಮನ್ನು ಹಿಂಡಿ  ಹಿಪ್ಪೆಗೊಳಿಸಬಲ್ಲುದು. ಅಳ್ಳೆದೆಯವರ ಬದುಕನ್ನೇ ಕಸಿದುಕೊಳ್ಳಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ.