ಅಂದು ಪಂಚಾಯತ್ ಅಧ್ಯಕ್ಷೆ; ಈಗ ಕಸಗುಡಿಸುವವಳು- ಇದು ಸುಗಂಧಿಯ ಕತೆ

0
908

ಕಾಟ್ಟಕ್ಕಡ, ಆ. 1: ಹದಿನೈದು ವರ್ಷಗಳ ಮೊದಲು ಕುಟ್ಟಿಚ್ಚಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಸುಗಂಧಿಯವರು (49) ಈಗ ಕೊಟ್ಟೂರು ಆನೆ ಪುನರ್ವಸತಿ ಕೇಂದ್ರದಲ್ಲಿ ಶುಚೀಕರಣ ಕಾರ್ಮಿಕೆ ಆಗಿ ದುಡಿಯುತ್ತಿದ್ದಾರೆ. ಈ ಕೇಂದ್ರಕ್ಕೆ ವಿವಿಧ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯತ್ ಸಹಿತ ಅನೇಕ ಜನಪ್ರತಿನಿಧಿಗಳು ಬರುವಾಗ ಸುಗಂಧಿ ಕಸಗುಡಿಸಿ ಸ್ವಚ್ಛ ಮಾಡುತ್ತಿರುತ್ತಾರೆ.

ಆದರೂ ಯಾರೂ ಇವರನ್ನು ಕ್ಯಾರೇ ಮಾಡುವುದಿಲ್ಲ. 1999ರಲ್ಲಿ ಎರಡು ವರ್ಷ ಸುಗಂಧಿ ಪಂಚಾಯತ್ ಅಧ್ಯಕ್ಷೆಯಾಗಿ ನಿವೃತ್ತರಾಗಿದ್ದರು. ನಂತರ ಕುಟುಂಬ ಸಾಕಲು ಗುಡ್ಡದಿಂದ ಕಟ್ಟಿಗೆ ತಂದು ಮಾರಿ ಹಣ ಸಂಪಾದನೆ ಮಾಡಿದರು. ಇದೇ ವೇಳೆ ಇಕೊ ಡೆವಲಪ್‍ಮೆಂಟ್ ಕಮಿಟಿಯ ಸದಸ್ಯೆಯಾದರು. ನಂತರ ಆನೆ ಪುನರ್ವಸತಿ ಕೇಂದ್ರದಲ್ಲಿ ಕಾರ್ಮಿಕಳಾಗಿ ಸೇರಿಕೊಂಡರು. ಸುಗಂಧಿ ಪಂಚಾಯತ್ ಅಧ್ಯಕ್ಷೆಯ ಕುರ್ಚಿಯಿಂದ ಇಳಿದ ಬಳಿಕ ಕಟ್ಟಡ ಕಾರ್ಮಿಕನಾದ ಪತಿ ಶಶಿಕುಮಾರ್ ರೋಗಪೀಡಿತರಾಗಿದ್ದರು. ನಂತರ ತನ್ನ ಕುಟುಂಬವನ್ನು ಸಾಕುವ ಹೊಣೆಗಾರಿಕೆ ಅವರ ಮೇಲೆ ಬಿತ್ತು.

ಸೋರುವ ಗುಡಿಸಲಿನಲ್ಲಿ ವಾಸ. ಗ್ರಾಮ ಪಂಚಾಯತ್‍ನಿಂದ ಮನೆ ಪಾಸಾಯಿತು. ಮನೆಯ ಕೆಲಸ ಆರಂಭವಾದರೂ ಸಹಾಯಧನ ಮುಗಿದ ಬಳಿಕ ಅದು ಕೂಡ ಅರ್ಧದಲ್ಲಿ ಬಾಕಿಯಾಯಿತು. ನಂತರ ಅವರಿವರ ಸಹಾಯದಿಂದ ಎರಡು ಕೋಣೆಯ ಮನೆಯ ಕೆಲಸ ಪೂರ್ತಿಯಾಯಿತು. ಸುಗಂಧಿ ಪಂಚಾಯತ್ ಅಧ್ಯಕ್ಷೆಯಾಗಿದ್ದಾಗ ಸ್ಥಳೀಯ ಕಳ್ಳಭಟ್ಟಿ ತಯಾರಿ ಕೇಂದ್ರಗಳಿಗೆ ನಿರಂತ ರೈಡ್ ಆಗಿತ್ತು. ಇದಕ್ಕೆ ಕಾರಣ ಸುಗಂದಿ ಎಂದು ಆರೋಪಿಸಿ ಅವರ ಸಾರ್ವಜನಿಕ ಜೀವನವನ್ನೇ ವಿರೋಧಿಗಳು ಮುಗಿಸಿದರು. ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ಹೋದರೆ ದಿನವೊಂದಕ್ಕೆ ನೂರು ರೂಪಾಯಿಯಿಂದ 150 ರೂಪಾಯಿ ಸಿಗುತ್ತದೆ. ಮಕ್ಕಳನ್ನು ಇದೇ ಹಣದಲ್ಲಿ ಕಲಿಸಬೇಕು. ಕುಟುಂಬವನ್ನು ಸಾಕಬೇಕಿತ್ತು. ಹೀಗೆ ಅವರು ಹೊಸ ಕೆಲಸಕ್ಕೆ ಸೇರಿಕೊಂಡರು. ತಿಂಗಳಲ್ಲಿ 25 ದಿವಸ ಕೆಲಸ ಸಿಗುತ್ತದೆ ಎಂದು ಸುಗಂಧಿ ಹೇಳಿದರು. ಪುತ್ರಿ ಅರುಣಿಮಾ ಪಿಯುಸಿಯಲ್ಲಿ ಉನ್ನತ ಅಂಕದಲ್ಲಿ ಪಾಸಾಗಿದ್ದರೂ ವಿದ್ಯಾಭ್ಯಾಸ ಮುಂದುವರಿಸಲು ಹಣದ ಅಡಚಣೆಯಿಂದ ಸಾಧ್ಯವಾಗಿಲ್ಲ. ಮಗ ಅರುಣ್‍ಜಿತ್ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಒಂದು ಕಾಲದ ಪಂಚಾಯತ್ ಅಧ್ಯಕ್ಷೆಯ ಈಗಿನ ಸ್ಥಿತಿಗತಿ ಇದು.