ಕೋಟತಟ್ಟು ಕೊರಗ ಕಾಲನಿಯ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಪೊಲೀಸರಿಂದ ಲಾಠಿ ಚಾರ್ಜ್: ಕೋಟ ಠಾಣಾಧಿಕಾರಿಯ ವಿರುದ್ದ ಕ್ರಮಕ್ಕೆ ಆಗ್ರಹ

0
255
ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿಯವರ ತವರಲ್ಲಿ ನಡೆದ ಘಟನೆ

ಸನ್ಮಾರ್ಗ ವಾರ್ತೆ

ಕುಂದಾಪುರ: ಕೋಟತಟ್ಟು ಕೊರಗ ಸಮುದಾಯದವರ ಮನೆಯಲ್ಲಿ ನಿನ್ನೆ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ನುಗ್ಗಿ ಹೆಣ್ಣು ಮಕ್ಕಳಿಗೆ ,ಮಧುಮಗನಿಗೆ ಮತ್ತು ಇತರ ಕೊರಗ ಸಮುದಾಯದ ಜನರಿಗೆ ಪೊಲೀಸರು ಲಾಠಿ ಬೀಸಿದ್ದು, ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ತವರಿನಲ್ಲಿಯೇ ಈ ಘಟನೆ ನಡೆದಿದ್ದು, ದಲಿತ ಮುಖಂಡರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ ತಟ್ಟುವಿನ ಕೊರಗ ಕಾಲೋನಿಯದ ಚಿಟ್ಟು ಬೆಟ್ಟುವಿನಲ್ಲಿ‌ ರಾಜೇಶ್ ಎಂಬ ಯುವಕನ ಮದುವೆಯ ಮುನ್ನ ದಿನವಾದ ಸೋಮವಾರ ರಾತ್ರಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿರುವಾಗ ಪೊಲೀಸರು ಏಕಾಏಕಿ ನುಗ್ಗಿ ಲಾಠಿಚಾರ್ಜ್ ನಡೆಸಿದ್ದಾರೆ. ದುರ್ಬಲ ಸಮುದಾಯದ ವಿರುದ್ಧದ ಈ ರೀತಿಯ ವರ್ತನೆಗೆ ಉಡುಪಿಯಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ.

ಮದುಮಗ ರಾಜೇಶ್ ಸೇರಿದಂತೆ ಹೆಣ್ಣುಮಕ್ಕಳಿಗೂ ನಿರ್ದಯವಾಗಿ ಲಾಠಿ ಚಾರ್ಜ್ ಮಾಡಿದ್ದು ಕೊರಗ ಸಮುದಾಯದ ನಾಯಕ ಗಣೇಶ್ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಕೋಟಾ ಠಾಣಾಧಿಕಾರಿ ಸಂತೋಷ್ ಮತ್ತು ಸಿಬ್ಬಂದಿಗಳು ಮಾಡಿರುವ ಈ ಕೃತ್ಯವನ್ನು ವಿವಿಧ ದಲಿತ ಸಂಘಟನೆಗಳು ಖಂಡಿಸಿ ನಿನ್ನೆ ರಾತ್ರಿಯೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗಿತ್ತು. ಠಾಣಾಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ವಿವಿಧ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.

ಮದುಮಗ ರಾಜೇಶ್
ಪೊಲೀಸ್ ಠಾಣೆಗೆ ಮುತ್ತಿಗೆ