ಜಾತಿಗಣತಿ ವರದಿ ಶೀಘ್ರ ಜಾರಿಗೆ ಬರಲಿ; ವೆಲ್ಫೇರ್ ಪಾರ್ಟಿ

0
83

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮಿತಿಯ ಬಹುನಿರೀಕ್ಷಿತ ಜಾತಿಗಣತಿ ವರದಿ ಅತಿ ಶೀಘ್ರದಲ್ಲಿ ಜಾರಿಗೆ ಬರಲಿ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು ಈ ರಾಜ್ಯದಲ್ಲಿ ಕನಿಷ್ಟಪಕ್ಷ ಗ್ರಾಮ ಪಂಚಾಯತ್ ಸದಸ್ಯರೂ ಆಗದ ಸಮುದಾಯವಿದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಬದ್ದವಾಗಿ ಆಡಳಿತ, ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಸಮಾನ ಪ್ರಾತಿನಿಧ್ಯತೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹದ್ದೊಂದು ವರದಿ ಸಿದ್ದಪಡಿಸಿರುವುದು ಸ್ವಾಗತಾರ್ಹ. ಆದರೆ ಆ ವರದಿಗಳನ್ನು ಪೆಟ್ಟಿಗೆಯಲ್ಲಿಟ್ಟು ಕಾಲಹರಣ ಮಾಡುತ್ತಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ.

ಈ ವರದಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸುವವರ ಸ್ವಾರ್ಥತೆ ಗಮನಿಸಬಹುದು. ಇದನ್ನು ಜನಹಿತಕ್ಕಿಂತ ರಾಜಕೀಯ ಲಾಭಕ್ಕಾಗಿ ಬಳಸಲು ಕೆಲವರು ಪ್ರಯತ್ನಿಸುತ್ತಿರುವುದು ಅಕ್ಷಮ್ಯ. ರಾಜ್ಯದ ಜನರ ಸಮಸ್ಯೆಗಳನ್ನು ನ್ಯಾಯಬದ್ದ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಪ್ರತಿನಿಧಿಗಳು ತಮ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಕಳೆದ ಬಾರಿಯ ಸಿದ್ದರಾಮಯ್ಯರ ಸರಕಾರ ಈ ವರದಿ ತಯಾರಿಸಲು ಆಗಿನ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರಾದ ಕಾಂತರಾಜುರವರನ್ನು ನೇಮಿಸಿದರು. ನಂತರ ಅದರ ಹೊಣೆಗಾರಿಕೆ ಜಯಪ್ರಕಾಶ್ ಹೆಗ್ಡೆಯವರ ಪಾಲಿಗೆ ದೊರೆತಿತ್ತು. ಅವರು ಈಗಾಗಲೇ ಸರಕಾರಕ್ಕೆ ವರದಿ ಸಮರ್ಪಸಿದ್ದಾರೆ. ಅದು 48 ಸಂಪುಟ ಹೊಂದಿದ್ದು 200 ಪುಟ ಗಳಷ್ಟು ವರದಿಯಿದೆ.1351 ವಿವಿಧ ಜಾತಿಗಳ ಸಮೀಕ್ಷೆ ನಡೆಸಲಾಗಿದೆ.

5.98 ಕೋಟಿ ಜನರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. 3.98 ಕೋಟಿಗೂ ಹೆಚ್ಚು ಅಹಿಂದ(ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳಿದ್ದು 1.87 ಕೋಟಿ ಲಿಂಗಾಯುತರು ಒಕ್ಕಲಿಗರು ಬ್ರಾಹ್ಮಣ ಮತ್ತಿತರ ಜಾತಿಗಳಿವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾ ಶಿಫಾರಸು ಮಾಡಿದೆ. ವೀರೇಶೈವ ಮತ್ತು ಲಿಂಗಾಯತರು ಒಂದೇ ಎಂದು ಸಮಿತಿ ಒತ್ತುಕೊಟ್ಟು ಹೇಳಿದೆ. ಆರು ಕೋಟಿ ಜನರಲ್ಲಿ ಯಾವ ಯಾವ ಜಾತಿಯ ಜನರು ಎಷ್ಟೆಷ್ಟು ಮಂದಿಯಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಈ ಎಲ್ಲಾ ಜಾತಿಯ ಜನರಿಗೆ ಅವರವರ ಅನುಪಾತಕ್ಕೆ ಅನುವಾಗಿ ಪ್ರಾತಿನಿಧ್ಯತೆ ದೊರೆಯಬೇಕಾಗಿದೆ ಎಂದೂ ಅವರು ಹೇಳಿದರು. ಆದರೆ ಕಾಂಗ್ರೆಸ್ ಪಕ್ಷ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿ ಜಾರಿ ಮಾಡುತ್ತೇವೆಂದಾಗ ಸುಮ್ಮನಿದ್ದವರು ಇದೀಗ ತಗಾದೆ ತೆಗೆಯುತ್ತಿರುವುದು ಸರಿಯಲ್ಲ ಎಂದೂ ಅವರು ಹೇಳಿದರು.