ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ; ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್

0
193

ಸನ್ಮಾರ್ಗ ವಾರ್ತೆ

2024 ಜೂನ್ ನಾಲ್ಕನ್ನು ಭಾರತ ಭಾರತಕ್ಕೆ ಮರಳಿದ ದಿನ ಎಂದು ಇತಿಹಾಸ ಬರೆದಿಡಬಹುದಾಗಿದೆ. ಭಾರತದ ಜನ ದ್ವೇಷ, ಹಗೆತನಕ್ಕಲ್ಲ ಪ್ರೀತಿ ಸಾಹೋದರ್ಯಕ್ಕೆ ಮತ್ತು ಸಹಯೋಗಕ್ಕೆ ನಮ್ಮ ಗ್ಯಾರಂಟಿ ಎಂದು ಘೋಷಿಸಿದ್ದು ಅದೇ ದಿನ.

ಅಂದೇ ಅವರು ತಮ್ಮ ಅತೀ ದೊಡ್ಡ ವೋಟಿನ ಹಕ್ಕು ಪ್ರಯೋಗಿಸಿ ಇದನ್ನು ಕೂಗಿ ಹೇಳಿದ್ದಾರೆ. ಅನೇಕತೆಯಲ್ಲಿ ಏಕತೆ, ವಸುದೇವ ಕುಟುಂಬಕಂ ಎಂಬುದು ಈ ನಾಡಿನ ಮೂಲಮಂತ್ರಗಳಲ್ವೇ?

ಸಂಸ್ಕೃತಿ, ಭಾಷೆ, ಧರ್ಮ, ವಂಶ, ಬಟ್ಟೆ ಧರಿಸುವುದು, ಊಟ ಇವು ಯಾವುದೇ ಆಗಿದ್ದರೂ ನಾವು ಶಾಲೆ ತರಗತಿಗಳಲ್ಲಿ ಹೇಳುತ್ತಿದ್ದ ಪ್ರತಿಜ್ಞೆ ಇದೆಯಲ್ಲ ಅದರಂತೆ “ಭಾರತ ನನ್ನ ದೇಶವಾಗಿದೆ. ಎಲ್ಲ ಭಾರತೀಯರು ನನ್ನ ಸಹೋದರ ಸಹೋದರಿಯರು ಆಗಿದ್ದಾರೆ” ಎಂಬುದೇ ಆ ಮೂಲ ಮಂತ್ರಗಳ ಅಸ್ತಿತ್ವ ಆಗಿ ಇರುವುದು.

ಆದರೆ ನೋಡಿ, ಕಳೆದ ಹತ್ತು ವರ್ಷಗಳಲ್ಲಿ ಸ್ಪಷ್ಟವಾಗಿ ಹೇಳುವುದಿದ್ದರೆ 2014 ಮೇ 26ರಿಂದ ನಮ್ಮ ದೇಶದಲ್ಲಿ ನಡೆಯುತ್ತಿದ್ದುದು ಏನು? ಆತ್ಮ ಪ್ರಶಂಸೆಗೆ, ದ್ವೇಷಕಾರುವ ವರ್ತನೆಗಳಿಗೆ ಅಹಂಕಾರ, ಅಪಹಾಸ್ಯ, ವ್ಯಂಗ್ಯದ ಪ್ರಯೋಗಗಳು. ಇದರಾಚೆ ಏನಾದರೂ ಇತ್ತೇ? ಮೂಲಭೂತ ಅಗತ್ಯಗಳನ್ನು ಪೂರೈಸದೆ ಕಂಗೆಟ್ಟು ಹೋದ ಒಂದು ಜನ ವಿಭಾಗ. ಕೆಲಸ ಇಲ್ಲದೆ ನಿರುದ್ಯೋಗಿಗಳಾದ ಯುವಕರನ್ನು ಸೃಷ್ಟಿಸಿ ಭಾರತದ ಮೂಲ ರಚನೆಯನ್ನು, ಸಾಹೋದರ್ಯ ಇಷ್ಟೇಕೆ ಆತ್ಮವನ್ನೇ ನಷ್ಟ ಮಾಡಿಕೊಳ್ಳಲಾಯಿತಲ್ವೇ?

ಹತ್ತು ವರ್ಷಗಳ ಕಾಲದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷಕ್ಕೆ ಸಿಗಬೇಕಾಗಿದ್ದ ಪ್ರತಿಪಕ್ಷ ನಾಯಕ ಸ್ಥಾನವೇ ನಿರಾಕರಿಸಲ್ಪಟ್ಟು ಭಾರತವನ್ನು ನಶಿಸುವ ವಿಧ್ವಂಸಕ ಯಾತ್ರೆ ಶುರುವಾದದ್ದು. ಆ ಸ್ಥಾನದ ನಿಷೇಧ ಸಣ್ಣ ವಿಷಯವಲ್ಲ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದಲ್ಲಿ ಆಡಳಿತಗಾರರು ಪ್ರಜಾಪ್ರಭುತ್ವಕ್ಕೆ ಎಷ್ಟು ಬೆಲೆ ಕೊಡುತ್ತಾರೆ ಎಂದು ಸಾಬೀತು ಪಡಿಸಿದ ಘಟನೆ ಅದಾಗಿದೆ. ಪ್ರಜಾ ಪ್ರಭುತ್ವ ಧ್ವಂಸ ಮಾತ್ರವಲ್ಲ ದ್ವೇಷ ಹಗೆತನವನ್ನು ಬೆರೆಸಿದ್ದು ನಿಲುವು ಕೂಡಾ ಅದಾಗಿತ್ತು. ಕಾಶ್ಮೀರ ಮಣಿಪುರ ಉತ್ತರಪ್ರದೇಶಗಳಲ್ಲಿ ದೇಶದ ಸುಮಾರು ಎಲ್ಲ ಕಡೆಗಳಲ್ಲಿ ಮುಖ್ಯ ಸೇವಕ್ ಬಿತ್ತಿದ ಅಪಾಯದ ಬೀಜದಿಂದ ಅನುಯಾಯಿಗಳು ಫಲ ಕಿತ್ತುಕೊಳ್ಳುವುದನ್ನು ಮಾಡಲಾಯಿತು.

ಎಷ್ಟಿಲ್ಲ ಎಷ್ಟಿದೆ ಹೇಳುವುದಕ್ಕೆ? ನೋಟು ಬ್ಯಾನು, ರಾಜ್ಯಗಳನ್ನು ತುಂಡು ಮಾಡಿದ್ದು, ಬುಲ್ಡೋಝರ್ ರಾಜ್, ಗುಂಪು ಹತ್ಯೆ, ಹೆಸರು ಬದಲಿಸಿ ಇತಿಹಾಸವನ್ನು ಮರೆಸಿಟ್ಟುದು, ಪೌರತ್ವ ತಿದ್ದುಪಡಿ ಕಾನೂನು, ರಾಷ್ಟ್ರೀಯ ಪೌರತ್ವ ರಿಜಿಸ್ಟರ್… ಹೀಗೆ ಎಷ್ಟೆಷ್ಟು ಕ್ರೂರ ಪಾತಕಗಳನ್ನು ದೇಶ ಅನುಭವಿಸಬೇಕಾಗಿ ಬಂದದ್ದು ಲೆಕ್ಕ ಇದೆಯಾ? ದೇಶಪ್ರೇಮದ ಅಡಿಪಾಯದ ಸೈನಿಕ ಸೇವೆಯನ್ನು ಅಗ್ನಿವೀರ್ ಯೋಜನೆಯ ಮೂಲಕ ಕುಲಗೆಡಿಸಿ ಹಾಕಿದ್ದು, ಜಮ್ಮು ಕಾಶ್ಮೀರದ ಜನರಿಗೆ ಪಾಕಿಸ್ತಾನದ ಮನಸ್ಸು ಎಂದು ಆಕ್ಷೇಪಿಸಿದ್ದು, ಆ ರಾಜ್ಯವನ್ನು ಎರಡು ತುಂಡು ಮಾಡಿದ್ದು, ದೇಶದ ಪ್ರಬಲ ಅಲ್ಪಸಂಖ್ಯಾತ ವಿಭಾಗವನ್ನು ನುಸುಳುಕೋರರು ಎಂದು ಆಕ್ಷೇಪಿಸಿದ್ದು, ಸ್ವಯಂ ಹೊಗಳುತ್ತಾ ನರೇಂದ್ರ ಮೋದಿ ನಡೆದದ್ದು ಎಲ್ಲ ನೆನಪಿದೆಯಾ? ನರೇಂದ್ರ ಮೋದಿ ಪ್ರಚಾರ ಮಾಡಿದ 164 ಲೋಕಸಭಾ ಕ್ಷೇತ್ರಗಳಲ್ಲಿ 77ರಲ್ಲಿ ಮೋದಿಯ ಮಿತ್ರ ಕೂಟ ಎನ್‌ಡಿಎಯನ್ನು ಜನ ಸೋಲಿಸಿದ್ದಾರೆ.

ಸರ್ವಾಧಿಕಾರಿಯಾಗಿ ಹತ್ತು ವರ್ಷ ತನಗೆ ಕಂಡದ್ದೆಲ್ಲ ಮಾಡಿ ದೇಶವನ್ನು ಆಳಿದ ನರೇಂದ್ರ ಮೋದಿ ಸ್ವಂತವಾಗಿ ಈ ಸಲ ಬಿಜೆಪಿಗೆ ಬಹುಮತವನ್ನು ತಂದು ಕೊಡಲು ವಿಫಲರಾದರು. ಸಖ್ಯ ಪಕ್ಷಗಳ ಬೆಂಬಲದಿಂದ ಆಡಳಿತ ಮಾಡುತ್ತಿದ್ದಾರೆ.

ಎನ್‌ಡಿಎಯಿಂದ ಹೊರಗೆ ಹೋಗಿದ್ದ ತೆಲುಗು ದೇಶಂ ನಾಯಕ ಚಂದ್ರ ಬಾಬು ನಾಯಿಡು ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಕೃಪಾಕಟಾಕ್ಷದಲ್ಲಿ ನರೇಂದ್ರ ಮೋದಿ ಇದ್ದಾರೆ. ಸರಕಾರ ಇದೆ. ಅದರೆ ಮೋದಿ ಬಿಹಾರಕ್ಕೆ ಕಾಲಿಡಬಾರದೆಂದು ಇದೇ ನಿತೀಶ್ ಕುಮಾರ್ ಹೇಳಿದ್ದರು. ಮೋದಿ ಮೂರನೇ ಬಾರಿ ಗದ್ದುಗೆ ಏರಿದ್ದು ಹೀಗೆ.

ಹೀಗೆ ಒಬ್ಬ ಇಡೀ ದೇಶದಲ್ಲಿ ಸರ್ವಾಧಿಕಾರದ ದಂಡ ಯಾತ್ರೆಯಲ್ಲಿದ್ದಾಗ ಮೊದಲು ಅದರ ವಿರುದ್ಧ ಒಂದು ಹಗುರವಾದ ಗಾಳಿ ಬೀಸಿತು. ಅದು ನಂತರ ಬಿರುಗಾಳಿ ಆಯಿತು. ಬಿರುಗಾಳಿಗೆ ಚಾಲನೆ ಕೊಟ್ಟದ್ದು ರಾಹುಲ್ ಗಾಂಧಿ ಎಂಬ ರಾಜಕೀಯ ನಾಯಕ.

ಹೌದು. ಭಾರತದ ಇತಿಹಾಸದಲ್ಲಿ ರಾಹುಲ್ ಗಾಂಧಿಯಂತೆ ಅಪಮಾನಿತಗೊಂಡ ಬೇರೆ ಒಬ್ಬ ನಾಯಕ ಇಲ್ಲ. ಈ ದೇಶದ ಪ್ರಧಾನಿ ಮೋದಿಯೇ ಎಲ್ಲ ರಾಜಕೀಯ ಶಿಷ್ಟಾಚಾರವನ್ನು ಮರೆತು ಅವರನ್ನು ಅಪಹಾಸ್ಯ ವಾಡಿದರು. ಇನ್ನು ಕೇಂದ್ರದ ಏಜೆನ್ಸಿಗಳನ್ನು ಉಪಯೋಗಿಸಿ ಕಿರುಕುಳ ನೀಡಲಾಗಿದೆ. ಸಾಲದ್ದಕ್ಕೆ ಲೋಕಸಭೆಯ ಸದಸ್ಯತ್ವನ್ನು ರದ್ದುಪಡಿಸಿದ್ದೂ ನಡೆಯಿತು. ಆದರೆ ಭಾರತಕ್ಕಾಗಿ, ಭಾರತದ ಜನರಿಗಾಗಿ ರಾಹುಲ್ ಗಟ್ಟಿಯಾಗಿ ನಿಂತರು. 136 ದಿವಸ ಹದಿನಾಲ್ಕು ರಾಜ್ಯಗಳಲ್ಲಿ ಭಾರತ್ ಜೋಡೊ ಯಾತ್ರೆ ನಡೆಸಿದರು. ನಾಲ್ಕು ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ನಡೆದು ಜನರ ಬಳಿಗೆ ಹೋದರು. ಅತ್ತ ಮಣಿಪುರದಲ್ಲಿ, ಹಾಥ್ರಸ್‌ನಲ್ಲಿ, ಕಾಶ್ಮೀರದಲ್ಲಿ, ಹರಿಯಾಣದಲ್ಲಿ ಹೀಗೆ ಎಲ್ಲಿಯೂ ಭರವಸೆ ತುಂಬುವ ಅಗತ್ಯ ಇತ್ತೋ ಅಲ್ಲಿಗೆ ಅವರು ಓಡೋಡಿ ಹೋದರು. ಸರಕಾರದ ಎಲ್ಲ ಋಣಾತ್ಮಕ ನೀತಿಗಳನ್ನು ನಿರ್ಧಾರಗಳನ್ನು ದಿಟ್ಟೆದೆಯಿಂದ ಎದುರಿಸಿದರು. ರೈತರ ಹೋರಾಟದಲ್ಲಿ ಅವರ ಜೊತೆಗೆ, ಕೊರೋನದಲ್ಲಿ ಬಡ ಜನರ ಜೊತೆ ನಿಂತರು.

ಇಂಡಿಯ ಸಖ್ಯಕ್ಕೆ ರೂಪು ನೀಡುವ ಚಾಲಕ ಶಕ್ತಿ ರಾಹುಲ್ ಗಾಂಧಿ ಆಗಿದ್ದಾರೆ. ಒಂದು ರಾಜಕೀಯ ಪಾರ್ಟಿ ತಮ್ಮ ಎಲ್ಲ ಅಧಿಕಾರ ಆಕಾಂಕ್ಷೆಗಳನ್ನು ದೇಶದ ಜನರಿಗಾಗಿ ಬಲಿನೀಡಿ ಇಷ್ಟರವರೆಗೂ ಕಾಂಗ್ರೆಸ್ಸಿನಂತೆ ಹೊಂದಾಣಿಕೆ ಮಾಡಲು ತಯಾರಾದದ್ದು ಇತಿಹಾಸದಲ್ಲಿ ಈ ಹಿಂದೆ ಯಾರೂ ಕಂಡಿರಲಾರರು. ರಾಹುಲ್‌ರ ಆ ಸಹನೆ, ಮನುಷ್ಯರಿಗಾಗಿ ಹೋರಾಟ, ನೀಡಿದ ಗ್ಯಾರಂಟಿ ಇಂಡಿಯ ಕೂಟದ ಮುನ್ನಡೆಯಾಗಿದೆ. ಈಗ ಪ್ರಬಲ ಪ್ರತಿಪಕ್ಷವಾಗಿದೆ.

ಅಧಿಕಾರಕ್ಕೇರಲು ಆಗಿಲ್ಲ. ಆದರೂ ಈ ಸೋಲು ಗೆದ್ದದ್ದಕ್ಕಿಂತಲೂ ಹೆಚ್ಚು ಹೊಳೆಪಿನದ್ದಾಯಿತು. ದೇಶ ಅಂಧಕಾರಕ್ಕೆ ಬಿದ್ದುಬಿಡುವ ಬಗ್ಗೆ ಹಲವರು ಆತಂಕಕ್ಕೊಳಗಾಗಿದ್ದರು. ಇದೀಗ ದೇಶದ ಜನರಿಗೆ ಹೊಸ ಆಕಾಶವನ್ನು ಹೊಸ ಭೂಮಿಯನ್ನು ತೋರಿಸಿಕೊಡುವ ಬೆಳಕಾಗಿ ಕಾಂಗ್ರೆಸ್ ಪರಿವರ್ತಿತವಾಗಿದೆ. ಅಧಿಕಾರದಲ್ಲಿ ಕೂರುವುದಕ್ಕಿಂತ ದೇಶವನ್ನು ಅಂಧಕಾರದಿಂದ ಹೊರತೆಗೆಯುವುದು ಇಂಡಿಯ ಸಖ್ಯದ ಗುರಿಯಾಗಿತ್ತು.

ಅಸತೋಮ ಸದ್‌ಗಮಯ, ತಮಸೋಮ ಜ್ಯೋತಿರ್ಗಮಯ (ಅಸತ್ಯದಿಂದ ಸತ್ಯಕ್ಕೆ, ಕತ್ತಲೆಯಿಂದ ಬೆಳಕಿನೆಡಗೆ ಮುನ್ನಡೆಸು) ಎಂಬುದು ನಮ್ಮ ಪ್ರಾರ್ಥನೆಯಾಗಿದೆ.

ಗುರಿಯತ್ತ ಹೋಗಿ ಮುಟ್ಟಲು ಇನ್ನೂ ದೂರ ಇದೆ. ಈಗ ಸಿಕ್ಕಿದ ಬೆಳಕಿನ ಮೂಲಕ ಆ ಯಾತ್ರೆ ಮುಂದುವರಿಯುತ್ತದೆ. ಭಾರತವನ್ನು ಮತ್ತೆ ವಶಪಡಿಸಿ ಸಂವಿಧಾನದ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದು ದ್ವೇಷದ ಬಝಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆದು ಜಾತಿ ಭೇದ ಇಲ್ಲದೆ ಧರ್ಮ ದ್ವೇಷ ಇಲ್ಲದೆ ಮಾತ್ರವಲ್ಲ ಎಲ್ಲರೂ ಸಹೋದರತ್ವದಲ್ಲಿ ಬದುಕುವ ಮಾದರಿ ದೇಶವಾಗಿ ಭಾರತ ಬದಲಾಗಲಿದೆ, ಬದಲಾಯಿಸಲಿದ್ದೇವೆ.