ಸನ್ಮಾರ್ಗ ವಾರ್ತೆ
ವಿಟ್ಲ: ಲೋಕ ತಂತ್ರ ಬಚಾವೋ ಆಂದೋಲನ ಸಮಿತಿ ವಿಟ್ಲದ ವತಿಯಿಂದ ಎಸ್ಐಆರ್ ವಿರುದ್ಧ ಪ್ರತಿಭಟನಾ ಸಭೆಯೊಂದು ವಿಟ್ಲ ಪೇಟೆಯಲ್ಲಿ ಜರುಗಿತು.
ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಸಿಪಿಐಎಂಎಲ್ ಮುಖಂಡ ರಾಮಣ್ಣ ವಿಟ್ಲ ಮಾತನಾಡುತ್ತಾ ಎಸ್ ಐ ಆರ್ ನೆಪವೊಡ್ಡಿ ಜನರ ಮತದಾನದ ಹಕ್ಕನ್ನು ಕಸಿಯುವ ಹುನ್ನಾರದ ಬಗ್ಗೆ ಹೇಳುತ್ತಾ ತಕ್ಷಣವೇ ಚುನಾವಣಾ ಆಯೋಗದ ಮುಖಂಡ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಮಾತನಾಡುತ್ತಾ ಮತಕಳ್ಳತನದ ಮೂಲಕ ಅಧಿಕಾರ ವನ್ನು ಕೇಂದ್ರ ಸರ್ಕಾರ ಕಬಳಿಸುತ್ತಿದೆ. ಇದೇ ಮೊದಲಲ್ಲ ಈ ಹಿಂದೆಯೂ ಇದೇ ರೀತಿ ತನಗೆ ಗೆಲುವು ಕಷ್ಟ ವಾಗುವ ಕಡೆ ಇದನ್ನು ಬಳಸಿಕೊಂಡು ಬಿಜೆಪಿ ಅಧಿಕಾರವನ್ನು ಪಡೆದಿದೆ. ಇದರ ವಿರುದ್ಧ ಜನಜಾಗೃತಿ ನಡೆಯಬೇಕಿದೆ ಎಂದರು. ಸಾಮಾಜಿಕ ಕಾರ್ಯಕರ್ತ ರಾದ ಸುಭಾಷ್ ಚಂದ್ರ ಶೆಟ್ಟಿ ಮಾತನಾಡಿ ಮನಮೋಹನ್ ಸಿಂಗ್ ರನ್ನು ಮೌನಿ ಪ್ರಧಾನಿ ಎಂದವರು ವೋಟ್ ಚೋರಿ ಮತ್ತು ಮತದಾನದ ಹಕ್ಕನ್ನು ರದ್ದು ಗೊಳಿಸಿದ ಬಗ್ಗೆ ಮೌನಿಯಾದ ನರೇಂದ್ರ ಮೋದಿ ಬಗ್ಗೆ ಯಾಕೆ ಬಿಜೆಪಿ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಾಮಾಜಿಕ ಕಾರ್ಯಕರ್ತ ರಮಾನಾಥ ವಿಟ್ಲ, ಇಕ್ಬಾಲ್ ಹಳೆಮನೆ, ಶಾಕಿರ್ ಅಳಕೆಮಜಲು, ಅಶೂರ ಬೀವಿ ಹಾಗೂ ಪದ್ಮನಾಭ ಸಣ್ಣ ಗುತ್ತು ಸಂದರ್ಭೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಪಿಐ ಮುಖಂಡ ಬಿ.ಎಂ.ಹಸೈನಾರ್ ಮಾತನಾಡುತ್ತಾ ಪ್ರಜಾಪ್ರಭುತ್ವದ ಹಕ್ಕನ್ನು ದಮನಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜಿನಾಮೆ ನೀಡಲಿ. ಜನಜಾಗೃತಿ ನಡೆಯಬೇಕಿದೆ ಎಂದು ಕರೆನೀಡಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಅಬ್ದುಲ್ ಖಾದರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಲೀಮ್ ಬೋಳಂಗಡಿ ಧನ್ಯವಾದವಿತ್ತರು.













