ಫ್ರಾನ್ಸ್ ಗಲಭೆಗೆ ಮ್ಯಾಕ್ರನ್ ಅವರ ವಲಸೆ ನೀತಿಯೇ ಕಾರಣ, ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ: ಟ್ರಂಪ್

0
278

ಸನ್ಮಾರ್ಗ ವಾರ್ತೆ

ಪ್ಯಾರಿಸ್: ಫ್ರಾನ್ಸ್‌ನಾದ್ಯಂತ ನಡೆಯುತ್ತಿರುವ ಗಲಭೆಗಳು ಮತ್ತು ಪ್ರತಿಭಟನೆಗಳಿಗೆ ಫ್ರೆಂಚ್ ಅಧ್ಯಕ್ಷ ಎಮ್ಯುಎಲ್ ಮ್ಯಾಕ್ರನ್ ಅವರ ವಲಸೆ ನೀತಿಯೇ ಕಾರಣ ಎಂದು ಸೋಮವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ವಲಸೆಯ ಕುರಿತು ನೀಡಿದ ಸಲಹೆಯನ್ನು ಮ್ಯಾಕ್ರನ್ ಅನುಸರಿಸಿದ್ದರೆ ಈ ಅಶಾಂತಿಯನ್ನು ತಪ್ಪಿಸಬಹುದಿತ್ತು ಎಂದು ಟ್ರಂಪ್ ಹೇಳಿದ್ದಾರೆ.

ವೈಟ್‌ಹೌಸ್ ಹೊರಗೆ ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿದರು. ಫ್ರಾನ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರಿಗೆ ಅವಕಾಶ ನೀಡುವ ಬಗ್ಗೆ ತಾನು ವರ್ಷಗಳ ಹಿಂದೆಯೇ ಮ್ಯಾಕ್ರನ್ ಅವರಿಗೆ ಎಚ್ಚರಿಕೆ ನೀಡಿರುವುದಾಗಿ ಹೇಳಿದರು. “ಅವರು ನನ್ನ ಸ್ನೇಹಿತ. ಬಹಳ ಹಿಂದೆಯೇ ನಾನು ಅವರಿಗೆ ಹೇಳಿದ್ದೆ, ನೀವು ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಜಗತ್ತಿನ ಎಲ್ಲರನ್ನೂ ನೀವು ಒಳಗೆ ಬಿಡುತ್ತಿದ್ದೀರಿ. ಪ್ಯಾರಿಸ್ ಬಹಳ ಬೇಗನೆ ಮುಸ್ಲಿಂ ನಗರವಾಗಲಿದೆ, ಮತ್ತು ಅದು ಒಳ್ಳೆಯ ಡೀಲ್‌ ಅಲ್ಲ” ಎಂದು ಹೇಳಿದರು.

ವಲಸೆಯು ಫ್ರೆಂಚ್ ರಾಜಧಾನಿಯ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಿದೆ ಎಂದು ಟ್ರಂಪ್ ಆರೋಪಿಸಿದರು. ತಮ್ಮ ಹೇಳಿಕೆಗಳಲ್ಲಿ ಅವರು ಯಾವುದೇ ಅಂಕಿಅಂಶಗಳನ್ನು ನೀಡಲಿಲ್ಲ.

ಪ್ಯಾರಿಸ್, ಲಿಲ್, ನೈಸ್ ಮತ್ತು ಇತರ ನಗರಗಳಲ್ಲಿ ಕರ್ಫ್ಯೂಗಳು ಮತ್ತು ಸಾರ್ವಜನಿಕ ಸಭೆಗಳ ಮೇಲೆ ಮಿತಿಗಳನ್ನು ವಿಧಿಸುತ್ತಿರುವಂತೆ ಈ ಕಾಮೆಂಟ್‌ಗಳು ಬಂದಿವೆ. ವಾರದ ಕೊನೆಯಲ್ಲಿ ಗಲಭೆಗಳು, ದರೋಡೆಗಳು ಮತ್ತು ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಘರ್ಷಣೆಗಳ ನಂತರ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಪೊಲೀಸರು ಸುಮಾರು 2,400 ಜನರನ್ನು ಬಂಧಿಸಿದ್ದಾರೆ ಎಂದು ಫ್ರಾನ್ಸ್‌ನ ಆಂತರಿಕ ಸಚಿವಾಲಯ ತಿಳಿಸಿದೆ. ಸುಮಾರು 1,000 ಅಧಿಕಾರಿಗಳು ಗಾಯಗೊಂಡಿದ್ದಾರೆ. ಶನಿವಾರ ಹೃದಯಾಘಾತದಿಂದ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ. ಹಿಂಸಾಚಾರವು ಸುಮಾರು 3,000 ಅಂಗಡಿಗಳ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರ ಮತ್ತು ಚಿಲ್ಲರೆ ಒಕ್ಕೂಟ ವರದಿ ಮಾಡಿದೆ. ವಿನಾಶದಿಂದ ತೊಂದರೆಗೊಳಗಾದ ವ್ಯವಹಾರಗಳಿಗೆ ಸಹಾಯ ಮಾಡುವಂತೆ ಗುಂಪು ಸರ್ಕಾರವನ್ನು ಒತ್ತಾಯಿಸಿದೆ.

ಪ್ಯಾರಿಸ್ ಪೊಲೀಸರು ಸೋಮವಾರ ರಾತ್ರಿ 8 ಗಂಟೆಯಿಂದ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿದ್ದಾರೆ. ಮಂಗಳವಾರ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಪ್ಲೇಸ್ ಡಿ ಲಾ ರಿಪಬ್ಲಿಕ್ ಮತ್ತು ಲೆಸ್ ಹಾಲ್ಸ್ ಸುತ್ತಲೂ ಕರ್ಫ್ಯೂ ವಿಧಿಸಿದ್ದಾರೆ. ಈ ನಿಯಮಗಳನ್ನು ಜಾರಿಗೆ ತರಲು ಹೆಚ್ಚುವರಿ ಅಧಿಕಾರಿಗಳು ಆಗಮಿಸಿದ್ದಾರೆ.