ಮಧ್ಯಪ್ರದೇಶ | ವಿದ್ಯಾರ್ಥಿನಿಯರಿಗೆ ಮೂತ್ರ ಕುಡಿಸಿದ ಘಟನೆ; ರುಚಿ ಬದಲಿಸಲು ಚಾಕೊಲೇಟ್ ತಿನ್ನುವಂತೆ ಹೇಳಿದ ಮುಖ್ಯೋಪಾಧ್ಯಾಯ

0
292

ಸನ್ಮಾರ್ಗ ವಾರ್ತೆ

ಗುನಾ: ಮಧ್ಯಪ್ರದೇಶದ ಗುನಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರಿಗೆ ಬಲವಂತವಾಗಿ ಮೂತ್ರ ಕುಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದಾಗ, ಅವರು ಚಾಕೊಲೇಟ್ ಖರೀದಿಸಿ ತಿನ್ನುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಗುನಾ ಜಿಲ್ಲೆಯ ಅರೋನ್ ಅಭಿವೃದ್ಧಿ ಬ್ಲಾಕ್‌ನ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ. 5ನೇ ತರಗತಿಯ ವಿದ್ಯಾರ್ಥಿಯೊಬ್ಬ ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ, ತನ್ನ ಸಹಪಾಠಿ ಬಾಲಕಿಯರಿಗೆ ಕುಡಿಸಿದ್ದಾನೆ ಎಂದು ದೂರು ನೀಡಲಾಗಿದೆ. ಬಾಲಕಿಯರು ತಕ್ಷಣವೇ ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಾರೆ. ಆದರೆ, ಬಾಯಿಯ ರುಚಿಯನ್ನು ಬದಲಾಯಿಸಲು 10 ರೂ. ಮೌಲ್ಯದ ಚಾಕೊಲೇಟ್ ಖರೀದಿಸುವಂತೆ ಮುಖ್ಯೋಪಾಧ್ಯಾಯರು ಸಲಹೆ ನೀಡಿದ್ದಾರೆ ಎಂದು ಗುನಾ ಜಿಲ್ಲಾ ದಂಡಾಧಿಕಾರಿ ಕಿಶೋರ್ ಕುಮಾರ್ ಕನಾಲ್ ತಿಳಿಸಿದ್ದಾರೆ.

ಘಟನೆಯ ನಂತರ ಬಾಲಕಿಯರ ಸಂಬಂಧಿಕರು ಮತ್ತು ಸ್ಥಳೀಯರು ಶಾಲೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ತಪ್ಪು ಮಾಡಿದ ಬಾಲಕ ಹಾಗೂ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಶಾಲೆಯ ಬಳಿಗೆ ಆಗಮಿಸಿ ಬಾಲಕಿಯರು ಮತ್ತು ಬಾಲಕನ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅರೋನ್‌ನ ಉಪ ವಿಭಾಗೀಯ ದಂಡಾಧಿಕಾರಿ ಮಂಜೂಷಾ ಖತ್ರಿ ಅವರು ಪ್ರತಿಕ್ರಿಯಿಸಿ, ತಹಶೀಲ್ದಾರ್ ಹಾಗೂ ಬ್ಲಾಕ್ ಶಿಕ್ಷಣ ಅಧಿಕಾರಿಯನ್ನು ಶಾಲೆಗೆ ಕಳುಹಿಸಲಾಗಿದೆ ಮತ್ತು ಮುಖ್ಯೋಪಾಧ್ಯಾಯರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.