ಸನ್ಮಾರ್ಗ ವಾರ್ತೆ
ಮುಂಬೈ: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಯೆಡ್ಶಿ ಗ್ರಾಮದಲ್ಲಿ ದೀಪಾವಳಿ ಆಚರಣೆಯ ವೇಳೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮುಂಜಾನೆ 2:30 ರ ಸುಮಾರಿಗೆ ಈ ಘಟನೆ ನಡೆದಿದೆ. ದೀಪಾವಳಿ ಆಚರಣೆಯ ಭಾಗವಾಗಿ ಹಚ್ಚಿದ ಪಟಾಕಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಮನೆ ಮತ್ತು ಕಿರಾಣಿ ಅಂಗಡಿಯನ್ನು ಹೊಂದಿದ್ದ ಎರಡು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ನೆಲಮಹಡಿಯಲ್ಲಿ ಕಿರಾಣಿ ಅಂಗಡಿ ಇತ್ತು. ಕುಟುಂಬದ ಮನೆ ಮೇಲಿನ ಮಹಡಿಯಲ್ಲಿತ್ತು. ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಎಣ್ಣೆ ಮತ್ತು ತುಪ್ಪ ಸಂಗ್ರಹಿಸಿಟ್ಟಿದ್ದರಿಂದ ಬೆಂಕಿ ವೇಗವಾಗಿ ಹರಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿತು ಖೋಕರ್ ಕಲ್ಯಾಣ್ ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಮನೆಯ ಮೇಲಿನ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಆರು ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತರನ್ನು ಉತ್ತಮ್ ತ್ರಿಂಬಕ್ ಕರಾಂಡೆ, ಚಂದ್ರಕಲಾ ಉತ್ತಮ್ ಕರಾಂಡೆ, ಗೋವಿಂದ್ ಉತ್ತಮ್ ಕರಾಂಡೆ, ಜ್ಯೋತಿ ಗೋವಿಂದ್ ಕರಾಂಡೆ, ಗಾಯತ್ರಿ ಗೋವಿಂದ್ ಕರಾಂಡೆ ಮತ್ತು ಸಿದ್ಧಿ ಗೋವಿಂದ್ ಕರಾಂಡೆ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.












