ಮಹಾರಾಷ್ಟ್ರ | ‘ಪಾಕಿಸ್ತಾನಿ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ: ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

0
258

ಸನ್ಮಾರ್ಗ ವಾರ್ತೆ

ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಪಾಕಿಸ್ತಾನಿ ಎನ್ನಲಾದ ಹಾಡಿಗೆ ನೃತ್ಯ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಿಟಿಐ ಶುಕ್ರವಾರ ವರದಿ ಮಾಡಿದೆ. ಆದರೆ, ಈ ಹಾಡು ಟರ್ಕಿಶ್ ದೂರದರ್ಶನ ಧಾರಾವಾಹಿ ‘ಅರ್ತುಗ್ರುಲ್’ (Ertuğrul) ನದ್ದಾಗಿದೆ ಎಂದು ಪ್ರಾಂಶುಪಾಲ ವಝಿಯೊದ್ದೀನ್ ಸಿದ್ದಿಕಿ ಪ್ರತಿಪಾದಿಸಿದ್ದಾರೆ.

ಈ ಕಾರ್ಯಕ್ರಮವು 2025 ರ ಫೆಬ್ರವರಿಯಲ್ಲಿ ನಡೆದಿತ್ತು ಎಂದು ವರದಿಯಾಗಿದೆ. ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕೃತ್ಯಗಳು, ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ತಪ್ಪು ಮಾಹಿತಿಯನ್ನು ಹರಡುವುದು ಮತ್ತು ಸಾರ್ವಜನಿಕ ಆತಂಕಕ್ಕೆ ಕಾರಣವಾಗುವ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ ಆರೋಪಗಳ ಅಡಿಯಲ್ಲಿ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪರ್ತೂರು ಪಟ್ಟಣದ ಶಾಲೆಯೊಂದರ ವಾರ್ಷಿಕ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಪಾಕಿಸ್ತಾನಿ ಹಾಡಿಗೆ ನೃತ್ಯ ಮಾಡಿದ್ದಾರೆ ಮತ್ತು ಪ್ರದರ್ಶನದ ಸಮಯದಲ್ಲಿ ಮಾಜಿ ಪಾಕಿಸ್ತಾನಿ ಕಮಾಂಡೋ ಮುಮ್ತಾಝ್‌ ಖಾದ್ರಿಯ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಪ್ರತಿಪಾದಿಸಿದ್ದವು ಎಂದು ಪಿಟಿಐ ವರದಿ ಮಾಡಿದೆ.

ಕಾರ್ಯಕ್ರಮದ ಅವಧಿಯಲ್ಲಿ ಪ್ರದರ್ಶಿಸಲಾದ ಭಾವಚಿತ್ರವು ಟರ್ಕಿಶ್ ಧಾರಾವಾಹಿಯ ನಟನದ್ದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ದೃಶ್ಯಾವಳಿಗಳನ್ನು ತಿರುಚಲಾಗಿದೆ ಎಂದು ಪ್ರಾಂಶುಪಾಲರು ಪ್ರತಿಪಾದಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವಿಷಯದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಬಾಬನ್‌ರಾವ್ ಲೋನಿಕರ್ ಆಗ್ರಹಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.