ಸುವೆಂದು ಅಧಿಕಾರಿಯನ್ನು ಹೊಗಳಿದ ಮಹುವಾ ಮೊಯಿತ್ರ

0
371

ಸನ್ಮಾರ್ಗ ವಾರ್ತೆ

ವೈಯಕ್ತಿಕವಾಗಿ ನನಗೆ ಸುವೆಂದು ಅಧಿಕಾರಿ ಜೊತೆ ಉತ್ತಮ ಸಂಬಂಧ ಇದೆ. ನಾವು ತೃಣ ಮೂಲದಲ್ಲಿ ಒಟ್ಟಿಗೆ ಇದ್ದಾಗ ಅವರು ನನಗೆ ತುಂಬಾ ಸಹಾಯ ಮಾಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಥಾನ ಸಿಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದನ್ನು ನಿರಾಕರಿಸಲಾಯಿತು. ಆ ರಾತ್ರಿ ಇಡೀ ನಾನು ಆಳುತ್ತಿದ್ದೆ. ಆ ಸಮಯದಲ್ಲಿ ಸುವೆಂದು ಮಾತ್ರ ನನ್ನನ್ನು ಸಮಾಧಾನ ಪಡಿಸಿ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ತೃಣ ಮೂಲ ಕಾಂಗ್ರೆಸ್ಸಿನ ಸಂಸದೆ ಮಹುವ ಮೊಯಿತ್ರ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ನಾನು 2016ರಲ್ಲಿ ಕರೀಂಪುರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗ ಯಾವುದೇ ಹಿರಿಯ ತೃಣ ಮೂಲ ನಾಯಕರು ನನ್ನ ಪರವಾಗಿ ಪ್ರಚಾರ ಮಾಡಲು ಬಂದಿರಲಿಲ್ಲ. ಆದ್ರೂ ಸುವೆಂದು ಅಧಿಕಾರಿ ನನ್ನ ಮೊದಲ ರಾಲಿಯನ್ನು ಮುನ್ನಡೆಸಿದರು ಎಂದು ಮಹುವ ಹೇಳಿದ್ದಾರೆ.

ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಸಂದರ್ಶನಕ್ಕೆ ಸಂಬಂಧಿಸಿದ ಭಾಗಗಳನ್ನು ಹಂಚಿಕೊಂಡಿದ್ದಾರೆ. ಭಿನ್ನಾಭಿಪ್ರಾಯದ ನಂತರ ಸುವೆಂದು ಅಧಿಕಾರಿ 2020ರಲ್ಲಿ ತೃಣ ಮೂಲ ಕಾಂಗ್ರೆಸ್ಸನ್ನು ತೊರೆದು ಬಿಜೆಪಿ ಸೇರಿದ್ದರು.

ಪಕ್ಷದಿಂದ ಬಂಡುಕೋರರ ಸಾಮೂಹಿಕ ನಿರ್ಗಮನವನ್ನು ತೃಣಮೂಲ ಕಾಂಗ್ರೆಸ್ಸಿನ ಶುದ್ಧೀಕರಣ ಎಂದು ಮಹುವಾ ಬಣ್ಣಿಸಿದ್ದಾರೆ. ಇದಕ್ಕೆ ಕಾರಣರಾದ ಸುವೆಂದು ಮತ್ತು ಬಿಜೆಪಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಮಮತಾ ಬ್ಯಾನರ್ಜಿ ನಾಯಕರೊಂದಿಗೆ ವೈಯಕ್ತಿಕ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. ಆದರೆ ತೃಣ ಮೂಲ ಕಾಂಗ್ರೆಸ್ಸಿನ ವೈಫಲ್ಯಕ್ಕೆ ಪಕ್ಷವು ಸ್ವಂತವಾಗಿ ಗೆಲ್ಲಲು ಅಸಮರ್ಥರಾದ ನಿಷ್ಪ್ರಯೋಜಕ ಜನರನ್ನು ಹೊತ್ತೈದದ್ದು ಕಾರಣ ಎಂದು ಮಹುವಾ ಮೊಯಿತ್ರ ಹೇಳಿದ್ದಾರೆ.

ಬಿಜೆಪಿ ಬಲವಾದ ಕೇಡರ್ ವ್ಯವಸ್ಥೆಯನ್ನು ಹೊಂದಿದೆ. ಅದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.