ಅರಬ್ ಜಗತ್ತಿನ ಇತಿಹಾಸದ ಮೊಟ್ಟಮೊದಲ ಮಹಿಳಾ ಫೈಟರ್ ಪೈಲಟ್ ಮೇಜರ್ ಮರಿಯಮ್ ಅಲ್ ಮನ್ಸೂರಿ

0
188

ಸನ್ಮಾರ್ಗ ವಾರ್ತೆ

ಯುಎಇ: ಯುದ್ಧವಿಮಾನಗಳ ಕಾಕ್‌ಪಿಟ್‌ಗಳು ಕೇವಲ ಪುರುಷರಿಗೆ ಮಾತ್ರ ಮೀಸಲು ಎಂಬ ಸಾಂಪ್ರದಾಯಿಕ ಕಲ್ಪನೆಗಳನ್ನು ಮುರಿದು, ಆಕಾಶಕ್ಕೆ ಚಿಮ್ಮಿದ ಮರಿಯಮ್ ಅಲ್ ಮನ್ಸೂರಿಯವರ ಜೀವನದ ಪ್ರಮುಖ ಮೈಲಿಗಲ್ಲುಗಳು ಇಲ್ಲಿವೆ. ವಾಯುಪಡೆಗೆ ಮಹಿಳೆಯರ ಪ್ರವೇಶವಿಲ್ಲದ ಕಾಲದಲ್ಲಿ, ಸೇವೆಯಲ್ಲಿದ್ದಾಗಲೂ ತಮ್ಮ ಕನಸನ್ನು ಮನಸ್ಸಿನಲ್ಲಿಟ್ಟುಕೊಂಡು, ನಂತರ ಯು.ಎ.ಇ. ವಾಯುಪಡೆಯು ಮಹಿಳೆಯರಿಗಾಗಿ ಕಾಕ್‌ಪಿಟ್ ಬಾಗಿಲು ತೆರೆದಾಗ ಮೊದಲ ಬ್ಯಾಚ್‌ನಲ್ಲೇ ಪ್ರವೇಶ ಪಡೆದರು.

ಜಗತ್ತಿನ ಅತ್ಯಾಧುನಿಕ ಎಫ್-16 (ಈ-16) ಯುದ್ಧವಿಮಾನವನ್ನು ಹಾರಿಸುವ ಮೂಲಕ ಅವರು ಈ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದರು. ಗ್ರೌಂಡ್ ಟ್ರೇನಿಂಗ್ ಹಾಗೂ ಕಾಕ್‌ಪಿಟ್ ಎರಡರಲ್ಲೂ ಸಮಾನವಾಗಿ ಮೇಲುಗೈ ಸಾಧಿಸಿ 2010 ರಲ್ಲಿ ಅಧಿಕೃತವಾಗಿ ನೇಮಕಗೊಂಡರು. 2014ರ ಸೆಪ್ಟೆಂಬರ್‌ನಲ್ಲಿ ಭಯೋತ್ಪಾದನೆ ವಿರುದ್ಧದ ಅಂತರರಾಷ್ಟ್ರೀಯ ಮೈತ್ರಿಕೂಟದ ವಾಯುದಾಳಿ ಕಾರ್ಯಾಚರಣೆಯಲ್ಲಿ (ಸಿರಿಯಾದಲ್ಲಿ ಐ.ಎಸ್. ವಿರುದ್ಧದ ಕಾರ್ಯಾಚರಣೆಯಲ್ಲಿ) ಯು.ಎ.ಇ. ವಾಯುಪಡೆಯ ತಂಡವನ್ನು ಮುನ್ನಡೆಸುವ ಮೂಲಕ ಅವರು ಅಪಾರ ಅಂತರರಾಷ್ಟ್ರೀಯ ಗಮನ ಸೆಳೆದಿದ್ದಾರೆ. ನಂತರ ಸ್ಕ್ವಾಡ್ರನ್ ಕಮಾಂಡರ್ ಹುದ್ದೆಗೂ ಏರಿದರು. 2014 ರಲ್ಲಿ ಯು.ಎ.ಇ. ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಪ್ರಥಮ ‘ಪ್ರೈಡ್ ಆಫ್ ದಿ ಯು.ಎ.ಇ’ ಪ್ರಶಸ್ತಿಯನ್ನು ಪಡೆದರು.

2015ರಲ್ಲಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಏಷ್ಯಾ ಸೊಸೈಟಿಯ ‘ಗೇಮ್ ಚೇಂಜರ್’ ಜಾಗತಿಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಮಹಿಳೆ ಎಂಬ ಕರುಣೆ ಅಥವಾ ವಿಶೇಷ ಸೌಲಭ್ಯವಲ್ಲ, ಬದಲಿಗೆ ಕಟ್ಟುನಿಟ್ಟಾದ ವೃತ್ತಿಪರತೆಯೇ ತನ್ನ ದಾರಿ ಎಂದು ಸಾಬೀತುಪಡಿಸಿದ ಮೇಜರ್ ಮರಿಯಮ್ ಅಲ್ ಮನ್ಸೂರಿ, ಎಲ್ಲೆಗಳನ್ನು ಮೀರಿ ಬೆಳೆಯಲು ಬಯಸುವ ಪ್ರತಿಯೊಬ್ಬ ಹೆಣ್ಣುಮಗಳಿಗೂ ಸದಾಕಾಲ ಸ್ಪೂರ್ತಿಯಾಗಿದ್ದಾರೆ.