ಬಳೆ ವ್ಯಾಪಾರಿ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಪ್ರತಿಭಟಿಸಿದವರಿಗೆ ಪಾಕಿಸ್ತಾನದೊಂದಿಗೆ ಸಂಬಂಧವಿದೆ: ಸಚಿವ ನರೋತ್ತಮ್ ಮಿಶ್ರ

0
506

ಸನ್ಮಾರ್ಗ ವಾರ್ತೆ

ಭೋಪಾಲ: ಹಿಂದೂ ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಯುವಕನಿಗೆ ಕ್ರೂರವಾಗಿ ಥಳಿಸಿದ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಪಾಕಿಸ್ತಾನದೊಂದಿಗೆ ಸಂಬಂಧವಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರ ಪ್ರತಿಕ್ರಿಯಿಸಿದ್ದಾರೆ.

ಈ ವಿಷಯದಲ್ಲಿ ಪ್ರತಿಭಟನೆ ಮಾಡಿದ ಅಲ್ತಮಾಸ್ ಖಾನ್‍‌‌‌ಗೆ ಉವೈಸಿಯ ಐಎಎಂಐಎಂನೊಂದಿಗೆ ಸಂಬಂಧವಿದ್ದು. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಬಳೆ ವ್ಯಾಪಾರಿ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾದ ಈತನ ಸಹಿತ ನಾಲ್ವರು ಫೇಸ್‍ಬುಕ್ ಮೂಲಕ, ವಾಟ್ಸಪ್ ಮೂಲಕ ಪಾಕಿಸ್ತಾನದೊಂದಿಗೆ ಸಂಬಂಧವಿದ್ದು ಮಧ್ಯಪ್ರದೇಶದ ಶಾಂತಿ ಕೆಡಿಸುವುದು ಇವರ ಉದ್ದೇಶ ಎಂದು ಸಚಿವ ಮಿಶ್ರಾ ಹೇಳಿದರು.

ಮಧ್ಯಪ್ರದೇಶ ಇಂದೋರಿನ ಗೋವಿಂದ್ ನಗರದಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದ 25 ವರ್ಷದ ಯುವಕ ತಸ್ಲೀಮ್‌ ಮೇಲೆ ಆಗಸ್ಟ್ 22ರಂದು ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು. ಹಿಂದೂ ಏರಿಯಕ್ಕೆ ಇನ್ನು ಬರಬಾರದು. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಬಳೆ ಮಾರುತ್ತೀಯಾ ಎಂದು ಕೇಳಿ ಹಲ್ಲೆ ನಡೆಸಲಾಗಿತ್ತು. ಯುವಕನಿಗೆ ಕ್ರೂರವಾಗಿ ಹಲ್ಲೆ ನಡೆಸಿದ್ದಲ್ಲದೆ ವ್ಯಾಪಾರದ ವಸ್ತುಗಳನ್ನು ನಾಶಪಡಿಸಿ ಆತನ ಹಣವನ್ನು ಲೂಟಿಗೈಯ್ಯಲಾಗಿತ್ತು. ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದ ಶುರುವಾಗಿತ್ತು. ಘಟನೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್ ರಂಗಪ್ರವೇಶಿಸಿದ್ದರು.

ಮಿಶ್ರಾ ಇದು ಕೋಮು ದಾಳಿಯಲ್ಲ ಎಂದು ಹೇಳಿದ್ದು, ಮುಸ್ಲಿಮ್ ವ್ಯಾಪಾರಿ ಹಿಂದೂ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದ. ಸಾವನ್ ಉತ್ಸವದಲ್ಲಿ ನಮ್ಮ ಹೆಣ್ಣು ಮಕ್ಕಳು ಧರಿಸುವ ಬಳೆಗಳು, ಮೆಹಂದಿ ಮಾರಾಟ ಮಾಡುತ್ತಿದ್ದ ಎಂದು ನರೋತ್ತಮ ಮಿಶ್ರ ಹೇಳಿದ್ದರು. ಸುಳ್ಳು ಹೇಳಿ ವ್ಯಾಪಾರ ಮಾಡಿದ್ದರಿಂದ ಹಲ್ಲೆ ನಡೆದಿತ್ತು ಎಂದು ಅವರು ಈ ಹಿಂದೆ ಸಮರ್ಥಿಸಿಕೊಂಡಿದ್ದರು. ಘಟನೆಯನ್ನು ವಿರೋಧಿಸಿ ಜನರು ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ ಬಳಿಕ ಆರೋಪಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.