ಸನ್ಮಾರ್ಗ ವಾರ್ತೆ
ಬೆಂಗಳೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿ ತಂದೆಯನ್ನು ಮಕ್ಕಳೇ ಇರಿದು ಕೊಲೆ ಮಾಡಿದ ಘಟನೆ ಶ್ರೀರಂಗಪಟ್ಟಣದ ಕರೆಮಗಳು ಕೊಪ್ಪಲುನಲ್ಲಿ ನಡೆದಿದೆ. ಮಕ್ಕಳಿಂದ ಹತ್ಯೆಯಾದ ವ್ಯಕ್ತಿ ಅರುವತ್ತೆಂಟು ವರ್ಷದ ಮರಿಕಾಳಯ್ಯ ಎಂದು ಗುರುತಿಸಲಾಗಿದೆ. ಹತ್ಯೆ ಆರೋಪದಲ್ಲಿ ಇವರ ಪುತ್ರರಾದ ಶಶಿಕುಮಾರ್, ರಾಜೇಶ್ರನ್ನು ಪೊಲೀಸರು ಬಂಧಿಸಿದ್ದಾರೆ.
ಮಾರಿಕಾಳಯ್ಯ ಎಂಟು ಎಕರೆ ಜಮೀನು 30 ಲಕ್ಷಕ್ಕೆ ಮಾರಲು ತೀರ್ಮಾನಿಸಿದ್ದರು. ಇಬ್ಬರು ಮಕ್ಕಳೂ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿದ್ದು, 30 ಲಕ್ಷದಲ್ಲಿ ಹತ್ತು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಜಮೀನು ನೋಂದಣಿಗೆ ಸಹಿ ಹಾಕುವುದಾಗಿ ಮರಿಕಾಳಯ್ಯ ಹೇಳಿದ್ದರು. ಆದರೆ, ಮಕ್ಕಳು ಹಣ ಕೊಡಲಿಲ್ಲ, ಜಾಗ ನೋಂದಣಿ ಸಮಯದಲ್ಲಿ ಹೀಗೆ ಮಾಡಿದ್ದರಿಂದ ಮರಿಕಾಳಯ್ಯ ಸಹಿ ಹಾಕದೆ ಮನೆಗೆ ತೆರಳಿದ್ದರು.
ನಂತರ ಅವರು ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಳೆದ ದಿವಸ ರಾತ್ರೆ ಗ್ರಾಮಕ್ಕೆ ಬಂದ ಮಕ್ಕಳು ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಹಲವು ಇರಿತಕ್ಕೊಳಗಾದ ಮರಿಕಾಳಯ್ಯರನ್ನು ಊರಿನವರು ಮೈಸೂರಿನ ಆಸ್ಪತ್ರೆಗೆ ಕರೆತಂದರೂ ಅವರು ಅಸುನೀಗಿದ್ದರು. ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.












