ಮಂಗಳೂರು | ಹಜ್‌ ಯಾತ್ರಿಕರ ಜಿಲ್ಲಾ ಮಾಹಿತಿ ಕೇಂದ್ರ ಆರಂಭ

0
153

ಸನ್ಮಾರ್ಗ ವಾರ್ತೆ

ದ.ಕ.ಜಿಲ್ಲೆಯಿಂದ ತೆರಳಲಿರುವ ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಮತ್ತು ಮಾಹಿತಿ ಒದಗಿಸುವ ಉದ್ದೇಶದಿಂದ ಜಿಲ್ಲಾ ಮಾಹಿತಿ ಕೇಂದ್ರ ಮಂಗಳೂರು ಹಜ್ ಕಚೇರಿಯು ಮುಡಿಪುವಿನ ಮಜ್ಜಿಸ್ ಎಜು ಪಾರ್ಕ್‌ನಲ್ಲಿ ಆರಂಭಗೊಂಡಿದೆ.

ಹಜ್ ಯಾತ್ರಿಕರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವಾಗಲು ರಾಜ್ಯ ಹಜ್ ಸಮಿತಿ ಪ್ರಯತ್ನಿಸಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರಿಗಳು ಸಲ್ಲಿಸಿದ ದಾಖಲೆ ಪತ್ರಗಳನ್ನು ಮುಡಿಪುವಿನ ಮಾಹಿತಿ ಕೇಂದ್ರಕ್ಕೆ ತಂದುಕೊಟ್ಟರೆ, ಅದನ್ನು ರಾಜ್ಯ ಹಜ್ ಸಮಿತಿಗೆ ತಲುಪಿಸಲಾಗುವುದು. ಆರೋಗ್ಯ ತಪಾಸಣೆ ಹಾಗೂ ತರಬೇತಿಯನ್ನು ಆಯೋಜಿಸಲಾಗುವುದು. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9741770138 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ಬಾರಿ ರಾಜ್ಯದಿಂದ ಹಜ್ ಯಾತ್ರೆಗೆ 8697 ಮಂದಿ ಆಯ್ಕೆಯಾಗಿದ್ದು, ದ.ಕ ಜಿಲ್ಲೆಯ 1,078, ಉಡುಪಿಯ 116, ಕೊಡಗು ಜಿಲ್ಲೆಯ 101 ಮಂದಿ ಇದ್ದಾರೆ. ಜಿಲ್ಲೆಯ 251, ಉಡುಪಿಯ 22 ಹಾಗೂ ಕೊಡಗು ಜಿಲ್ಲೆಯ 25 ಸೇರಿದಂತೆ ರಾಜ್ಯದ 2,310 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ ಎಂದರು.

ಮಂಗಳೂರಿನಲ್ಲಿ ಹಜ್ ಭವನ ನಿರ್ಮಿಸಲು ಸರ್ಕಾರ ಹಲವು ವರ್ಷಗಳ ಹಿಂದೆಯೇ ಅನುದಾನ ಮಂಜೂರು ಮಾಡಿದ್ದರೂ ನಿವೇಶನ ಅಂತಿಮಗೊಳಿಸುವುದು ವಿಳಂಬವಾಗಿತ್ತು. ಇದೀಗ ಉದ್ದೇಶಿತ ನಿವೇಶನಕ್ಕೆ ಸಂಬಂಧಿಸಿದ ಸಮಸ್ಯೆ ಇತ್ಯರ್ಥಗೊಂಡಿದ್ದು, ಶೀಘ್ರದಲ್ಲೇ ಹಜ್ ಭವನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.

ಕರ್ನಾಟಕ ರಾಜ್ಯ ಹಜ್ ಸಮಿತಿ ಮಾಜಿ ಸದಸ್ಯ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಶೀರ್ ಮುಡಿಪು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.