ಮಂಗಳೂರನ್ನು ಪ್ರಕ್ಷುಬ್ದಗೊಳಿಸಿದ್ದು ಯಾರು? ಪೊಲೀಸರೋ ಪ್ರತಿಭಟನಾಕಾರರೋ ಅಥವಾ…? ಸನ್ಮಾರ್ಗ ತನಿಖಾ ವರದಿ

0
2173

ಡಿಸೆಂಬರ್ 19ರಂದು ದ.ಕ. ಜಿಲ್ಲೆಯ ಮಂಗಳೂರಿನ ಸ್ಟೇಟ್‍ಬ್ಯಾಂಕ್ ಬಳಿ ಮಧ್ಯಾಹ್ನದ ಬಳಿಕ ಎನ್.ಆರ್.ಸಿ. ಮತ್ತು ಪೌರತ್ವ ಕಾನೂನಿನ (ಸಿಎಎ) ವಿರುದ್ಧ ನಡೆದ ನಾಗರಿಕ ಪ್ರತಿ ಭಟನೆ, ಪೊಲೀಸರ ಲಾಠಿ ಚಾರ್ಜು, ಕಲ್ಲು ತೂರಾಟ, ಅಶ್ರು ವಾಯು ಪ್ರಯೋಗ ಮತ್ತು ಕೊನೆಗೆ ಗೋಲಿಬಾರ್ ಗೆ ಎರಡು ಜೀವಗಳು ಬಲಿಯಾದ ನಂತರದ ಈಗಿನ ಸ್ಥಿತಿಯನ್ನು ‘ದಾರುಣ ಮೌನ’ ಎಂದು ಕರೆಯಬಹುದು. ಈ ಮೌನದ ಹಿಂದೆ ಆಕ್ರೋಶ ಇದೆ, ಆತಂಕ ಇದೆ, ಅನ್ಯಾಯದ ಭಾವ ಇದೆ, ದುಃಖ ಇದೆ, ಕಣ್ಣೀರು ಮತ್ತು ಅಪನಂಬಿಕೆ ಇದೆ. ಮಂಗಳೂರಿನ ಪೊಲೀಸ್ ವ್ಯವಸ್ಥೆಯು ಕೋಮು ಪಕ್ಷಪಾತಿಯಾಗಿದೆ ಎಂಬ ಈಗಾಗಲೇ ಇರುವ ಆರೋಪವನ್ನು ಮತ್ತಷ್ಟು ಗಟ್ಟಿಗೊಳಿಸಿದ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಮುಸ್ಲಿಮ್ ಸಮುದಾಯ ನಂಬಿಕೆಯನ್ನೇ ಕಳಕೊಳ್ಳುವ ರೀತಿಯ ಹತಾಶೆಯ ಮಾತುಗಳಿಗೆ ಡಿಸೆಂಬರ್ 19ರ ಘಟನೆ ಅವಕಾಶ ಕಲ್ಪಿಸಿದೆ. 10 ವರ್ಷಗಳ ಹಿಂದೆ ಆಗಿದ್ದರೆ ಪೊಲೀಸಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಏನನ್ನು ಹೇಳುತ್ತಾರೋ ಅದನ್ನೇ ನಂಬುವ ಮತ್ತು ಅವೇ ಮಾತುಗಳನ್ನು ಜನರು ಒಬ್ಬರಿಂದೊಬ್ಬರು ಹಂಚುತ್ತಾ ಅದರ ಆಧಾರದಲ್ಲಿ ತಂತಮ್ಮ ಅಭಿಪ್ರಾಯಗಳನ್ನು ರೂಪಿಸುವ ಸ್ಥಿತಿಯಿತ್ತು. ಕೆಲವೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗುವ ತನಿಖಾ ವರದಿಗಳಿಗೂ ಈ ಅಭಿಪ್ರಾಯ ರೂಪಣೆಯಲ್ಲಿ ಪಾತ್ರ ಇತ್ತು. ಆದರೆ,

ಈಗ ಹಾಗಿಲ್ಲ. ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿ ಕರೆದು ಮಾಹಿತಿ ಕೊಡುವುದಕ್ಕಿಂತ ಮೊದಲೇ ಘಟನೆಯ ನೇರ ಪ್ರಸಾರ ಟಿ.ವಿ. ಮಾಧ್ಯಮಗಳಲ್ಲಾಗಿರುತ್ತದೆ. ವೆಬ್ ಪೋರ್ಟಲ್‍ಗಳಲ್ಲಿ ಸುದ್ದಿ ಕ್ಷಣಕ್ಷಣಕ್ಕೂ ಪ್ರಸಾರವಾಗುತ್ತಿರುತ್ತದೆ. ಇದಕ್ಕಿಂತಲೂ ಪರಿ ಣಾಮಕಾರಿಯಾಗಿ ವೀಡಿಯೋಗಳ ಮೂಲಕ ದೇಶ-ವಿದೇಶಗಳೆಲ್ಲೆಡೆಗೆ ಸುದ್ದಿಗಳ ಪ್ರಸಾರ ಆಗುತ್ತಿರುತ್ತದೆ. ಆದ್ದರಿಂದಲೇ, ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ಆಯುಕ್ತ ಡಾ| ಹರ್ಷ ಅವರು ಸುದ್ದಿಗೋಷ್ಠಿಯಲ್ಲಿ ಏನನ್ನು ಹಂಚಿಕೊಂಡರೋ ಅದನ್ನು ಸಾರಾಸಗಟಾಗಿ ಒಪ್ಪುವವರ ಸಂಖ್ಯೆ ಬಹಳ ಬಹಳ ಕಡಿಮೆ. ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ಅವರ ಮಾತುಗಳನ್ನು ಒಪ್ಪುವವರಿರಬಹುದು ಎಂದಷ್ಟೇ ಹೇಳಬೇಕಾಗುತ್ತದೆ. ಗಲಭೆಯಲ್ಲಿ ಗಾಯಗೊಂಡವರು, ಗಲಭೆಯನ್ನು ಹತ್ತಿರದಿಂದ ನೋಡಿದವರು ಮತ್ತು ಅಷ್ಟೂ ವೀಡಿಯೋಗಳನ್ನು ವೀಕ್ಷಿಸಿದವರು ಯಾರೂ ಕೂಡಾ ಪ್ರತಿಭಟನೆಯಲ್ಲಿ 7 ಸಾವಿರ ಮಂದಿ ಭಾಗಿಯಾಗಿದ್ದರು ಎಂಬ ಡಾ| ಪಿ.ಎನ್. ಹರ್ಷ ಅವರ ಹೇಳಿಕೆಯನ್ನು ಒಪ್ಪುವುದೇ ಇಲ್ಲ. 6ರಿಂದ 7 ಸಾವಿರ ಮಂದಿ ಪ್ರತಿಭಟನಾಕಾರರು ಬಂದರ್ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು’ ಎಂದು ಆಯುಕ್ತರು ಹೇಳಿದ್ದರು. ಆದರೆ,

ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಡಿಸಿಪಿ ಅರುಣಾಂಶುಗಿರಿ ಅವರು ದಾಖಲಿಸಿರುವ ಎಫ್‍ಐಆರ್ ನಲ್ಲಿ 1500ದಿಂದ 2000 ಪ್ರತಿಭಟನಾಕಾರರು ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು ಎಂದು ನಮೂದಿಸಿದ್ದಾರೆ. ಪೊಲೀಸ್ ಆಯುಕ್ತರ ಮಾತು ಎಷ್ಟು ಸುಳ್ಳು ಎಂಬುದಕ್ಕೆ ಇದು ಒಂದು ಉದಾಹರಣೆ ಅಷ್ಟೇ. ನಿಜ ಏನೆಂದರೆ, 150ರಿಂದ 300ರ ನಡುವೆ ಪ್ರತಿಭಟನಾಕಾರರು ಇದ್ದರು ಎಂಬುದು ಸ್ಥಳೀಯರ ಅಭಿಪ್ರಾಯ. ಹಾಗೆಯೇ,

ಡಿಸೆಂಬರ್ 19ಕ್ಕಿಂತ ಮುಂಚೆ ಮಂಗಳೂರಿನಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ. ಆದರೆ ಈ ಯಾವ ಪ್ರತಿಭಟನೆಯೂ ಹಿಂಸಾತ್ಮಕ ಸ್ವರೂಪವನ್ನು ಪಡೆದೇ ಇಲ್ಲ. ಹೀಗಿರುವಾಗ, ಸೆಕ್ಷನ್ 144 ಜಾರಿಗೊಳಿಸಿದ್ದೇಕೆ, ಪ್ರತಿಭಟನೆಯನ್ನು ತಡೆಯುವ ಉದ್ದೇಶದ ಹೊರತು ಬೇರೆ ಇನ್ನೇನು ಕಾರಣ ಇದಕ್ಕೆ ಎಂದು ನಾಗರಿಕರು ಪ್ರಶ್ನಿಸುತ್ತಾರೆ.

ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಉದ್ರೇಕಗೊಳಿಸಿದ್ದೇ ಸೆಕ್ಷನ್ 144 ಎಂಬುದು ಸ್ಥಳೀಯರ ಅಭಿಪ್ರಾಯ. ಕೆಲವೇ ಕೆಲವು ಮಂದಿ ಸ್ಟೇಟ್‍ಬ್ಯಾಂಕ್ ಬಳಿ ಸೇರಿ ಸಿಎಎಯ ವಿರುದ್ಧ ಘೋಷಣೆ ಕೂಗತೊಡಗಿದಾಗ ಪೊಲೀಸರು ಲಾಠಿ ಬೀಸಿದರು. ಬಸ್ಸಿಗೆ ಕಾಯುತ್ತಿದ್ದವರು ಮತ್ತು ಅಂಗಡಿ ಮುಂಗಟ್ಟುಗಳ ಎದುರು ನಿಂತವರ ಮೇಲೂ ಲಾಠಿಯನ್ನು ಬೀಸಲಾಯಿತು. ಸೇರಿದವರು ಚೆಲ್ಲಾಪಿಲ್ಲಿಯಾದರು. ಸುದ್ದಿ ಎಲ್ಲೆಡೆ ಹರಡಿತು. ಜನರು ಸೇರತೊಡಗಿದರು. ಕಲ್ಲು ತೂರಾಟ, ಪ್ರತಿಯಾಗಿ ಪೊಲೀಸರಿದಲೂ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ ಮತ್ತು ಗುಂಡು ಹಾರಾಟವೂ ನಡೆಯಿತು. ಸ್ಥಳೀಯ ಯಾರಲ್ಲೇ ಕೇಳಿದರೂ ಮತ್ತು ಗಾಯಗೊಂಡವರಲ್ಲಿ ಪ್ರಶ್ನಿಸಿದರೂ ಪ್ರತಿಯೊಬ್ಬರೂ ಗೋಲಿಬಾರಿನ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸುತ್ತಾರೆ. ಉದ್ದೇಶಪೂರ್ವಕವಾಗಿ ಮತ್ತು ತೀರಾ ಬೇಜವಾಬ್ದಾರಿಯಿಂದ ಗೋಲಿಬಾರ್ ನಡೆಸಲಾಗಿದೆ ಎಂದು ಅವರೆಲ್ಲ ಆರೋಪಿಸುತ್ತಾರೆ. ಅದಕ್ಕೆ ಸಾಕ್ಷ್ಯವಾಗಿ ಪೊಲೀಸ್ ಮಾತುಕತೆಯ ವೀಡಿಯೋವನ್ನೂ ತೋರಿಸುತ್ತಾರೆ. ‘ಇಷ್ಟು ಗುಂಡು ಹಾರಿಸಿಯೂ ಒಬ್ಬರೂ ಸತ್ತಿಲ್ವಾ’ ಎಂದು ಇನ್ಸ್ ಪೆಕ್ಟರ್ ಎಂದು ಹೇಳಲಾದ ಒಬ್ಬರು ಇನ್ನೊಬ್ಬರೊಂದಿಗೆ ಪ್ರಶ್ನಿಸುವ ವೀಡಿಯೋ ಇದರಲ್ಲಿ ಒಂದು. ಟಿ.ವಿ. ಮಾಧ್ಯಮಗಳೂ ಈ ವೀಡಿಯೋವನ್ನು ಪ್ರಸಾರ ಮಾಡಿ ಪೊಲೀಸ್ ಪಡೆಯ ನೈತಿಕತೆಯನ್ನು ಪ್ರಶ್ನಿಸಿವೆ. ಕೇಂದ್ರ ಮಂತ್ರಿ ಸದಾನಂದ ಗೌಡ ಅವರೂ ಆ ವೀಡಿಯೋವನ್ನು ವೀಕ್ಷಿಸಿ ‘ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗಬೇಕು’ ಎಂದು ಹೇಳಿದ್ದಾರೆ. ಜನರ ಮೊಬೈಲ್‍ನಲ್ಲಿರುವ ಘಟನೆಯ ಅಷ್ಟೂ ವೀಡಿಯೋಗಳನ್ನು ಒಂದೆಡೆ ಕಲೆಹಾಕಿ ಒಂದು ಕ್ಷಣ ನಿಷ್ಪಕ್ಷಪಾತವಾಗಿ ಯೋಚಿಸಿದರೂ ಸಾಕು, ಇಡೀ ಘಟನೆಯಲ್ಲಿ ಪೊಲೀಸ್ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತದೆ. ಪ್ರತಿಭಟನಾಕಾರರ ಮೇಲೆ ಸೇಡು ತೀರಿಸಿಕೊಳ್ಳುವ ಧಾವಂತವನ್ನು ವೀಡಿಯೋ ದೃಶ್ಯಗಳು ಸ್ಪಷ್ಟಪಡಿಸುತ್ತವೆ. ಅನಗತ್ಯವಾಗಿ ಲಾಠಿ ಮತ್ತು ಬಂದೂಕಿನ ಪ್ರಯೋಗವಾಗಿರುವುದು ಮತ್ತು ಯದ್ವಾತದ್ವಾ ಲಾಠಿ ಬೀಸಿರುವುದು ಗೊತ್ತಾಗುತ್ತದೆ.

ಈ ವರದಿಯನ್ನು ತಯಾರಿಸುವಾಗ (ಡಿ. ಆದಿತ್ಯವಾರ) ಐಸಿಯುನಲ್ಲಿ ಇಬ್ಬರು ಮತ್ತು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ದೇಹವಿಡೀ ಬ್ಯಾಂಡೇಜ್‍ಗಳನ್ನು ಸುತ್ತಿಕೊಂಡ ಐವರು ಎರಡು ಖಾಸಗಿ ಆಸ್ಪತ್ರೆಗಳಲ್ಲಿದ್ದರು. ಮಂಗಳೂರಿನ ಮಾಜಿ ಮೇಯರ್ ಅಶ್ರಫ್ ಮತ್ತು ಉಳ್ಳಾಲಬೈಲ್ ಬೊಟ್ಟುವಿನ ಇಮ್ರಾನ್- ಈ ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರು. ಇವರ ಪೈಕಿ ಮೇಯರ್ ಅಶ್ರಫ್ ಅವರಂತೂ ಪೊಲೀಸ್ ಅಧಿಕಾರಿಯೋರ್ವರ ಕರೆಯ ಮೇರೆಗೆ ಘಟನಾ ಸ್ಥಳಕ್ಕೆ ಬಂದಿದ್ದರು. ಪ್ರತಿಭಟನೆಯಲ್ಲಿ ತೊಡಗಿದವರನ್ನು ಸಮಾಧಾನಪಡಿಸುವಂತೆ ಪೊಲೀಸ್ ವ್ಯವಸ್ಥೆ ಅವರನ್ನು ಕೋರಿಕೊಂಡಿತ್ತು. ಅವರು ಆ ಜವಾಬ್ದಾರಿಯ ನಿರ್ವಹಣೆಯಲ್ಲಿದ್ದಾಗಲೇ ತಲೆಗೆ ಬಲವಾದ ಗಾಯವಾಗಿದೆ. ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಾರೆ. ಪೊಲೀಸರು ಹಾರಿಸಿದ ಗುಂಡು ಅವರ ತಲೆಯನ್ನು ಜಜ್ಜಿ ಹೋಗಿದೆ ಎಂದು ಕುಟುಂಬಸ್ಥರು ಹೇಳುತ್ತಾರೆ. ಆದರೆ, ಪೊಲೀಸರು ಅದನ್ನು ಕಲ್ಲಿನೇಟು ಎಂದಿದ್ದಾರೆ. ಆದ್ದರಿಂದ, ವೈದ್ಯರ ಪರೀಕ್ಷಾ ಫಲಿತಾಂಶದ ಬಳಿಕವೇ ಇದು ಸ್ಪಷ್ಟವಾಗಬೇಕಿದೆ. ಹಾಗೆಯೇ,

5 ಮಂದಿ ಗಾಯಾಳುಗಳ ಸ್ಥಿತಿಯಂತೂ ಕರುಣಾಜನಕ. ಬೇಗನೇ ಎದ್ದುಹೋಗುವ ಸ್ಥಿತಿಯಲ್ಲಿ ಅವರಾರೂ ಇಲ್ಲ. ಗಾಯದೊಂದಿಗೆ ಪ್ರತಿದಿನ ಏಗಬೇಕಾದ ಮತ್ತು ಗುಣಮುಖ ವಾಗುವವರೆಗೆ ಮನೆ ನಿರ್ವಹಣೆಯ ಬಗ್ಗೆ ಚಿಂತಿಸುತ್ತಾ ಕೊರಗಬೇಕಾದ ಸ್ಥಿತಿ ಇವರದು. ಒಂದುಕಡೆ ದೈಹಿಕ ನೋವಾದರೆ ಇನ್ನೊಂದೆಡೆ ಮಾನಸಿಕ ನೋವು- ಇವೆರಡರ ನಡುವೆ ಇವರ ಬದುಕು ಸಾಗಬೇಕಿದೆ. ಅಂದಹಾಗೆ,

ಗೋಲಿಬಾರ್ ನಿಂದಾಗಿ ಸಾವಿಗೀಡಾದ ಎರಡು ಮನೆಗಳೂ ಗಾಢ ಮೌನದಲ್ಲಿವೆ. ಕುದ್ರೋಳಿಯ ರಹ್ಮತ್‍ನಗರದಲ್ಲಿರುವ ನೌಶೀರ್ ನ ತಾಯಿಯ ಕಣ್ಣಲ್ಲಿ ನೀರು ಬಿಟ್ಟರೆ ಮಾತಿಲ್ಲ. ಎಲ್ಲವನ್ನೂ ಕಣ್ಣೀರೇ ಹೇಳುತ್ತದೆ. ನೌಶೀನ್‍ನ ತಂದೆ ಗಲ್ಫ್ ಗೆ ತೆರಳಿ 5 ತಿಂಗಳಷ್ಟೇ ಆಗಿದೆ. ಕುಕ್ಕಿಂಗ್ ಕೆಲಸ. ಬಾಡಿಗೆ ಮನೆ. ನೌಶೀನ್ ಕಲಿಕೆ 8ನೇ ತರಗತಿ. ನೌಶೀನ್‍ನ ಅಣ್ಣ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕ್ಯಾಲಿಕಟ್‍ನಲ್ಲಿ ಜ್ಯೂಸ್ ಅಂಗಡಿಯಲ್ಲಿ ದುಡಿಯುತ್ತಿದ್ದಾನೆ. ತಂಗಿ ಶಾಲೆಗೆ ಹೋಗುತ್ತಾಳೆ. ಸಾಮಾನ್ಯವಾಗಿ ನೌಶೀನ್ ಮಧ್ಯಾಹ್ನ ಊಟ ಮಾಡಲು ಮನೆಗೆ ಬರುತ್ತಿರಲಿಲ್ಲ. ವೆಲ್ಡಿಂಗ್ ಕೆಲಸದ ನಡುವೆ ಅಲ್ಲಿಯೇ ಹೊಟೇಲಲ್ಲಿ ಊಟ ಮಾಡುತ್ತಿದ್ದ. ಆದರೆ, ಆ ದಿನ ಮನೆಗೆ ಬಂದಿದ್ದ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂದರ್ ನ ಕಸೈಗಲ್ಲಿಯ ಅಂಗಡಿಯಿಂದ ಮನೆಗೆಂದು ಬೇಗ ಹೊರಟಿದ್ದ. ಇದೇ ಸಂದರ್ಭದಲ್ಲಿ ಆತನ ಬೆನ್ನಿಗೆ ಗುಂಡು ಬಿದ್ದಿದೆ ಎಂದು ಮನೆಯವರು ಹೇಳುತ್ತಾರೆ. ನೌಶೀನ್‍ನ ಪಕ್ಕ ಇದ್ದ ಇನ್ನೊಬ್ಬರ ಎದೆಗೆ ಅದೇ ಸಂದರ್ಭದಲ್ಲಿ ರಬ್ಬರ್ ಗುಂಡೂ ಬಿದ್ದಿದೆ. ನನ್ನ ಮಗನನ್ನು ಯಾಕೆ ಕೊಂದಿರಿ ಅನ್ನುವ ಪ್ರಶ್ನೆಯೊಂದು ಆ ತಾಯಿಯ ಮುಖದಲ್ಲಿದೆ. ಬಂದೂಕಂತೂ ಉತ್ತರ ಹೇಳಲಾರದು. ಬಂದೂಕು ಸಿಡಿಸಿದವರೇ ಉತ್ತರ ಹೇಳಬೇಕಷ್ಟೇ. ಅಂದಹಾಗೆ,

ಇಂಥದ್ದೇ ನೋವಿನ ಕತೆ ಜಲೀಲ್‍ರದ್ದು. 9ನೇ ತರಗತಿಯಲ್ಲಿ ಕಲಿಯುವ ಮಗಳು ಮತ್ತು 5ನೇ ತರಗತಿಯಲ್ಲಿ ಕಲಿಯುವ ಮಗನ ತಂದೆಯಾಗಿರುವ ಇವರು ಪ್ರತಿಭಟನೆಗೆ ಹೋದವರೇ ಅಲ್ಲ. ಧಕ್ಕೆಯಲ್ಲಿ ಕೆಲಸ ಮಾಡುತ್ತಾ ತನ್ನ ಪಾಡಿಗಿದ್ದ ಇವರು ಕಲ್ಲು ತೂರಾಟ-ಪೊಲೀಸ್ ಓಡಾಟವನ್ನು ಕಂಡು ಮಕ್ಕಳನ್ನು ಮನೆಯೊಳಗೆ ಸೇರಿಸಿ ಕುತೂಹಲದಿಂದ ಮನೆಯ ಒಳರಸ್ತೆಯ ಕೊನೆಯಿಂದ ಹೊರ ಇಣುಕಿದವರು. ರಸ್ತೆಯಲ್ಲಿ ಆಶ್ರುವಾಯುವಿನ ಹೊಗೆ ಇದ್ದುದರಿಂದ ಮಗಳು ಕೊಟ್ಟ ಟವೆಲನ್ನು ಮುಖಕ್ಕೆ ಕಟ್ಟಿದ್ದರು. ಆಗಲೇ ಗುಂಡೊಂದು ಅವರ ಕಣ್ಣನ್ನು ಸೀಳಿ ಮೆದುಳನ್ನು ಹೊಕ್ಕು ಸಾವನ್ನು ಕರುಣಿಸಿತ್ತು. ಪತ್ನಿ ಮತ್ತು ಮಕ್ಕಳು ನೋಡನೋಡುತ್ತಿರುವಂತೆಯೇ ನಡೆದ ಘಟನೆ ಇದು. ಅವರಿಗೂ ಪ್ರತಿಭಟನೆಗೂ ಸಂಬಂಧವೇ ಇರಲಿಲ್ಲ. ಬಂದೂಕು ವಿನಾ ಕಾರಣ ಜೀವವೊಂದನ್ನು ಬಲಿ ಪಡೆಯಿತು. ಅಷ್ಟಕ್ಕೂ,

ಪೊಲೀಸ್ ಲಾಠಿಯಿಂದ ಗಾಯಗೊಂಡವರ ಸಂಖ್ಯೆ ಸುಮಾರು 40ರಷ್ಟಿದೆ. ಅದರಲ್ಲಿ ಸಿದಾದ್ ಅನ್ನುವ ಯುವಕನ ಮಂಡಿಗೆ ಹಾನಿಯಾಗಿದೆ. ನಗರದ ಫಾರಮ್ ಮಾಲ್‍ಗೂ ಪೊಲೀಸರು ದಾಳಿಯಿಟ್ಟು ಥಳಿಸಿದ ವಿವರಗಳು ಸಿಕ್ಕಿವೆ. ಗಾಯಾಳುಗಳನ್ನು ಸೇರಿಸಲಾದ ಖಾಸಗಿ ಆಸ್ಪತ್ರೆಗೆ ಪೊಲೀಸರು ನುಗ್ಗಿ ಲಾಠಿ ಬೀಸಿದ್ದು, ಐಸಿಯುನೊಳಗೂ ಪ್ರವೇಶಿಸಿ ರೌದ್ರಾವತಾರ ಮೆರೆದದ್ದು, ಆಸ್ಪತ್ರೆಯೊಳಗಡೆ ಅಶ್ರುವಾಯು ಪ್ರಯೋಗಿಸಿದ್ದು ಮತ್ತು ರೋಗಿಗಳಿರುವ ಕೊಠಡಿಯ ಬಾಗಿಲುಗಳಿಗೆ ತುಳಿದು ತೆರೆಯಲು ಶ್ರಮಿಸಿದ್ದು ಇವೆಲ್ಲವೂ ವೀಡಿಯೋಗಳಲ್ಲಿ ದಾಖಲಾಗಿವೆ. ಟಿ.ವಿ. ಮಾಧ್ಯಮಗಳೂ ಇವನ್ನು ಪ್ರಸಾರ ಮಾಡಿವೆ. ರಾಜ್ಯವೇ ಬೆಚ್ಚಿಬಿದ್ದ ಕಾರ್ಯಾಚರಣೆ ಇದು. ಆಸ್ಪತ್ರೆಯೊಳಗಡೆ ಅಶ್ರುವಾಯು ಪ್ರಯೋಗಿಸಿ ದ್ದರಿಂದಾಗಿ ವಯಸ್ಸಾದ ರೋಗಿಗಳು ಈಗಲೂ ಅದರ ದುಷ್ಪರಿಣಾಮವನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಒಟ್ಟು ಎಂಟು ಮಂದಿಯ ಮೇಲೆ ಗುಂಡು ಹಾರಾಟ ನಡೆದಿದ್ದು, ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ದುರಂತ ಏನೆಂದರೆ,

ಪೊಲೀಸರು ತಮ್ಮ ಎಫ್‍ಐಆರ್ ನಲ್ಲಿ ಮೃತ ಜಲೀಲ್‍ರನ್ನು 3ನೇ ಆರೋಪಿ ಮತ್ತು ನೌಶೀನ್‍ರನ್ನು 8ನೇ ಆರೋಪಿಯಾಗಿ ಹೆಸರಿಸಿರುವುದು. ಒಟ್ಟು 29 ಮಂದಿಯ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಅದರಲ್ಲಿ ಇವರಿಬ್ಬರನ್ನೂ ಸೇರಿಸಿರುವುದು ನಾಗರಿಕರ ಆಕ್ರೋಶಕ್ಕೂ ಕಾರಣವಾಗಿದೆ. ಇದೇ ವೇಳೆ, ಪ್ರತಿಭಟನಾಕಾರರು ಪೊಲೀಸ್ ಠಾಣೆಯನ್ನು ಉರಿಸಲು ಮುಂದಾಗಿದ್ದರು, ಠಾಣೆಯಲ್ಲಿರುವ ಆಯುಧಗಳನ್ನು ವಶಪಡಿಸಿ ಪೊಲೀಸರ ವಿರುದ್ಧ ಬಳಸಲು ಯೋಚಿಸಿದ್ದರು ಎಂದು ಪೊಲೀಸ್ ಆಯುಕ್ತರು ಕೊಟ್ಟಿರುವ ಹೇಳಿಕೆಗೂ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಸುಳ್ಳು ಮತ್ತು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಪೊಲೀಸರೇ ಹೆಣೆದ ಕಟ್ಟುಕತೆ ಎಂಬುದು ಸ್ಥಳೀಯರ ಅಭಿಪ್ರಾಯ. ಒಂದು ರೀತಿಯಲ್ಲಿ,

ಅತ್ಯಂತ ಹೆಚ್ಚು ಟೀಕೆ, ಖಂಡನೆ, ಆಕ್ರೋಶಕ್ಕೆ ಕಾರಣವಾದ ಘಟನೆ ಇದು. ಮಂಗಳೂರಿನ ಪೊಲೀಸ್ ವ್ಯವಸ್ಥೆಯ ಮೇಲೆ ಇರುವ ಆರೋಪಕ್ಕೆ ಪುರಾವೆ ಒದಗಿಸಿದ ಘಟನೆ. ಆದ್ದರಿಂದಲೇ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕೆಂಬ ಆಗ್ರಹ ಸಂತ್ರಸ್ತರಿಂದಲೂ ನಾಗರಿಕರಿಂದಲೂ ಬಲವಾಗಿಯೇ ಕೇಳಿಬಂದಿದೆ. ತಮಗೆ ನ್ಯಾಯ ಬೇಕು ಎಂದು ಜಲೀಲ್ ಮತ್ತು ನೌಶೀನ್ ಕುಟುಂಬದವರು ಗಟ್ಟಿ ಧ್ವ ನಿಯಲ್ಲಿ ಆಗ್ರಹಿಸಿದ್ದಾರೆ. ಅಲ್ಲದೇ ಜಿಲ್ಲೆಯ ವಿವಿಧ ಸಂಘಟನೆಗಳೂ ಈ ಆಗ್ರಹಕ್ಕೆ ಒತ್ತು ಕೊಟ್ಟಿವೆ. ಮಾಧ್ಯಮಗಳೂ ಅನ್ಯಾಯವಾಗಿರುವುದನ್ನು ನೇರವಾಗಿಯೋ ಪರೋಕ್ಷವಾಗಿಯೋ ಬೊಟ್ಟು ಮಾಡಿವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಆಗ್ರಹವನ್ನು ಸರಕಾರ ಗಮನಿಸಲಿ. ಜಿಲ್ಲೆಯ ನಾಗರಿಕರಲ್ಲಿ ಉಂಟಾಗಿರುವ ಆತಂಕಭಾವವನ್ನು ಹೋಗಲಾಡಿಸಲಿ. ನ್ಯಾಯದ ಎದುರು ಧರ್ಮ, ಪಕ್ಷ, ಪಂಗಡ, ಹುದ್ದೆಗಳು ನಗಣ್ಯ ಅನ್ನುವುದನ್ನು ಸಾರಿ ಹೇಳಲಿ.

ಸಲೀಮ್ ಖಾನ್

ಬಿಹಾರದ ಬೆಗುಸರಾಯ್ ಜಿಲ್ಲೆಯ 30 ವರ್ಷದ ಇವರು ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾರೆ. ಸಂಭಾವ್ಯ ಗಲಭೆಯ ಹಿನ್ನೆಲೆಯಲ್ಲಿ ಬಂದರ್ ನ ರೀಗಲ್ ಪ್ಯಾಲೇಸ್‍ನ ಎದುರುಗಡೆಯಿರುವ ಅಂಗಡಿಯನ್ನು ಮುಚ್ಚಿ ಅಝೀಝುದ್ದೀನ್ ರಸ್ತೆಯ ಮೂಲಕ ತನ್ನ ಕೊಠಡಿಗೆ ಸಾಗುತ್ತಿದ್ದಾಗ ಹಿಂದೂಗಡೆಯಿಂದ ತೋಳಿಗೆ ಗುಂಡು ಹೊಕ್ಕಿದೆ. ತೋಳಿಗೆ ತೀವ್ರ ಗಾಯವಾಗಿದ್ದು, ಸರ್ಜರಿ ನಡೆಸಲಾಗಿದೆ. ಕತ್ತನ್ನೂ ಎತ್ತಲಾಗದ ಸ್ಥಿತಿ. ಮೂರು ತಿಂಗಳ ಮಟ್ಟಿಗೆ ಏನನ್ನೂ ಮಾಡಲಾಗದು ಎಂಬ ನೋವು ಅವರದು. ಈತ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಉದ್ವಿಘ್ನ ಸ್ಥಿತಿಯನ್ನು ಕಂಡು ಅಂಗಡಿ ಬಾಗಿಲು ಮುಚ್ಚಿ ರೂಮ್ ಸೇರಿಕೊಳ್ಳುವ ತವಕದಲ್ಲಿ ಬಂದೂಕಿಗೆ ಗುರಿಯಾಗಿದ್ದಾರೆ. ತೋಳು ಛಿದ್ರವಾಗಿದೆ. ಊರಿನಿಂದ ಅಣ್ಣ ಬಂದಿದ್ದಾರೆ. ಇಬ್ಬರ ಮುಖದಲ್ಲೂ ದುಃಖ, ಮುಂದೇನು ಅನ್ನುವ ಆತಂಕದ ಭಾವವನ್ನು ಬಿಟ್ಟರೆ ಇನ್ನೇನೂ ಇಲ್ಲ.

ಮುಹಮ್ಮದ್ ಶಫೀಕ್

ಈತ ಮಂಗಳೂರು ಸಮೀಪದ ವಳಚ್ಚಿಲ್ ಎಂಬಲ್ಲಿಯ ಶ್ರೀನಿವಾಸ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಈತನಿಗೂ ಪ್ರತಿಭಟನೆಗೂ ಯಾವ ಸಂಬಂಧವೂ ಇಲ್ಲ. ಊರು ದೂರದ ಶಿವಮೊಗ್ಗ. ಮಂಗಳೂರಿನ ಬಂದರ್ ನಲ್ಲಿರುವ ದರ್ಗಾದಲ್ಲಿ 6 ದಿನಗಳ ಕಾಲ ಸಲಾತ್ ಮಜ್ಲಿಸ್ (ಕಾರ್ಯಕ್ರಮ) ನಡೆಯುತ್ತಿತ್ತು. ಶಫೀಕ್‍ನಿಗೆ ಸೋಮವಾರ (ಡಿಸೆಂಬರ್ 23) ಪರೀಕ್ಷೆ ಇತ್ತು. ಆ ಹಿನ್ನೆಲೆಯಲ್ಲಿ ಈತ ಹರಕೆ ಹೊತ್ತಿದ್ದ. ಅದನ್ನು ತೀರಿಸುವುದಕ್ಕೆಂದು ಆತ ದರ್ಗಾಕ್ಕೆ ಬಂದಿದ್ದ. ಮಹಿಳೆಯರೂ ಪುರುಷರೂ ದರ್ಗಾಕ್ಕೆ ಬಂದು ಹರಕೆ ತಿರಿಸುತ್ತಲೂ ಇದ್ದರು. ಈತ ನಮಾಝ ಮಾಡಿ ಹೊರಬಂದ. ಉದ್ವಿಘ್ನ ಸ್ಥಿತಿಯನ್ನು ಕಂಡು ಸ್ಟೇಟ್ ಬ್ಯಾಂಕ್‍ನ ಹತ್ತಿರ ಬಸ್ ಹತ್ತುವುದಕ್ಕೆಂದು ರಸ್ತೆಯಲ್ಲ್ಲಿ ಹೋಗುವ ವೇಳೆ ಮಂಡಿಯ ಭಾಗಕ್ಕೆ ಗುಂಡು ಬಿದ್ದಿದೆ. ಆ ಭಾಗ ಛಿದ್ರವಾಗಿದೆ. ಮಗನನ್ನು ನೋಡಿಕೊಳ್ಳುವುದಕ್ಕಾಗಿ ಅಪ್ಪ ತನ್ನ ಸಣ್ಣ ವ್ಯಾಪಾರವನ್ನು ಬಿಟ್ಟು ಆಸ್ಪತ್ರೆಯಲ್ಲಿದ್ದಾರೆ.

ನಾಸಿರ್

25 ವರ್ಷ ಪ್ರಾಯದ ಮತ್ತು ಎಸ್ಸೆಸ್ಸೆಲ್ಸಿವರೆಗೆ ಓದಿರುವ ನಾಸಿರ್, ಮಂಗಳೂರಿಗಿಂತ ಏಳೆಂಟು ಕಿಲೋಮೀಟರ್ ದೂರದ ಅಡ್ಯಾರ್ ಕಣ್ಣೂರಿನವ. ಮಂಗಳೂರಿನ ಬಂದರ್ ನಲ್ಲಿರುವ ಪ್ಲಾಸ್ಟಿಕ್ ಅಂಗಡಿಯಲ್ಲಿ ಉದ್ಯೋಗ. ಪ್ರತಿಭಟನೆಯ ದಿನ ಅಝೀಝುದ್ದೀನ್ ರಸ್ತೆಯಲ್ಲಿರುವ ಮಸೀದಿಯಲ್ಲಿ ಸಂಜೆಯ ನಮಾಝ ನಿರ್ವಹಿಸಿ ಬರುತ್ತಿದ್ದಾಗ ಪೊಲೀಸರು ಓಡಿಸಿಕೊಂಡು ಬರುತ್ತಿರುವುದನ್ನು ಕಂಡು ಈತ ಮತ್ತು ಏಳೆಂಟು ಗೆಳೆಯರು ಓಡಿ ಹೋಗಿ ಫ್ಲ್ಯಾಟ್‍ನಲ್ಲಿ ಸಿಲುಕಿಕೊಂಡರು. ಪೊಲೀಸರು ಎಲ್ಲರನ್ನೂ ಯದ್ವಾತದ್ವಾ ಥಳಿಸಿದರು ಎಂದು ಹೇಳಿದ. ನಾಸಿರ್ ನ ತಲೆ, ಬೆನ್ನು ಮತ್ತು ತೋಳಿಗೆ ತೀವ್ರವಾದ ಗಾಯವಾಗಿದೆ. ತಲೆಗೆ ಹೊಲಿಗೆ ಹಾಕಲಾಗಿದೆ. ತೋಳಿಗೆ ಸರ್ಜರಿಯಾಗಬೇಕಾದ ಅಗತ್ಯ ಇದೆ. ಲಾಠಿಯೇಟಿನಿಂದಾಗಿ ನಾಸಿರ್ ಪ್ರಜ್ಞೆ ಕಳಕೊಂಡಿದ್ದ. ಪೊಲೀಸರೇ ತಂದು ಸರಕಾರಿ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಎರಡು ದಿನಗಳ ಕಾಲ ಐಸಿಯುನಲ್ಲಿದ್ದೆ ಎಂದು ಆತ ಹೇಳಿದ. ಜೊತೆ ಇದ್ದವರು ಜೈಲಲ್ಲಿರುವುದಾಗಿಯೂ ಮಾಹಿತಿ ನೀಡಿದ.

ಅಬೂಸಾಲಿ

40 ವರ್ಷದ ಮತ್ತು 3 ಮಕ್ಕಳ ತಂದೆಯಾಗಿರುವ ಇವರು ಬಂದರ್ ನ ನ್ಯಾಶನಲ್ ದರ್ಬಾರ್ ಹೊಟೇಲಿನ ಹತ್ತಿರವೇ ಇರುವ ಹಗ್ಗದ ಅಂಗಡಿಯಲ್ಲಿ ಕೂಲಿ ಕೆಲಸಗಾರ. ಮಂಗಳೂರಿಗಿಂತ ಸುಮಾರು 15 ಕಿಲೋಮೀಟರ್ ದೂರದ ಆಲಂಪಾಡಿಯಿಂದ ದಿನಾ ಮಂಗಳೂರಿಗೆ ಬಂದು ಸಂಜೆ ಮನೆಗೆ ಹಿಂತಿರುಗುತ್ತಿದ್ದರು. ಇವರ ತೋಳಿಗೆ ಗುಂಡು ಹೊಕ್ಕಿದೆ. ಅದರ ತೀವ್ರತೆ ಎಷ್ಟಿತ್ತೆಂದರೆ, ತೋಳಿನ ಮಾಂಸಮುದ್ದೆ ಹಾರಿಹೋಗಿದ್ದು, ತೊಡೆಯಿಂದ ಮಾಂಸವನ್ನು ತೋಳಿಗೆ ಕಸಿ ಮಾಡುವ ಸರ್ಜರಿ ನಡೆಯಬೇಕಿದೆ. ಗೋಲಿಬಾರ್ ನಿಂದಾಗಿ ಮೃತಪಟ್ಟ ಜಲೀಲ್ ಅವರ ಪಕ್ಕವೇ ಇವರು ನಿಂತಿದ್ದರು. ತಾನು ಪ್ರತಿಭಟನೆಗೆ ಹೋಗಿಯೂ ಇಲ್ಲ, ಭಾಗಿಯೂ ಆಗಿಲ್ಲ ಎಂದವರು ಹೇಳುತ್ತಾರೆ. ದುಡಿದರೆ ಮಾತ್ರ ಅನ್ನ ಅನ್ನುವ ಸ್ಥಿತಿಯಲ್ಲಿ ಇರುವ ಇವರು ಮುಂದಿನ ದಾರಿ ಏನು ಅನ್ನುವ ಆತಂಕದಲ್ಲಿದ್ದಾರೆ.

ಮುಹಮ್ಮದ್ ಆಸಿಫ್

23 ವರ್ಷ ಪ್ರಾಯ. ಮಂಗಳೂರಿನಿಂದ ಸುಮಾರು 10 ಕಿಲೋಮೀಟರ್ ದೂರದ ಫೈಸಲ್ ನಗರದಲ್ಲಿ ವಾಸಿಸುವ ಮುಹಮ್ಮದ್ ಆಸಿಫ್, ವೃತ್ತಿಯಲ್ಲಿ ಕಾರ್ ಮೆಕ್ಯಾನಿಕ್. ಕುತ್ತಾರ್ ನಲ್ಲಿರುವ ಮೆಕ್ಯಾನಿಕ್ ಅಂಗಡಿಗೆ ಡಿಸೆಂಬರ್ 19ರಂದು ರಜೆ ಇತ್ತು. ತಂಗಿಯ ಮದುವೆಗೆ ಡ್ರೆಸ್ ಖರೀದಿಸುವುದಕ್ಕೆಂದು ಮಂಗಳೂರಿಗೆ ಬಂದಿದ್ದೆ ಅಂದ. ಬಂದರ್ ನ ಬದ್ರಿಯಾ ಮಸೀದಿಯಲ್ಲಿ ಸಂಜೆಯ ನಮಾಝ ನಿರ್ವಹಿಸಿ ರಾವ್ ಅಂಡ್ ರಾವ್ ಸರ್ಕಲ್ ಬಳಿಯ ಅಂಗಡಿಯಲ್ಲಿ ಡ್ರೆಸ್ ಖರೀದಿಸುವುದಕ್ಕೆಂದು ಹೊರಟು ನಿಂತಾಗ ಹಿಂದಿನಿಂದ ಸಿಡಿದ ಗುಂಡು ಪಕ್ಕೆಲುಬಿನ ಭಾಗವನ್ನು ಛಿದ್ರಿಸಿ ಹೊರಹೋಗಿದೆ. ಎಲುಬಿಗೆ ಗಾಯವಾಗಿಲ್ಲ ಎಂಬುದೇ ಸಮಾಧಾನದ ಸಂಗತಿ. ಅಪ್ಪ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಣ್ಣ ಚಿಕನ್ ಸ್ಟಾಲ್ ಇಟ್ಟುಕೊಂಡಿದ್ದಾರೆ.

ನಾಯಕತ್ವದ ಕೊರತೆ

ಮಂಗಳೂರಿನ ಮುಸ್ಲಿಮ್ ನಾಯಕರಲ್ಲಿ ಯಾರಲ್ಲೇ ಪ್ರಶ್ನಿಸಿದರೂ ಎಲ್ಲರಲ್ಲೂ ಒಂದು ಮಾತಿನಲ್ಲಿ ಸಹಮತವಿದೆ. ಅದೇನೆಂದರೆ, ಸಮುದಾಯವು ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಮೀರಿ ಒಂದಾಗುವಲ್ಲಿ ವಿಫಲವಾಗುತ್ತಿದೆ ಎಂಬುದು. ‘ಏಕ ನಾಯಕತ್ವ’ ಎಂಬ ಜನಪ್ರಿಯ ಮತ್ತು ಬಹುಬೇಡಿಕೆಯ ಸ್ಥಿತಿಗೆ ಇನ್ನೂ ಸಮುದಾಯ ಒಗ್ಗಿಕೊಂಡಿಲ್ಲ ಎಂಬುದು. ಸಮುದಾಯದ ಎಲ್ಲರನ್ನೂ ಏಕ ಪ್ರಕಾರವಾಗಿ ಬಾಧಿಸುವ ವಿಷಯಗಳಲ್ಲಿ ಸಂಘಟನೆಗಳೇಕೆ ಒಗ್ಗೂಡಿ ಒಂದೇ ವೇದಿಕೆಯಲ್ಲಿ ನಿಂತು ಹೋರಾಡಬಾರದು ಅನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿದೆ ಮತ್ತು ಅದು ನಿಧಾನವಾಗಿ ಆಕ್ರೋಶ ರೂಪವನ್ನು ಪಡೆಯುತ್ತಲೂ ಇದೆ. ಡಿಸೆಂಬರ್ 19ರ ಪ್ರತಿಭಟನೆಗೆ ನಾಯಕತ್ವವೇ ಇರಲಿಲ್ಲ ಅನ್ನುವುದು ನಾಗರಿಕರ ಅಭಿಪ್ರಾಯ. ಯಾರ ಮಾತನ್ನೂ ಯಾರೂ ಕೇಳದಂತಹ ಸ್ಥಿತಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುವುದಕ್ಕೆ ಅವಕಾಶ ಹೆಚ್ಚು. ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಪ್ರತಿಭಟನಾಕಾರರು ವಿಫಲರಾಗುತ್ತಾರೆ. ಅವರಿಗೆ ಮಾರ್ಗದರ್ಶನ ನೀಡುವುದಕ್ಕೆ ನಾಯಕತ್ವವೂ ಇರುವುದಿಲ್ಲ. ಡಿಸೆಂಬರ್ 19ರ ಪ್ರತಿಭಟನೆಯಲ್ಲಿ ಈ ನಾಯಕತ್ವದ ಕೊರತೆಯ ಪಾಲು ಇದೆ ಎಂದು ಪೋರ್ಟ್ ವಾರ್ಡ್ ಕಾಂಗ್ರೆಸ್ ಕಾರ್ಪೋ ರೇಟರ್ ಕಂದುಕದ ಲತೀಫ್ ಹೇಳುತ್ತಾರೆ. ಒಂದಂತೂ ಸ್ಪಷ್ಟ. ಇಂಥ ಸಂದರ್ಭಗಳಲ್ಲಿ ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಮೀರಿ ವೇದಿಕೆಯೊಂದನ್ನು ರಚಿಸಿ ಒಂದಾಗಿ ನಿಲ್ಲಬೇಕೆಂಬ ಬಯಕೆ ಸಮುದಾಯದ ಸಾಮಾನ್ಯರಲ್ಲಿ ಬಲವಾಗಿಯೇ ಇದೆ. ಆದ್ದರಿಂದ ಅದರ ಕಾರ್ಯಸಾಧ್ಯತೆಯ ಬಗ್ಗೆ ಗಂಭೀರ ಚರ್ಚೆಗಳಾಗಬೇಕಾದ ಅಗತ್ಯ ಇದೆ.

ಡಿ.ಎಂ. ಅಸ್ಲಮ್
(ಸಾಮಾಜಿಕ ಹೋರಾಟಗಾರ)

ಘಟನೆಯ ದಿನದಂದು ಮಂಗಳೂರಿನಲ್ಲಿ ನಿಯೋಜಿಸಲಾದ ಪೊಲೀಸರಾರೂ ಸ್ಥಳೀಯರಂತೆ ಕಾಣುತ್ತಿರಲಿಲ್ಲ. ಅವರು ಹೊರಗಿನವರು ಇರಬೇಕು. ಅವರ ವರ್ತನೆ ತೀರಾ ಕೆಟ್ಟದಾಗಿತ್ತು. ಮೃತದೇಹವನ್ನು ನೋಡಿ ಆಸ್ಪತ್ರೆಯಿಂದ ಬರುತ್ತಿದ್ದ ನನ್ನ ಮೇಲೂ ಲಾಠಿ ಬೀಸಿದರು. ನಾನು ಪ್ರಶ್ನಿಸಿದುದಕ್ಕೆ ಮತ್ತೂ ಬೀಸಿದರು. ಲಾಠಿ ಬೀಸ ಬೇಡಿ, ಪೊಲೀಸ್ ಕಮೀಷನರ್ ಜೊತೆ ಮಾತಾಡುವೆ ಎಂದು ಮೊಬೈಲ್ ಎತ್ತಿಕೊಂಡಾಗ ಕಸಿಯಲು ಯತ್ನಿಸಿದರು. ಕನಿಷ್ಠ ಗೌರವವನ್ನೂ ಕೊಡಲಿಲ್ಲ. ಕೊನೆಗೆ ಸ್ಥಳೀಯ ಪೊಲೀಸರಿಬ್ಬರು ನನ್ನನ್ನು ಹೋಗಗೊಡುವಂತೆ ಅವರಲ್ಲಿ ವಿನಂತಿಸಿ ಕಳುಹಿಸಿಕೊಟ್ಟರು.