ಅನಿವಾಸಿಗಳ ಕ್ವಾರಂಟೈನ್‌ ವ್ಯವಸ್ಥೆಗೆ ಸ್ಥಳೀಯರಿಂದ ವಿರೋಧ: ಮಂಗಳೂರಿನಲ್ಲಿ ಮತ್ತೆ ಮಾನವೀಯತೆ ಮಾಯ

0
2662

ಸನ್ಮಾರ್ಗ ವಾರ್ತೆ

ಮಂಗಳೂರು,ಮೇ.14: ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲಾಗಿದ್ದು ವಿವಿಧ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಆದರೆ, ಕೊಡಿಯಾಲ್‌ ಗುತ್ತು ಪರಿಸರದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾದ ಕಾರಣದಿಂದಾಗಿ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಾಸ್ಟೆಲ್ ಎದುಗಡೆ ಪ್ರತಿಭಟನೆ ನಡೆಸಿದ ಅಮಾನವೀಯ ಘಟನೆಯು ಮಂಗಳವಾರ ನಡೆದಿದೆ.

ಕೊಡಿಯಾಲ್‌ ಗುತ್ತು ಪರಿಸರದ ಹಾಸ್ಟೆಲ್‌ನಲ್ಲಿಯೂ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದನ್ನರಿತ ಸುಮಾರು 500 ಕ್ಕೂ ಅಧಿಕ ಸ್ಥಳೀಯರು ಸೇರಿ ವಿರೋಧ ವ್ಯಕ್ತಪಡಿಸಿದ್ದು ಕೊನೆಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಸ್ಥಳಕ್ಕಾಗಮಿಸಿ ಸ್ಥಳೀಯರಿಗೆ ವಿಷಯವನ್ನು ಮನವರಿಕೆ ಮಾಡಿದರು.

ವಿದೇಶದಿಂದ ಬಂದವರಲ್ಲಿ ಸೋಂಕಿನ ಯಾವುದೇ ಲಕ್ಷಣವಿದ್ದರೆ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಮತ್ತು ಎಲ್ಲ ಪ್ರಯಾಣಿಕರನ್ನು 14 ದಿನ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಕ್ವಾರಂಟೈನ್‌ನಲ್ಲಿ ಇರುವವರಿಂದ ಸೋಂಕು ಹರಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕೊರೋನಾ ಸೋಂಕಿಗೊಳಗಾಗಿ ಮೃತಪಟ್ಟಿದ್ದ ಮಹಿಳೆಯೋರ್ವರ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಅಮಾನವೀಯ ಘಟನೆಗೆ ಸುದ್ದಿಗೀಡಾಗಿದ್ದ ಬೆನ್ನಿನಲ್ಲಿಯೇ ಬುದ್ದಿವಂತರ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆಯು ನಡೆದಿದೆ.