ಸನ್ಮಾರ್ಗ ವಾರ್ತೆ-
ಮಂಗಳೂರು; ಸೆ. 25- ಇದು ಹಿಂದೂ ರಾಷ್ಟ್ರ, ಮುಸ್ಲಿಮರು ಇಲ್ಲಿಗೆ ಬರಬಾರದು ಎಂದು ಯುವಕನೋರ್ವ ಪ್ರಚೋದನಾತ್ಮಕವಾಗಿ ಮಾತಾಡಿದ್ದಾನೆ ಎಂದು ಆರೋಪಿಸಿ ಆತಮ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಮಂಗಳೂರಿನ ಮಾಲ್ ಒಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ವಿವರಿಸುವ ಧ್ವನಿ ವಾಟ್ಸಪ್ ನಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಸೆ. 25ರಂದು ಬುಧವಾರ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಯುವಕನನ್ನು ಬಂಟ್ವಾಳದ ಮಂಜುನಾಥ ಎಂದು ಗುರುತಿಸಲಾಗಿದೆ. ತನ್ನ ಮೇಲಾದ ಹಲ್ಲೆಯ ಕುರಿತು ಆತ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಚಾ ಕುಡಿಯುವ ವೇಳೆ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ವೈರಲ್ ವೀಡಿಯೋದ ಆಧಾರದಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.












