ವಿವಾಹಿತ ಹೆಣ್ಣು ಮಕ್ಕಳು ಸಹ ಸೈನಿಕ ಸೌಲಭ್ಯಗಳಿಗೆ ಅರ್ಹರು: ಹೈಕೋರ್ಟ್

0
171

ಸನ್ಮಾರ್ಗ ವಾರ್ತೆ

ಬೆಂಗಳೂರು: ಮದುವೆಯಾದರೂ ಇಲ್ಲದಿದ್ದರೂ ಮಗನ ಸ್ಥಾನ ಬದಲಾಗದೇ ಇರುವಾಗ ಮಗಳನ್ನು ಕೂಡ ಮಗಳ ಸ್ಥಾನದಲ್ಲಿ ಅದೇ ರೀತಿ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮದುವೆಯಾಗುವುದರಿಂದ ಮಗ ಸ್ಥಾನ ಕಳಕೊಳ್ಳುವುದಿಲ್ಲ ಹಾಗಿರುವಾಗ ಮದುವೆಯಾದ ಮಗಳ ಸ್ಥಾನದಲ್ಲಿಯೂ ಬದಲಾವಣೆ ಮಾಡಬಾರದು ಎಂದು ಕೋರ್ಟು ಹೇಳಿತು.

2001ರ ಆಪರೇಷನ್ ಪರಾಕ್ರಮದಲ್ಲಿ ಮೈನ್‍ಗಳನ್ನು ತೆರವುಗೊಳಿಸುವಾಗ ವೀರ ಮರಣವನ್ನಪ್ಪಿದ್ದ ಸುಬೇದಾರ್ ರಮೇಶ್ ಕಂಡಪ್ಪ ಪಾಟೀಲರ 31 ವರ್ಷದ ಮಗಳು ಪ್ರಿಯಾಂಕ ಪಾಟೀಲ್ ಸಲ್ಲಿಸಿದ ಅರ್ಜಿಯಲ್ಲಿ ಜಸ್ಟಿಸ್ ನಾಗಪ್ಪರವರ ಏಕ ಸದಸ್ಯ ಪೀಠವು ಈ ಆದೇಶ ನೀಡಿದೆ.

ಕಂಡಪ್ಪರವರು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ನಲ್ಲಿ(ಎಂಇಜಿ) ಸುಬೇದಾರಾಗಿದ್ದರು‌. ಅವರ ಸಾವಿನ ವೇಳೆ ಅರ್ಜಿದಾರಳಿಗೆ ಹತ್ತು ವರ್ಷ ವಯಸ್ಸಾಗಿತ್ತು. ಕರ್ನಾಟಕ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಖಾಲಿ ಸ್ಥಾನಗಳಿಗೆ ವಿರಮಿಸಿದ ಸೈನಿಕರ ಮಕ್ಕಳಿಗೆ ಶೇ. 10ರಷ್ಟು ಮೀಸಲಾತಿ ಇದೆ.

ಈ ಮೀಸಲಾತಿಯನ್ನು ಪಡೆಯಲು ಬೇಕಾಗಿ ಸೈನಿಕ ಆಶ್ರಿತರ ಗುರುತು ಚೀಟಿ ಪಡೆಯಲು ಕಲ್ಯಾಣ ನಿಧಿ ಮಂಡಳಿಯನ್ನು ಪ್ರಿಯಾಂಕ ಸಮೀಪಿಸಿದ್ದರು. ಪ್ರಿಯಾಂಕರಿಗೆ ಮದುವೆಯಾಗಿರುವುದರಿಂದ ಅವರು ಈ ಮೀಸಲಾತಿಗೆ ಅರ್ಹರಲ್ಲವೆಂದು ತಿಳಿಸಿ ಗುರುತಿನ ಚೀಟಿ ನೀಡಲು ಮಂಡಳಿ ನಿರಾಕರಿಸಿತ್ತು.

ತದನಂತರ ಅರ್ಜಿದಾರರು ಈ ತಾರತಮ್ಯವನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಲಿಂಗದ ಆಧಾರದಲ್ಲಿ ಇಂತಹ ತಾರತಮ್ಯ ಸಂವಿಧಾನದ ಆರ್ಟಿಕಲ್ 14ರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಕಲ್ಯಾಣ ನಿಧಿ ಮಂಡಳಿಯ ಇಂತಹ ನಿಯಮವನ್ನೇ ರದ್ದು ಮಾಡಿದೆ.

ಕೇಂದ್ರ-ರಾಜ್ಯ ಸರಕಾರಗಳು ‘ಎಕ್ಸ್ ಸರ್ವಿಸ್‍ಮೆನ್’ ಎಂಬ ಪದವನ್ನು ‘ಎಕ್ಸ್ ಸರ್ವಿಸ್ ಪರ್ಸನಲ್’ ಎಂದು ಬದಲಿಸಬೇಕೆಂದು ಕೋರ್ಟು ಸೂಚಿಸಿದೆ. ಮೆನ್ ಎಂಬ ಪದ ಸೈನ್ಯದಲ್ಲಿ ಪುರುಷರ ಪ್ರಾಬಲ್ಯವನ್ನು ತೋರಿಸುತ್ತದೆ. ಈಗ ಸೈನ್ಯದಲ್ಲಿ ಮಹಿಳಾ ಅಧಿಕಾರಿಗಳೂ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಎಂದು ಕೋರ್ಟು ಈ ವೇಳೆ ನೆನಪಿಸಿದೆ.