ಮೌಲಾನ ಮೌದೂದಿ: ಇಸ್ಲಾಮಿಕ್ ನವೋತ್ಥಾನದ ಶಿಲ್ಪಿ 

0
184

✍️ ನಿಹಾಲ್‌ ಕಿದಿಯೂರ್‌
ಮಾಜಿ ರಾಷ್ಟ್ರೀಯ ಕಾರ್ಯದರ್ಶಿ, ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಝೇಶನ್‌ ಆಫ್‌ ಇಂಡಿಯಾ

ಮೌಲಾನ ಸೈಯದ್ ಅಬುಲ್‌ ಆಲಾ ಮೌದೂದಿ ರವರು 20ನೇ ಶತಮಾನದ ವಿದ್ವಾಂಸರಲ್ಲಿ ಪ್ರಮುಖರು. ಆ ಕಾಲಘಟ್ಟದಲ್ಲಿ ಜಗತ್ತಿನಾದ್ಯಂತ ವಸಾಹತುಶಾಹಿಯ ಕರಾಳ ನೆರಳು ಆವರಿಸಿತ್ತು. ಆಧುನಿಕತೆಯ ಹೆಸರಿನಲ್ಲಿ ಜಗತ್ತನ್ನು ನಾಗರೀಕಗೊಳಿಸುವುದು ಪಾಶ್ಚಾತ್ಯ ‘ಬಿಳಿಯರ ಹೊರೆ’ (White man’s burden) ಎಂಬ ಭ್ರಮೆಯಿಂದಾಗಿ ಸಮಾಜದಲ್ಲಿ ದೊಡ್ಡ ಅಲ್ಲೋಲಕಲ್ಲೋಲಗಳು ಹಾಗೂ ತಲ್ಲಣಗಳು ಸಂಭವಿಸಿದವು. ಇದು ಸಮಾಜದ ಮೂಲ ರಚನೆಯಲ್ಲೇ ದೊಡ್ಡ ಬಿರುಕುಗಳನ್ನು ಉಂಟುಮಾಡಿತು. ಉದಾರವಾದಿ ದೃಷ್ಟಿಕೋನದಲ್ಲಿ ಆಡಳಿತದ ಹೊಸ ರೂಪವಾಗಿ ರಾಷ್ಟ್ರ-ರಾಜ್ಯದ (Nation-state) ಉದಯವು ಹೊಸ ಜೀವನಶೈಲಿಯನ್ನು ಹೇರಿತು. ಅದರಲ್ಲೂ ವಸಾಹತುಶಾಹಿಯ ಹಿಡಿತದಲ್ಲಿ ನರಳುತ್ತಿದ್ದ ದೇಶಗಳ ಶಿಕ್ಷಣ, ಅಸ್ಮಿತೆ ಹಾಗೂ ನಾಗರಿಕತೆಯು ಮಾನಸಿಕ ಮತ್ತು ದೈಹಿಕ ಗುಲಾಮಗಿರಿಯ ಸರಪಳಿಗೆ ಸಿಲುಕಿಕೊಂಡವು. 

ಈ ಹೊಸ ಪರಿಸ್ಥಿತಿಯು ಅನೇಕ ಸವಾಲುಗಳನ್ನು ಮಾನವನ ಮುಂದೆ ಹುಟ್ಟುಹಾಕಿತು. ಧರ್ಮದ ಪರಿಕಲ್ಪನೆಯನ್ನು ಜಾತ್ಯತೀತ ಚೌಕಟ್ಟಿಗೆ ಕುಗ್ಗಿಸಲಾಯಿತು, ದೈವಿಕ ಜ್ಞಾನದ ಸ್ಥಾನವನ್ನು ಹೊಸದಾಗಿ ತಲೆಎತ್ತಿದ ವಿಜ್ಞಾನ ಆಕ್ರಮಿಸಿಕೊಂಡಿತು ಮತ್ತು ಪಾಶ್ಚಾತ್ಯ ಜೀವನಶೈಲಿಯನ್ನು ಪರಮೋಚ್ಛ ಮಾನದಂಡವನ್ನಾಗಿ ಬಿಂಬಿಸಲಾಯಿತು. ಈ ರೀತಿಯ ಸಂಕೀರ್ಣ ವಾತಾವರಣದಲ್ಲಿ ಮೌದೂದಿಯವರು ವಿಚಾರಗಳನ್ನು ಗ್ರಹಿಸುವ ಹೊಸ ದೃಷ್ಟಿಕೋನವನ್ನು ಲೋಕಕ್ಕೆ ಪರಿಚಯಿಸಿದರು. ಆ ಕಾಲಘಟ್ಟದಲ್ಲಿ ಮುಖ್ಯವಾಗಿ ಎರಡು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು; ಒಂದೋ ಎಲ್ಲ ಆಧುನಿಕ ವಿಚಾರಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಅಥವಾ ಪಾಶ್ಚಾತ್ಯ ಆದರ್ಶಗಳನ್ನು ಪ್ರಶ್ನಾತೀತವಾಗಿ ಕುರುಡಾಗಿ ಒಪ್ಪಿಕೊಳ್ಳುವುದು.  ಮೌದೂದಿಯವರು ಗರಿಗೆದರಿದ್ಧ ಆಧುನಿಕ ಕಲ್ಪನೆಗಳ ಮುಂದೆ ಮಂಡಿಯೂರಲೂ ಇಲ್ಲ ಅಥವಾ ಅವುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲೂ ಇಲ್ಲ.  ಬದಲಾಗಿ, ಸಂಪ್ರದಾಯದ ಬೇರುಗಳಲ್ಲಿ ಭದ್ರವಾಗಿ ನೆಲೆಸಿದ  ಪ್ರತ್ಯುತ್ತರವೊಂದನ್ನು ಕಾಲದ ಬೇಡಿಕೆಗೆ ತಕ್ಕಂತೆ ರೂಪಿಸಿ, ಇಸ್ಲಾಮ್‌ ಎಂದರೆ ಸಮಗ್ರ ಜೀವನ ವ್ಯವಸ್ಥೆ ಎಂದು ಸಾರಿದರು. ಇದು ಕಳೆದ ಶತಮಾನದಲ್ಲಿ ಇಸ್ಲಾಮಿನ ನವೋತ್ಥಾನಕ್ಕೆ ನಾಂದಿಹಾಕಿದ ಕ್ರಾಂತಿಕಾರಿ ಘೋಷಣೆಯಾಗಿತ್ತು. ಮೌದೂದಿಯವರ ಸಮಗ್ರ ಸಾಹಿತ್ಯ ಕೃಷಿಯು ಇಸ್ಲಾಮಿನ ಮಹಾನ್ ತತ್ವಾದರ್ಶಗಳಿಗೆ ಸ್ಪಷ್ಟ ರೂಪ ನೀಡಲು ಮತ್ತು ಅದಕ್ಕೊಂದು ಸುಭದ್ರ ನೀಲನಕ್ಷೆಯನ್ನು ಒದಗಿಸಲು ಮೀಸಲಾದ ಶ್ರಮವಾಗಿದೆ. 

ಇಂದಿನ ದಿನಗಳಲ್ಲಿ, ಸಮಗ್ರ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಸತ್ಯದೊಂದಿಗೆ ವ್ಯವಹರಿಸಲು ವಸಾಹತುಶಾಹಿತನದಿಂದ ಮುಕ್ತವಾದ ಜ್ಞಾನ ಮತ್ತು ಜ್ಞಾನಮೀಮಾಂಸೆಯು (De-colonial knowledge and episteme) ಅತ್ಯಾವಶ್ಯಕ ಆಯಾಮವೆಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮೌಲಾನಾ ಮೌದೂದಿಯವರು ಆಧುನಿಕ ಜ್ಞಾನಮೀಮಾಂಸೆಯೊಂದಿಗೆ ನಡೆಸಿದ ಒಡನಾಟವು ಅತ್ಯಂತ ಮೌಲ್ಯಯುತವಾಗಿದೆ; ಇಸ್ಲಾಮಿಕ್ ಬೇರುಗಳಿಂದ ಕೂಡಿದ ಜ್ಞಾನದ ಚೌಕಟ್ಟಿನಲ್ಲಿ ನಿಂತು ಅವರು ಆಧುನಿಕತೆಯ ಮಾದರಿಯನ್ನು ಹೇಗೆ ವಿಶ್ಲೇಷಿಸಿ, ಅದರ ವಿರೋಧಾಭಾಸಗಳನ್ನು ಜಗತ್ತಿನೆದುರು ಬಿಚ್ಚಿಟ್ಟರು ಹಾಗೂ ಇಸ್ಲಾಮ್‌ ಧರ್ಮವನ್ನು ಒಂದು ಕಾರ್ಯಸಾಧ್ಯವಾದ ಪರ್ಯಾಯ ಮಾರ್ಗವಾಗಿ ಮಂಡಿಸಿದರು ಎಂಬುದರಲ್ಲಿ ಅವರ ಅನನ್ಯ ಪ್ರತಿಭೆ ಎದ್ದು ಕಾಣುತ್ತದೆ. ಜನಾಂಗೀಯ ಹಾಗೂ ಭೌತಿಕ ನೆಲೆಗಟ್ಟುಗಳ ಮೇಲೆ ನಿಂತಿರುವ ಪಾಶ್ಚಾತ್ಯ ಜ್ಞಾನದ ಅಧಿಪತ್ಯವನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಸವಾಲು ಮಾಡಬೇಕೆಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು. ಇದು ಮೌದೂದಿಯವರ ನಿಜವಾದ ಮೇಧಾವಿತನವಾಗಿದ್ದು, ಈ ಅಂಶಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿದೆ. ಆಧುನಿಕತೆಯ ಅಡಿಪಾಯವನ್ನು ಮೌದೂದಿ ಬಿಡಿಬಿಡಿಯಾಗಿ ಹೇಗೆ ವಿಶ್ಲೇಷಿಸಿದರು ಮತ್ತು ದೈವಿಕ  ಜ್ಞಾನವನ್ನು ಬುನಾದಿಯಾಗಿಟ್ಟು ತರ್ಕಬದ್ಧವಾಗಿ, ಸ್ಪಷ್ಟತೆಯಿಂದ ಕೂಡಿದ ಮತ್ತು ವಿವೇಚನಾಶೀಲವಾದ ಪರ್ಯಾಯ ವಾದವನ್ನು ಹೇಗೆ ಪ್ರಸ್ತುತಪಡಿಸಿದರು ಎಂಬುದನ್ನು ನಾನು ಮುಂದೆ ಚರ್ಚಿಸ ಬಯಸುತ್ತೇನೆ.

ಆಧುನಿಕ ಆದರ್ಶಗಳೊಂದಿಗೆ ಒಡನಾಟ:

ಆಧುನಿಕ ವಿಚಾರಗಳ ಮೂರು ಮುಖ್ಯ ಸ್ತಂಭಗಳೆಂದರೆ ತರ್ಕದ ಸರ್ವಶ್ರೇಷ್ಠತೆ(Supremacy of reason), ವ್ಯಕ್ತಿಕೇಂದ್ರೀಕರಣ (individualization) ಮತ್ತು ಜಾತ್ಯತೀತತೆ(Secularism) ಎಂದು ಹೇಳಲಾಗುತ್ತದೆ. ಬಂಡವಾಳಶಾಹಿತ್ವ, ಉದಾರವಾದ ಅಥವಾ ಸಮಾಜವಾದ – ವ್ಯವಸ್ಥೆಗಳು ಯಾವುವೇ ಆಗಿರಲಿ, ಅವು ಮೇಲಿನ ಈ ಮೂರು ಸ್ತಂಭಗಳ ಮೇಲೆಯೇ ನಿಂತಿರುತ್ತವೆ. ಈ ವಿಚಾರಗಳ ಮೂಲವನ್ನು ಆಳವಾಗಿ ಅರ್ಥಮಾಡಿಕೊಳ್ಳದ ಹೊರತು, ಅವುಗಳನ್ನು ಗ್ರಹಿಸುವುದು ಅಥವಾ ಎದುರಿಸುವುದು ಸಾಧ್ಯವಿಲ್ಲ. ಹಾಗಾಗಿ ಮೌಲಾನ ಮೌದೂದು ಅವರು ತಮ್ಮ ಬರಹಗಳಾದ್ಯಂತ ಕುರ್‌ಆನ್ ಮತ್ತು ಪ್ರವಾದಿಯವರ ಚರ್ಯೆಯ ಮೂಲಕ ಬರುವ ದೈವಿಕ ಜ್ಞಾನವೇ ಶ್ರೇಷ್ಠ ಎಂದು ಬಲವಾಗಿ ಪ್ರತಿಪಾದಿಸಿದರು. ತತ್ವಜ್ಞಾನಿಗಳಾದ ನೀಷೆ(Neitzche) “ದೇವರು ಸತ್ತಿದ್ದಾನೆ” ಎಂದಾಗ ಅಥವಾ ಡೆಕಾರ್ಟ್(Decarte) “ನಾನು ಯೋಚಿಸುತ್ತೇನೆ, ಹಾಗಾಗಿ ನಾನು ಇದ್ದೇನೆ” ಎಂದು ವಾದಿಸಿದ ಯುಗದಲ್ಲಿ, ಮೌದೂದಿಯವರು ಅರಿವನ್ನು ದೈವಿಕ ಜ್ಞಾನದ ಬೆಳಕಿನಲ್ಲಿ ರೂಪಿಸದಿದ್ದರೆ ಅದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಪ್ರಯೋಜನವಿಲ್ಲದೆ ಹೋಗುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಮೌದೂದಿ ರವರ “ಇಸ್ಲಾಮ್‌ ಔರ್‌ ಜಾಹಿಲಿಯ್ಯತ್‌” (ಕನ್ನಡದಲ್ಲಿ: ಇಸ್ಲಾಮ್‌ ಮತ್ತು ಅಜ್ಞಾನ) ಎಂಬ ಕಿರುಪುಸ್ತಕದಿಂದ ಹಿಡಿದು ಮಹತ್ವದ ಕೃತಿಯಾದ “ತಫ್ಹೀಮುಲ್ ಕುರ್‌ಆನ್” ವರೆಗೂ ಈ ವಿಚಾರವೇ ಮುಖ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಕೆಲವರು ತೋರುವ ಹೇಡಿತನದ ನಿಲುವುಗಳ ನಡುವೆಯೂ ಮೌದೂದಿ ಅವರ ಈ ಆಲೋಚನೆಯೇ ಅವರ ಎಲ್ಲ ಚಿಂತನೆಗಳಿಗೆ ಚಾಲಕ ಶಕ್ತಿಯಾಗಿತ್ತು.    

ಸಮಾಜದ ವಿಘಟನೆ ಮತ್ತು ನಾಶಕ್ಕೆ ಕಾರಣವಾಗುವ ಅತಿ-ವ್ಯಕ್ತಿವಾದವನ್ನು (hyper-individualization) ಮೌದೂದಿ ತೀವ್ರವಾಗಿ ಸವಾಲು ಮಾಡಿದರು. ಆ ರೀತಿಯ ವ್ಯವಸ್ಥೆಯಲ್ಲಿ ವ್ಯಕ್ತಿಯ ಘನತೆಯನ್ನು ಕೊಳ್ಳೆ ಹೊಡೆಯಲಾಗುತ್ತದೆ. ತತ್ವಜ್ಞಾನಿ ಜಾನ್ ಲಾಕ್ ಕಲ್ಪನೆಯಲ್ಲಿ ವ್ಯಕ್ತಿಯು ಕೇವಲ ಒಂದು ದಾಳವಾಗಿ ಬದಲಾಗುತ್ತಾನೆ. ಇದು ವ್ಯಕ್ತಿಗಳು ಸೇರಿ ಒಪ್ಪಂದ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟು ಅಂತಿಮವಾಗಿ ಸಾರ್ವಭೌಮತ್ವ ಕಲ್ಪನೆಗೆ ಕಾರಣವಾಗುತ್ತದೆ. ಮೌದೂದಿ ರವರ ದೃಷ್ಟಿಯಲ್ಲಿ ಸಮುದಾಯಿಕ ಭಾವನೆ, ಶೂರಾ(ಸಮಾಲೋಚನೆ) ಮತ್ತು ದೀನ್ ಅನ್ನು ನೆಲೆಗೊಳಿಸುವ ಸಾಮೂಹಿಕ ಜೀವನವೇ ಎಲ್ಲದಕ್ಕಿಂತ ಮುಖ್ಯವಾಗಿತ್ತು. ಅಂತಿಮವಾಗಿ, ಧರ್ಮವನ್ನು ಕೇವಲ ಖಾಸಗಿ ವ್ಯವಹಾರಗಳಿಗೆ ಸೀಮಿತಗೊಳಿಸಬೇಕು ಎಂಬ ಜಾತ್ಯತೀತತೆಯ ಕಲ್ಪನೆಯನ್ನು ಮೌದೂದಿ ತೀವ್ರವಾಗಿ ವಿರೋಧಿಸಿದರು. ಮುಸ್ಲಿಂ ಸಮುದಾಯವು ಮದ್ರಸಾ ಮಾದರಿ ಅಥವಾ ಅಲಿಘರ್ ಮಾದರಿಯ ಶಿಕ್ಷಣದ ನಡುವೆ ಗೊಂದಲದಲ್ಲಿ ನಿಂತಿದ್ದ ಐತಿಹಾಸಿಕ ಕಾಲಘಟ್ಟದಲ್ಲಿ ಅವರ ಈ ಧ್ವನಿ ಮೂಡಿಬಂದಿತ್ತು. ಯಹೂದಿ-ಕ್ರಿಶ್ಚಿಯನ್ ಸಂಪ್ರದಾಯದ ಉಳಿಕೆಯಾಗಿದ್ದ ಚಕ್ರವರ್ತಿ ಮತ್ತು ಪೋಪ್ ನಡುವಿನ ಅಧಿಕಾರ ವಿಭಜನೆಯಂತೆ ಧರ್ಮವಿರಬಾರದು; ಬದಲಾಗಿ ಧರ್ಮವು ಬದುಕಿನ ಪ್ರತಿಯೊಂದು ಹೆಜ್ಜೆಗೂ ಮಾರ್ಗದರ್ಶನ ನೀಡಬೇಕು ಎಂಬ ತಮ್ಮ ತತ್ವದಲ್ಲಿ ಅವರು ಅಚಲರಾಗಿದ್ದರು. ರಾಷ್ಟ್ರ-ರಾಜ್ಯಗಳು ರೂಪುಗೊಳ್ಳುತ್ತಿದ್ದ ಆ ಯುಗದಲ್ಲಿ, ಪಾಶ್ಚಾತ್ಯ ಉದಾರವಾದಿ ಬಂಡವಾಳಶಾಹಿ ಜೀವನಮಾರ್ಗಕ್ಕೆ ಪ್ರತ್ಯೇಕವಾದ ಮತ್ತು ಕಾರ್ಯಸಾಧ್ಯವಾದ ಪರ್ಯಾಯವಾಗಿ ಇಸ್ಲಾಮ್‌ ಧರ್ಮವು ರಾಜಕೀಯ, ಆರ್ಥಿಕ ಸಾಮಾಜಿಕ ಇತ್ಯಾದಿ ಬದುಕಿನ ಎಲ್ಲಾ ಕ್ಷೇತ್ರಗಳಿಗೆ ಸಮಗ್ರ ದಾರಿಯಾಗಿದೆ ಎಂದು ಅವರು ಅಪ್ಪಟ ಧೈರ್ಯದಿಂದ ಸಾರಿದರು. ಆಧುನಿಕ ದೃಷ್ಟಿಕೋನಗಳ ಈ ವಿಮರ್ಶೆಯು ಇಸ್ಲಾಮಿಕ್ ಜೀವನ ಪದ್ಧತಿಗೆ ಹೇಗೆ ಹೊಸ ಹೆದ್ದಾರಿಯನ್ನು ಹಾಕಿಕೊಡುತ್ತದೆ ಎಂಬುದನ್ನು ನಾವು ಮುಂದೆ ಗಮನಿಸೋಣ. 

ಇಸ್ಲಾಮೀ ಜೀವನ ವ್ಯವಸ್ಥೆ:

ಈಗ ಮೌದೂದಿಯವರ ಪ್ರತಿಪಾದನೆಯ ಹಿನ್ನೆಲೆ ಹಾಗೂ ಅವರ ಚಿಂತನಾ ಕ್ರಮದ ಮೂಲ ಸೂತ್ರಗಳನ್ನು ಗ್ರಹಿಸಿದ್ದೇವೆ. ಅವರ ದೃಷ್ಟಿಕೋನವನ್ನು ಜೀವನದ ವಿವಿಧ ಕ್ಷೇತ್ರ/ವ್ಯವಸ್ಥೆಗಳಿಗೆ ಅನ್ವಯಿಸಿದಾಗ ಒಂದು ವಿಭಿನ್ನವಾದ, ಸ್ಪಷ್ಟವಾದ ಹಾಗೂ ತಾರ್ಕಿಕವಾದ ಚೌಕಟ್ಟು ಅನಾವರಣಗೊಳ್ಳುತ್ತದೆ. ಆ ಚೌಕಟ್ಟು ವಿಶ್ವಾಸದ ಮೇಲೆ ರೂಪಪಡೆದು ನ್ಯಾಯ ಹಾಗೂ ಶಾಂತಿಯನ್ನು ಫಲವಾಗಿ ನೀಡುವ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ಒದಗಿಸುತ್ತದೆ. 

ಇಸ್ಲಾಮಿಕ್ ರಾಜಕೀಯ ಇತಿಹಾಸದ ಮೇರುರಚನೆಯಾದ “ಖಿಲಾಫತ್-ಒ-ಮುಲೂಕಿಯತ್” ಕೃತಿಯಲ್ಲಿ ಅವರು ಕಳೆದ ಸಹಸ್ರಮಾನಗಳ ಇತಿಹಾಸದ ವಸ್ತುನಿಷ್ಠ ವಿಶ್ಲೇಷಣೆಯನ್ನು ನಡೆಸಿ ಇಸ್ಲಾಮಿಕ್ ರಾಜಕೀಯ ದರ್ಶನವನ್ನು ರೂಪಿಸಿದ್ದಾರೆ. ಖಿಲಾಫತ್ ವ್ಯವಸ್ಥೆಯು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಂದ ಕಬಳಿಸಲ್ಪಟ್ಟು ರಾಜಪ್ರಭುತ್ವವಾಗಿ (ಮುಲೂಕಿಯತ್) ಮಾರ್ಪಟ್ಟ ಪರಿಣಾಮವಾಗಿ ಅದರ ತಾತ್ವಿಕ ನೆಲೆ ಹೇಗೆ ಭಂಗಗೊಂಡಿತು ಎಂಬುದನ್ನು ಅವರು ನಿಖರವಾಗಿ ಗುರುತಿಸುತ್ತಾರೆ. ಮೂಲತಃ ಖಿಲಾಫತ್ ವ್ಯವಸ್ಥೆಯು ಶೂರಾ(ಸಮಾಲೋಚನೆ), ಹೊಣೆಗಾರಿಕೆ ಹಾಗೂ ಪಾರದರ್ಶಕತೆಯುಳ್ಳ ಅತ್ಯುತ್ಕೃಷ್ಟ ನಿದರ್ಶನವಾಗಿದ್ದು, ಅಲ್ಲಿ ಸಾರ್ವಭೌಮತ್ವವು ದೈವಿಕವಾಗಿತ್ತು ಮತ್ತು ಆಡಳಿತಗಾರನು ದೈವಪ್ರತಿನಿಧಿಯಾಗಿದ್ದನು. ಆ ಪರಮಾಧಿಕಾರವು(ಹಾಕಿಮಿಯತ್) ಆಡಳಿತಗಾರನದಾಗಿರದೆ ದೈವಿಕವಾಗಿತ್ತು, ಆದರೆ ಕ್ರಮೇಣ ಅದನ್ನು ದುರ್ಬಲಗೊಳಿಸಲಾಯಿತು. ಆ ವ್ಯವಸ್ಥೆಯಲ್ಲಿ, ಕಾನೂನು ಮಾನವ-ನಿರ್ಮಿತವಾಗದೆ ದೇವ ಆಧಾರಿತವಾಗಿತ್ತು. 

ಆದರೆ, ಆಧುನಿಕತೆಯು ಬಹುಸಂಖ್ಯಾತರ ಇಚ್ಛೆಯನ್ನೇ ನೈತಿಕತೆಯ ಮಾನದಂಡವನ್ನಾಗಿಸಿತು. ಇಸ್ಲಾಮಿಕ್ ರಾಜಕೀಯ ತತ್ವಗಳನ್ನು ವಿಮರ್ಶಾತ್ಮಕವಾಗಿ ಬಿಡಿಸಿಟ್ಟ ಅವರು, ತಮ್ಮ “ತಹ್ರೀಕೆ ಅಝಾದಿ ಹಿಂದ್ ಔರ್ ಮುಸಲ್ಮಾನ್” ಕೃತಿಯಲ್ಲಿ ಅದನ್ನು ಆಧುನಿಕ ರಾಜಕೀಯ ವಿವೇಚನೆಗೂ ಅನ್ವಯಿಸಿ, ಲೌಕಿಕತೆಯಿಂದ ಸಾರ್ವಭೌಮತ್ವವನ್ನು ಪಡೆವ ಆಧುನಿಕ ಸಿದ್ಧಾಂತಗಳು ವಿನಾಶದ ಅಂಚಿನಲ್ಲಿವೆ ಎಂದು ಸಾರಿದರು. ಉದಾರವಾದಿ ಪ್ರಜಾಪ್ರಭುತ್ವದ ಕುಸಿತವನ್ನು ಅವರು ಮೊದಲೇ ಊಹಿಸಿದ್ದರು; ಗಣರಾಜ್ಯಗಳಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಾರೆ ಎಂದು ಭವಿಷ್ಯ ನುಡಿದಿದ್ದರು; ಇದು ಇಂದು ಜಾಗತಿಕವಾಗಿ ಸಾಬೀತಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ಹೇಗೆ ಹೈಜಾಕ್ ಆಗಬಹುದು ಎಂಬುದನ್ನು ಟ್ರಂಪ್ ನಂತಹ ಚುನಾಯಿತ ನಾಯಕರ ಉದಾಹರಣೆಗಳು ತೋರಿಸುತ್ತವೆ. ಕಾನೂನು ಮತ್ತು ಸುವ್ಯವಸ್ಥೆಯ ಈ ತೀವ್ರ ಬಿಕ್ಕಟ್ಟು, ವಿಶೇಷವಾಗಿ ಫೆಲೆಸ್ತೀನ್‌ ನರಮೇಧದ ಭೀಕರತೆಯು ಉದಾರವಾದಿ ಪ್ರಜಾಪ್ರಭುತ್ವಗಳ ಪತನವನ್ನು ಜಗತ್ತಿಗೆ ತೆರೆದಿಡುತ್ತಿದೆ. ಬಂಡವಾಳಶಾಹಿ ಆರ್ಥಿಕತೆಯಿಂದ ಚಲಾವಣೆಗೆ ಬಂದಿರುವ ಉದಾರವಾದಿ ರಾಷ್ಟ್ರ-ರಾಜ್ಯದ ಈ ವೈಫಲ್ಯದ ಸಾರಾಂಶ ಏನೆಂದರೆ ರಾಜಕೀಯವು ನೈತಿಕತೆ ಮತ್ತು ಹೊಣೆಗಾರಿಕೆಯನ್ನು ಒಳಗೊಂಡಿರಬೇಕು ಎಂದಾಗಿದೆ.  

ಅದೇ ರೀತಿ ನಾವು ಅರ್ಥಶಾಸ್ತ್ರವನ್ನು ನೋಡಿದರೆ, 20ನೇ ಶತಮಾನದ ಆರಂಭದಲ್ಲಿ ಕೈಗಾರಿಕೀಕರಣವು ಆರ್ಥಿಕತೆಯ ಹೊಸ ಮಾದರಿಗಳನ್ನು ತಂದಿತು. ಭಾರೀ ಯಂತ್ರೋಪಕರಣಗಳು ಕಾರ್ಮಿಕರನ್ನು ಹಿನ್ನೆಲೆಗೆ ಸರಿಸಿದವು, ಬಂಡವಾಳಶಾಹಿತ್ವವು ವೇದಿಕೆಯನ್ನು ಆಕ್ರಮಿಸಿಕೊಂಡಿತು ಹಾಗೂ ಹಣ ಹೊಸ ದೇವರಾಯಿತು. ಕಮ್ಯುನಿಸಂ; ಉತ್ಪಾದನೆ ಮತ್ತು ಕಾರ್ಮಿಕರ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಿತು. ಮೌಲಾನ ಮೌದೂದಿಯವರು ತಮ್ಮ “ಸೂದ್” ಎಂಬ ಕೃತಿಯಲ್ಲಿ ಬಡ್ಡಿಯ ಮೇಲೆ ನಿರ್ಮಿಸಲಾದ ವ್ಯವಸ್ಥೆಯು ಏಕೆ ಶೋಷಣೆಯಿಂದ ಕೂಡಿದೆ ಮತ್ತು ವಿಪತ್ತು ತಂದಿಡುತ್ತದೆ ಎಂದು ಪ್ರತಿಪಾದಿಸಿದರು. ಅಮೇರಿಕಾದ ವಾಲ್‌ಸ್ಟ್ರೀಟ್‌ನಿಂದ ಭಾರತದ  ದಲಾಲ್ ಸ್ಟ್ರೀಟ್ ವರೆಗೆ ನಾವು ಇದಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಬಂಡವಾಳಶಾಹಿತ್ವವು ಮಾರುಕಟ್ಟೆಯ ಅದೃಶ್ಯ ಹಸ್ತದ ಮೇಲೆ ಅವಲಂಬಿತವಾಗಿ ಬಂಡವಾಳದೊಂದಿಗೆ ವ್ಯಕ್ತಿಯನ್ನು ಸಬಲೀಕರಣಗೊಳಿಸಲು ಪ್ರಯತ್ನಿಸಿತು ಮತ್ತು ಕಮ್ಯುನಿಸಂ ರಾಜ್ಯದ ಉಕ್ಕಿನ ಪಂಜದಿಂದ ನಿಯಂತ್ರಿಸಲು ಬಯಸಿತು.  

ಆದರೆ ಮೌದೂದಿಯವರು, ಮನುಷ್ಯನನ್ನು ಕೇವಲ “ಸ್ವಾರ್ಥ” ವ್ಯಕ್ತಿ ಎಂದು ಪರಿಗಣಿಸಿರುವುದೇ ಈ ಬಿಕ್ಕಟ್ಟಿನ ಮೂಲದಲ್ಲಿದೆ ಎಂದು ಅದರ ಅಂತರ್ಗತ ವಿರೋಧಾಭಾಸವದ ರೋಗನಿರ್ಣಯ ಮಾಡಿದರು. ಮನುಷ್ಯನನ್ನು ಅಲ್ಲಾಹನ ಖಲೀಫಾ ಅಥವಾ ಪ್ರತಿನಿಧಿ ಎಂಬ ಇಸ್ಲಾಮಿಕ್ ಮಾದರಿಯನ್ನು ಅವರು ಪ್ರಸ್ತುತಪಡಿಸಿದರು. ಈ ವ್ಯವಸ್ಥೆಯಲ್ಲಿ ಸಂಪತ್ತು ಮಾನವನ ಜವಾಬ್ದಾರಿಯಾಗಿದೆ ಮತ್ತು ಅವನು ಸ್ವಾತಂತ್ರ್ಯವನ್ನು ಹೊಂದಿರಬೇಕು. ಜೊತೆಗೆ ಮಾನವಕುಲದ ಒಟ್ಟು ಕಲ್ಯಾಣ ಹಾಗೂ ನಫಿಯಾತ್ (ಒಳಿತು) ಕಾಪಾಡಿಕೊಳ್ಳಬೇಕು ಮತ್ತು ಬಡ್ಡಿಯ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು.  ಹೀಗಾಗಿ ಇಂದು ಪಕ್ಷಪಾತಿ ಬಂಡವಾಳಶಾಹಿಯ (Crony capitalism) ಕರಾಳ ನೆರಳಿನಲ್ಲಿ ಸಿಲುಕಿರುವ ಮಾನವಕುಲಕ್ಕೆ, ಮೌದೂದಿಯವರ ಇಸ್ಲಾಮೀ ಆರ್ಥಿಕತೆಯ ಆದರ್ಶಗಳು ಕತ್ತಲಲ್ಲಿ ಕಣ್ಣುಕುಕ್ಕುವ ಬೆಳ್ಳಿಯ ಗೆರೆಯಂತೆ ಆತ್ಮಾವಲೋಕನಕ್ಕೆ ಕೈಬೀಸಿ ಕರೆಯುತ್ತಿವೆ ಇದೇ ರೀತಿ ಶಿಕ್ಷಣ, ಕಾನೂನು, ಕಲೆ, ಸಂಸ್ಕೃತಿ ಮತ್ತು ಇತರ ಅನೇಕ ಕ್ಷೇತ್ರಗಳನ್ನು ಮೌದೂದಿಯವರು ಅತ್ಯಂತ ಸಮಗ್ರವಾಗಿ  ಚರ್ಚಿಸಿದ್ದಾರೆ. ಆದಾಗ್ಯೂ, ಓದುಗರಿಗೆ ಅವರ ಆಳವಾದ ಚಿಂತನಾ ಪ್ರಕ್ರಿಯೆ ಮತ್ತು ಆದರ್ಶಗಳ ಬಳಕೆಯ ಬಗೆಯನ್ನು ಸಣ್ಣದಾಗಿ ಪರಿಚಯಿಸುವುದಷ್ಟೇ ಈ ಲೇಖನದ ಉದ್ದೇಶ.

ಈ ಮೇಲಿನ ಚರ್ಚೆಯಿಂದ ಇಸ್ಲಾಮ್‌ ಎಂದರೆ ಸಂಪೂರ್ಣ ಜೀವನ ವ್ಯವಸ್ಥೆ ಎಂಬ ಕಲ್ಪನೆಯ ಒಂದು ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ. ವಿಕಸನಗೊಳ್ಳುತ್ತಿರುವ ಮಾನವ ಸಮಾಜಕ್ಕೆ ಅನ್ವಯವಾಗುವ ನೈತಿಕ ಬುನಾದಿಗಳು ಮತ್ತು ತತ್ವಗಳು ಈ ಆದರ್ಶದಲ್ಲಿ  ಇವೆ. ಪ್ರವಾದಿ ಮುಹಮ್ಮದ್(ಸ) ಅವರು 7ನೇ ಶತಮಾನದ ಅರೇಬಿಯಾದ ಸಾಮ್ರಾಜ್ಯಶಾಹಿ (feudal) ಸಮಾಜದಲ್ಲಿ ಬದುಕಿದವರು; ಮೌದೂದಿಯವರ ದೃಷ್ಟಿಕೋನದ ತಿರುಳು ಏನೆಂದರೆ, ಇಸ್ಲಾಮಿನ ಆದರ್ಶಗಳು ಕಾಲದಲ್ಲಿ ಎಂದಿಗೂ ಸ್ಥಿರವಾಗುವಂತಹದ್ದಲ್ಲ, ಬದಲಾಗಿ ಅವು ಯಾವುದೇ ದೇಶ-ಕಾಲದ ಗಡಿಗಳನ್ನು ಮೀರಿ ಜ್ಞಾನೋದಯಗೊಳಿಸುವ ಚೈತನ್ಯವನ್ನು ಹೊಂದಿರುವಂಹದ್ದು. ನೈತಿಕತೆಯಲ್ಲಿ ಬೇರೂರಿದ ಮತ್ತು ಸಮಗ್ರ ಅಸ್ತಿತ್ವ ಹಾಗೂ ಸಮೃದ್ಧ ರಾಷ್ಟ್ರಕ್ಕಾಗಿ ಶ್ರಮಿಸುವ ಮಾನವ ಸಮಾಜವನ್ನು ಪೋಷಿಸಲು ಯಶಸ್ವಿಯಾಗಿ ಅನ್ವಯಿಸಬಹುದಾದ ಚಲನಶೀಲ ಚಿಂತನೆ ಮತ್ತು ಆದರ್ಶಗಳ ವ್ಯವಸ್ಥೆಯಾಗಿ ಇಸ್ಲಾಮ್‌ ಅನ್ನು ಪ್ರಸ್ತುತಪಡಿಸಿರುವುದೇ ಮೌದೂದಿಯವರ ಮಹಾನ್ ಸಾಧನೆಯಾಗಿದೆ. ಹೀಗಾಗಿ ಸಾಮ್ರಾಜ್ಯಶಾಹಿ(Feudal) ಸಮಾಜಗಳಿಂದ ಸಂಕೀರ್ಣ ರಾಷ್ಟ್ರ-ರಾಜ್ಯದವರೆಗೆ, ಸರಳ ಗ್ರಾಮೀಣ ಆರ್ಥಿಕತೆಯಿಂದ ಜಾಗತೀಕರಣಗೊಂಡ ಅತಿ-ಸಂಪರ್ಕಿತ ಜಗತ್ತಿನವರೆಗೆ, ಚಲನಶೀಲ ಘಟಕವಾಗಿ ಇಸ್ಲಾಮಿನ ತತ್ವಗಳೇ ಮುಂದಿನ ದಾರಿಯಾಗಿದೆ. ಇದು ಪುರಾತನವಾದ ವ್ಯವಸ್ಥೆಗಳನ್ನು ಮತ್ತೆ ಸ್ಥಾಪಿಸುವುದೂ ಅಲ್ಲ ಅಥವಾ ಕಳೆದುಹೋದ ಸುವರ್ಣ ಇತಿಹಾಸದ ವೈಭವಕ್ಕೆ ಜೋತುಬೀಳುವುದೂ ಅಲ್ಲ. ಮೌಲಾನ ಮೌದೂದಿಯವರು “ಖಿಲಾಫತ್-ಒ-ಮುಲೂಕಿಯತ್” ಕೃತಿಯಲ್ಲಿ ಅದ್ಭುತವಾಗಿ ವ್ಯಕ್ತಪಡಿಸಿರುವಂತೆ, ಒಂದು ಉಜ್ವಲ ಭವಿಷ್ಯವನ್ನು ಸೃಷ್ಟಿಸಲು ಇತಿಹಾಸದಿಂದ ಮುತ್ತುಗಳನ್ನು ಹೇಗೆ ಸಂಶ್ಲೇಷಿಸಬೇಕು ಎಂಬುವುದಾಗಿದೆ. ಇದುವೇ ಮೌಲಾನ ಮೌದೂದಿಯವರ ಮೇಧಾವಿತನವಾಗಿದೆ.