ಜನವರಿ 15: ಗಾಂಧಿ ವಿಚಾರ ವೇದಿಕೆಯಿಂದ ‘ಮಿನುಗು ನೋಟ’ ಪುಸ್ತಕ ಅನಾವರಣ ಕಾರ್ಯಕ್ರಮ

0
185

ಸನ್ಮಾರ್ಗ ವಾರ್ತೆ

ಮಂಗಳೂರು: ಮಹಾತ್ಮಾ ಗಾಂಧಿಯವರ ಕುರಿತಾಗಿ ವ್ಯಾಪಕವಾಗಿರುವ ಅಪ ಪ್ರಚಾರದ ಹಿನ್ನೆಲೆಯ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ಪುಸ್ತಕವನ್ನು ತರುವ ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆಗನುಸಾರವಾಗಿ ಶ್ರೀ ಎಂ.‌ಜಿ.ಹೆಗಡೆಯವರು ಬರೆದು, ಮೈಸೂರಿನ ರೂಪ ಪ್ರಕಾಶನದವರು ಪ್ರಕಟಿಸಿರುವ  ‘ಮಿನುಗು ನೋಟ’ ಪುಸ್ತಕವು ಇದೇ ಜನವರಿ 15 ರಂದು ಮಂಗಳೂರಿನ ಕದ್ರಿಯ ಸರ್ಕ್ಯೂಟ್ ಹೌಸ್ ಬಳಿಯಲ್ಲಿರುವ ಲಯನ್ಸ್ ಸಭಾ ಭವನದಲ್ಲಿ ಅನಾವರಣಗೊಳ್ಳಲಿದೆ.  ಮಾಜಿ ಪ್ರಧಾನ ಮಂತ್ರಿ ದಿ|ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆಗಾರರೂ ಆಗಿದ್ದ ಪ್ರಸಿದ್ಧ ಅಂಕಣಕಾರ ಶ್ರೀ ಸುಧೀಂದ್ರ ಕುಲಕರ್ಣಿಯವರು ಪುಸ್ತಕವನ್ನು ಅನಾವರಣಗೊಳಿಸಲಿರುವರು. ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀ ಶ್ರೀಧರ ಜಿ.‌ಭಿಡೆಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಪುಸ್ತಕ ಅನಾವರಣವು ಬೆಳಗ್ಗೆ 10 ಗಂಟೆಗೆ ನಡೆದು,  ನಂತರ ಸಂವಾದ ಹಾಗೂ ಗಾಂಧಿ ವಿಚಾರ ವೇದಿಕೆಯನ್ನು ವಿಸ್ತರಿಸುವ ಕುರಿತ ಚರ್ಚೆಗಳು ನಡೆಯಲಿವೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರ ಕುರಿತಾಗಿ ಅವಹೇಳನ ಮಾಡುವ ಪ್ರವೃತ್ತಿ ವ್ಯಾಪಕವಾಗಿದೆ. ಈ ಪ್ರವೃತ್ತಿಯು ವಿಮರ್ಶೆಯ ವ್ಯಾಪ್ತಿಯಲ್ಲಿ ಇಲ್ಲ. ವಿಮರ್ಶೆಯಾಗಿದ್ದಾಗ ಸುಳ್ಳುಗಳನ್ನು ಸೃಷ್ಟಿಸಿ ಪ್ರಚುರಪಡಿಸುವ, ಅರ್ಧ ಸತ್ಯಗಳನ್ನು ತನಗೆ ಬೇಕಾದಂತೆ ವ್ಯಾಖ್ಯಾನಿಸಿ ರಾಷ್ಟ್ರ ನಾಯಕರ ತೇಜೋವಧೆ ಮಾಡುವ ಉದ್ದೇಶವಿರುವುದಿಲ್ಲ. ವೈಚಾರಿಕ ವಿರೋಧ ಮಾತ್ರ ಇರುತ್ತದೆ. ಮಹಾತ್ಮಾ ಗಾಂಧಿಯವರ ಮೇಲಿನ ವೈಚಾರಿಕ ವಿರೋಧಕ್ಕಾಗಲಿ, ವಿಮರ್ಶೆಗಾಗಲಿ ಗಾಂಧಿ ವಿಚಾರ ವೇದಿಕೆಯು ಆಕ್ಷೇಪಿಸುತ್ತಿಲ್ಲ. ಆದರೆ ಗಾಂಧೀಜಿಯವರ ಮೇಲಿನ ಅಪಪ್ರಚಾರವನ್ನು ಪ್ರಶ್ನೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

ಪ್ರಕಟಿತ ಪುಸ್ತಕದ ಬಗ್ಗೆ ಸಂವಾದದಲ್ಲಿ ಶ್ರೀ ಸುಬ್ರಾಯ ಚೊಕ್ಕಾಡಿ, ಶ್ರೀಮತಿ ಭುವನೇಶ್ವರಿ ಹೆಗಡೆ,  ಶ್ರೀ ಬೊಳುವಾರು ಮಹಮದ್ ಕುಂಞಿ,  ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ, ಡಾ.‌ಜೋಸೆಫ್ ಎನ್.ಎಮ್,  ಡಾ.‌ಕೆ. ಚಿನ್ನಪ್ಪ ಗೌಡ,  ಡಾ.ಬಿ.‌ಜನಾರ್ದನ ಭಟ್,  ಡಾ. ಉದಯ ಕುಮಾರ್, ಡಾ.ಪಿ.ವಿ. ಭಂಡಾರಿ, ಡಾ‌.‌ಎ. ಎಮ್.‌ ನರಹರಿ, ಶ್ರೀಮತಿ ಬಿ.‌ಎಮ್.‌ರೋಹಿಣಿ,  ಗುಲ್ಬರ್ಗಾದಿಂದ ಶ್ರೀ ಗಿರೀಶ್ ಪಾಟೀಲ್, ಧಾರವಾಡದಿಂದ, ಶ್ರೀ ವಿಜಯೇಂದ್ರ ಪಾಟೀಲ್, ಶ್ರೀ ಮಲ್ಲು ಪಾಟೀಲ್,  ಕಲಘಟಗಿಯಿಂದ ಶ್ರೀ ಶರಣ್ ಹುರಕಡ್ಲಿ,  ನವಲಗುಂದದಿಂದ ಶ್ರೀ ರವಿಚಂದ್ರ,  ಕಪ್ಪಳದಿಂದ ಶ್ರೀ ಬಸವರಾಜ ಸವಡಿ, ತೀರ್ಥಹಳ್ಳಿಯಿಂದ ಟಿ.ರಮೇಶ್ ಶೆಟ್ಟಿ, ಬಿಜಾಪುರದಿಂದ ಶ್ರೀ ನೇತಾಜಿ ಗಾಂಧಿ, ಬೆಂಗಳೂರಿನಿಂದ ಶ್ರೀಮತಿ ಛಾಯಾ ಉಪಾಧ್ಯಾಯ, ಶ್ರೀಮತಿ ಸುಚರಿತಾ,  ಶ್ರೀ ಅಣ್ಣಾ ವಿನಯಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಶ್ರೀ ಭಾಗ್ಯೇಶ್ ರೈ ಅವರು ತಿಳಿಸಿರುತ್ತಾರೆ.