ಮುಸ್ಲಿಂ ಮುಖಂಡ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣ; ಆರು ಮಂದಿಯ ವಿರುದ್ಧ ಎಫ್‌ಐಆರ್

0
244

ಸನ್ಮಾರ್ಗ ವಾರ್ತೆ

ಮಂಗಳೂರು: ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಿನ್ನೆ ನಾಪತ್ತೆಯಾಗಿದ್ದ ಉದ್ಯಮಿ ಮುಮ್ಮಾಝ್ ಅಲಿ ಅವರ ನಾಪತ್ತೆ ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಆರು ಮಂದಿಯ ವಿರುದ್ಧ ಕಾವೂರು ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಅಲಿ ಅವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಅವರಿಗಾಗಿ ಫಲ್ಗುಣಿ ನದಿಯಲ್ಲಿ ಹುಡುಕಾಟ ಸೋಮವಾರವೂ ಮುಂದುವರಿದಿದೆ.

ಧಾರ್ಮಿಕ ಸಾಮಾಜಿಕ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮುಂದಾಳತ್ವ ನೀಡುತ್ತಿದ್ದ ಮುಮ್ತಾಜ್ ಅಲಿ ಅವರಿಗೆ ಮಹಿಳೆಯೊಬ್ಬರ ವಿಷಯವನ್ನು ಮುಂದಿಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದ್ದು, ಆರೋಪಿಗಳು ಅವರನ್ನು ನಿರಂತರವಾಗಿ ಬೆದರಿಸಿದ್ದರು. ಮಾತ್ರವಲ್ಲದೆ, ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ 6 ಮಂದಿ ಆರೋಪಿಗಳ ವಿರುದ್ಧ ಮುಮ್ತಾಜ್ ಅಲಿಯವರ ಸಹೋದರ ಹೈದ‌ರ್ ಅಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಕಳೆದ ಮೂರು ದಶಕಗಳಿಂದ ಸಮಾಜ ಸೇವೆ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅವರ ಹೆಸರನ್ನು ಹಾಳು ಮಾಡುವ ದುರುದ್ದೇಶವನ್ನು ಆರೋಪಿಗಳು ಹೊಂದಿದ್ದರು. ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇದೆ, ಅದನ್ನು ಅಪಪ್ರಚಾರ ಮಾಡುತ್ತೇವೆ ಎಂದು ಬೆದರಿಸಿ 50 ಲಕ್ಷ ರೂಪಾಯಿ ಆರೋಪಿಗಳು ವಸೂಲಿ ಮಾಡಿದ್ದು, ಇನ್ನೂ 25 ಲಕ್ಷ ಚೆಕ್ ಮೂಲಕ ಪಡೆದು ಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಅವರ ಸಹೋದರರಾಗಿರುವ ಮುಮ್ತಾಝ್ ಅಲಿ, ಭಾನುವಾರ ಬೆಳಗ್ಗಿನ ಜಾವದಿಂದ ನಾಪತ್ತೆಯಾಗಿದ್ದು, ಅವರ ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಅವರಿಗಾಗಿ ಫಲ್ಗುಣಿ ನದಿಯಲ್ಲಿ ಮುಳುಗು ತಜ್ಞರಿಂದ ಹುಡುಕಾಟ ಮುಂದುವರಿದಿದೆ.