ಶಿಕ್ಷಣ ಒಂದೇ ಬಡತನವನ್ನು ಮೆಟ್ಟಿ ನಿಲ್ಲುವ ಆಯುಧ: ರಾಜ್ಯ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡುತ್ತ ಯು.ಟಿ. ಖಾದರ್ ಕರೆ

0
449

ಸನ್ಮಾರ್ಗ ವಾರ್ತೆ

ಗದಗ: ಜನಪ್ರತಿನಿಧಿಗಳಿಂದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಒಂದು ಮನೆಯ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಆ ಮನೆಯ ಬಡತನವನ್ನು ಮೆಟ್ಟಿ ನಿಲ್ಲಲು ಆ ಶಿಕ್ಷಣ ನೆರವಾಗುತ್ತದೆ. ರಾಷ್ಟ್ರವನ್ನು ಅದರ ಪಾಡಿಗೆ ಬಿಟ್ಟುಬಿಡಿ. ನೀವು ಸಮಸ್ಯೆ ಸಂಘರ್ಷಗಳಿಗೆ ಕಾರಣವಾಗದೆ ಹೋದರೆ ತನ್ನಂತಾನೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಅವರು ಇಲ್ಲಿನ ಗಜೇಂದ್ರಗಡದ ಜಗದ್ಗುರು ತೋಂಟದಾರ್ಯ ಸಿಬಿ ಎಸ್ ಇ ಶಾಲಾ ಸಭಾಂಗಣದಲ್ಲಿ ಮುಸ್ಲಿಂ ಲೇಖಕರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ಕೊಡ ಮಾಡುವ ರಾಜ್ಯ ಮುಸ್ಲಿಂ ಸಾಹಿತ್ಯ ಪ್ರಶಸ್ತಿಯನ್ನು ಐಜೆ ಮ್ಯಾಗೇರಿ ಅವರಿಗೆ ಪ್ರಧಾನ ಮಾಡುತ್ತಾ ಮಾತಾಡಿದರು.

ಈ ದೇಶ ನಾಗರಿಕರಿಗೆ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಅದ್ಭುತ ಸಂವಿಧಾನವನ್ನು ಪಡೆದ ದೇಶ ನಮ್ಮದು. ಆದರೆ ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಬಾರದು. ದೇಶದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ವರ್ತನೆ ಇರಬೇಕು. ಶಿಕ್ಷಣವೊಂದೇ ಬಡತನವನ್ನು ಮೆಟ್ಟಿ ನಿಲ್ಲುವ ಪ್ರಬಲ ಆಯುಧ ಎಂದವರು ಹೇಳಿದರು.

ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿರುವ ಐಜೆ ಮ್ಯಾಗೇರಿ ಅವರ ಜೈಲು ಡೈರಿ ಕೃತಿಯು 2024ನೇ ರಾಜ್ಯ ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಸ್ಪೀಕರ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಇದೇ ಸಂದರ್ಭದಲ್ಲಿ ಗಜೇಂದ್ರಗಡ ಮತ್ತು ಆಸುಪಾಸಿನ ಹಲವು ಸಂಘ ಸಂಸ್ಥೆಗಳು ಸ್ಪೀಕರ್ ಮತ್ತು ಮ್ಯಾಗೇರಿ ಅವರನ್ನು ಸನ್ಮಾನಿಸಿದವು.

ಪ್ರಶಸ್ತಿಯನ್ನು ಸ್ವೀಕರಿಸಿದ ಮ್ಯಾಗೇರಿ ಅವರು ಶಿಕ್ಷಣಕ್ಕೆ ಮಹತ್ವ ಕೊಡುವಂತೆ ಕರೆ ನೀಡಿದರು. ಸ್ಥಳೀಯ ಶಾಸಕ ಜಿ.ಎಸ್. ಪಾಟೀಲ್ ಅವರು ಸಂದರ್ಬೋಚಿತವಾಗಿ ಮಾತಾಡಿದರು. ಮ್ಯಾಗೇರಿ ಅವರ ಪತ್ನಿ ಫರೀದಾ ಬೇಗಂ ಡಾಲಾಯತ್, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ, ಹಿರಿಯ ಸಾಹಿತಿ ಬಿ.ವಿ. ಕೆಂಚ ರೆಡ್ಡಿ, ಗಜೇಂದ್ರಗಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಪಿ. ಗಾಣಗೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೂಸುಫ್ ಗೋಡೆಕಾರ ಮತ್ತು ಮುಸ್ಲಿಂ ಲೇಖಕರ ಸಂಘದ ಜೊತೆ ಕಾರ್ಯದರ್ಶಿ ಸಲೀಂ ಬೋಳಂಗಡಿ ಸ್ತುತಿ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಉರ್ದು ಭಾಷೆಯ ಕವಿಗೋಷ್ಠಿಯನ್ನು ನಡೆಸಲಾಯಿತು.

ಎ.ಎಸ್. ಮಕಾನದಾರ, ಡಾ| ಹಸೀನ ಕಾದ್ರಿ, ಶಿಲ್ಪ ಮ್ಯಾಗೇರಿ, ಮೊಹಮ್ಮದ್ ಅರ್ಷದ್ ಹಿರೇಹಾಳ, ಮುರ್ತಝಾ ಬೇಗಂ ಕೊಡಗಲಿ, ಅನ್ವರ್ ಅಹಮದ್ ವಣಗೇರಿ, ಖಾಝಿ ಶಬೀರ್ ಅಹಮದ್ ಮನ್ಸೂರಿ ಮತ್ತು ಏಕೆ ಕುಕ್ಕಿಲ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಸಯೀದ್ ಇಸ್ಮಾಯಿಲ್ ಧನ್ಯವಾದ ಅರ್ಪಿಸಿದರು. ಮುಸ್ಲಿಂ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಹುಸೇನ್ ಕಾಟಿಪಳ್ಳ, ಯಾಕೂಬ್ ಕಲ್ಲರ್ಪೆ ಉಪಸ್ಥಿತರಿದ್ದರು.