ನೆತನ್ಯಾಹು ಕೈಬಿಟ್ಟ ಮೋದಿ; ಬ್ರಿಕ್ಸ್‌ ಸಮಾವೇಶದಲ್ಲಿ ಇಸ್ರೇಲ್ ವಿರುದ್ಧ ನಿಲುವು ತಳೆದ ಭಾರತ

0
267

ಸನ್ಮಾರ್ಗ ವಾರ್ತೆ

ನವದೆಹಲಿ: ಟೆಲ್ ಅವೀವ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ವೇದಿಕೆಯಲ್ಲಿ ತಬ್ಬಿಕೊಂಡು ಭಾರತ ಹಾಗೂ ಇಸ್ರೇಲ್ ನಡುವೆ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ಯನ್ನು ಘೋಷಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ರಾಜಕಾರಣದಲ್ಲಿ ಗಮನಾರ್ಹ ಬದಲಾವಣೆ ಮಾಡಿದ್ದಾರೆ. ನವದೆಹಲಿಯಲ್ಲಿ ಮುಕ್ತಾಯಗೊಂಡ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಜಂಟಿ ಘೋಷಣೆಯು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಜಗತ್ತಿನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಫೆಲೆಸ್ತೀನ್‌ ಸಮಸ್ಯೆಯ ಕುರಿತು ಇಸ್ರೇಲ್ ವಿರುದ್ಧದ ಕಠಿಣ ನಿಲುವಿಗೆ ಭಾರತವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಫೆಲೆಸ್ತೀನ್‌ ಜನರ ಬಲವಂತದ ಸ್ಥಳಾಂತರವನ್ನು ಬ್ರಿಕ್ಸ್ ಘೋಷಣೆಯು ಬಲವಾಗಿ ಖಂಡಿಸಿದೆ ಮತ್ತು ಗಾಝಾದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸುವ ಇಸ್ರೇಲ್‌ನ ಯಾವುದೇ ಕ್ರಮವನ್ನು ತೀವ್ರವಾಗಿ ವಿರೋಧಿಸಿದೆ. ಗಾಝಾದಲ್ಲಿ ಕದನ ವಿರಾಮ ಮತ್ತು ಶಾಂತಿ ಮರುಸ್ಥಾಪನೆ ಗುರಿಯನ್ನು ಹೊಂದಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 2803 ನೇ ನಿರ್ಣಯವನ್ನು ಶೃಂಗಸಭೆಯು ಸಂಪೂರ್ಣವಾಗಿ ಬೆಂಬಲಿಸಿತು. ಜಾಗತಿಕ ದಕ್ಷಿಣದ (Global South) ದೇಶಗಳ ಐಕಮತ್ಯ ಮತ್ತು ಭಾವನೆಗಳೊಂದಿಗೆ ಭಾರತವು ಈ ಐತಿಹಾಸಿಕ ಘೋಷಣೆಯನ್ನು ಆತಿಥ್ಯ ವಹಿಸಿ ಸಹಿ ಹಾಕಿದೆ.

ಬ್ರಿಟನ್ ಇಸ್ರೇಲ್‌ನ ಕಾನೂನುಬಹಿರ ವಸಾಹತು ಪ್ರದೇಶಗಳ ಮೇಲೆ ಸಂಪೂರ್ಣ ವ್ಯಾಪಾರ ದಿಗ್ಬಂಧನ ಮತ್ತು ನಿರ್ಬಂಧಗಳನ್ನು ಘೋಷಿಸಿದ ಕೆಲವೇ ದಿನಗಳ ನಂತರ ದೆಹಲಿಯಿಂದ ಈ ಆಘಾತ ಎದುರಾಗಿದೆ. ಪಶ್ಚಿಮ ದಡದ ವಸಾಹತುಗಾರರು “ಜನಾಂಗೀಯ ಶುದ್ಧೀಕರಣ” ಎಸಗುತ್ತಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಎಡ್ ಮಿಲಿಬಾಂಡ್ ಬಹಿರಂಗವಾಗಿ ಆರೋಪಿಸಿದ ನಂತರ, ಜೆರುಸಲೆಮ್‌ನಲ್ಲಿರುವ ಬ್ರಿಟಿಷ್ ದೂತವಾಸವನ್ನು ಮುಚ್ಚುವ ಮೂಲಕ ಇಸ್ರೇಲ್ ಪ್ರತಿಕ್ರಿಯಿಸಿತು. ಲಂಡನ್ ನಂತರ ನವದೆಹಲಿಯ ಈ ಸಾಮೂಹಿಕ ರಾಜತಾಂತ್ರಿಕ ಒತ್ತಡವು, ಅಕ್ಟೋಬರ್‌ನಲ್ಲಿ ಕಠಿಣ ಚುನಾವಣಾ ಕದನವನ್ನು ಎದುರಿಸುತ್ತಿರುವ ನೆತನ್ಯಾಹುವಿಗೆ ತೀವ್ರವಾದ ಪೆಟ್ಟು ನೀಡಿದೆ.

ಇಸ್ರೇಲ್ ಜೊತೆಗಿನ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯು ಬಲವಾಗಿ ಉಳಿದಿದ್ದರೂ, ಜಾಗತಿಕ ದಕ್ಷಿಣದ ನಾಯಕನಾದ ಭಾರತಕ್ಕೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನ ವಿದೇಶಾಂಗ ನೀತಿಯ ಸಮತೋಲನವನ್ನು ಪ್ರದರ್ಶಿಸುವುದು ಅನಿವಾರ್ಯವಾಗಿತ್ತು. ಅರಬ್-ಮುಸ್ಲಿಂ ದೇಶಗಳು, ಆಫ್ರಿಕನ್ ಒಕ್ಕೂಟ ಮತ್ತು ಲ್ಯಾಟಿನ್ ಅಮೆರಿಕಾದ ಶಕ್ತಿಗಳು ಫೆಲೆಸ್ತೀನ್‌ನಲ್ಲಿನ ನರಮೇದ ಮತ್ತು ಸ್ಥಳಾಂತರವನ್ನು ಒಮ್ಮಂದಲದಿಂದ ಖಂಡಿಸುತ್ತಿರುವಾಗ, ಜಾಗತಿಕ ನಾಯಕತ್ವದ ಸ್ಥಾನವನ್ನು ಬಯಸುವ ಭಾರತಕ್ಕೆ ಸಂಪೂರ್ಣವಾಗಿ ಇಸ್ರೇಲ್ ಪರವಾಗಿ ಒಲವು ತೋರುವುದು ಅಸಾಧ್ಯವಾಯಿತು. ವಿಶೇಷವಾಗಿ ಇಂಧನ ಆಮದುಗಳು ಮತ್ತು ಗಲ್ಫ್ ಪ್ರದೇಶದಲ್ಲಿರುವ ಲಕ್ಷಾಂತರ ಭಾರತೀಯ ವಲಸಿಗರ ಭದ್ರತೆಯ ವಿಚಾರದಲ್ಲಿ ರಾಜಿಯಾಗಲು ಅಸಾಧ್ಯವಿರುವ ಪರಿಸ್ಥಿತಿಯಲ್ಲಿ, ನವದೆಹಲಿಯು ವೈಯಕ್ತಿಕ ಸ್ನೇಹಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಬಹುಪಕ್ಷೀಯ ರಾಜತಾಂತ್ರಿಕ ಐಕ್ಯತೆಗೆ ಆದ್ಯತೆ ನೀಡಿತು.

ಯುದ್ಧವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸುವ ಮೂಲಕ ಉಳಿವನ್ನು ಬಯಸುವ ನೆತನ್ಯಾಹು ಅವರ ತಂತ್ರವು ಪಾಶ್ಚಿಮಾತ್ಯ ಶಕ್ತಿಗಳ ನಡುವೆಯೂ ಸ್ವೀಕೃತಿಯನ್ನು ಕಳೆದುಕೊಂಡಿದೆ ಎಂಬುದಕ್ಕೆ ನಿಲುವಿನಲ್ಲಿ ಆಗಿರುವ ಈ ಬದಲಾವಣೆಗಳು ಸ್ಪಷ್ಟ ಸಾಕ್ಷಿಯಾಗಿದೆ. ಬ್ರಿಟನ್‌ನ ಆರ್ಥಿಕ ನಿರ್ಬಂಧಗಳು, ಜಿ-7 ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ಈಗ ಭಾರತ, ರಷ್ಯಾ ಮತ್ತು ಚೀನಾ ಸೇರಿದಂತೆ ಪ್ರಮುಖ ಆರ್ಥಿಕತೆಗಳು ಬ್ರಿಕ್ಸ್ ವೇದಿಕೆಯ ಮೂಲಕ ತೆಗೆದುಕೊಂಡಿರುವ ಕಠಿಣ ನಿರ್ಧಾರಗಳು ನೆತನ್ಯಾಹುವನ್ನು ಹಿಂದೆಂದಿಗಿಂತಲೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತೀವ್ರವಾದ ಆಂತರಿಕ ಸವಾಲನ್ನು ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿಗೆ, ತಾನು ನಂಬಿದ್ದ ವಿಶ್ವಾಸಾರ್ಹ ಮಿತ್ರನಾದ ಭಾರತದಿಂದ ಬಂದಿರುವ ಈ ರಾಜತಾಂತ್ರಿಕ ಹಿನ್ನಡೆಯು ಜಾಗತಿಕ ರಾಜಕಾರಣದಲ್ಲಿ ಅಧಿಕಾರದ ಸಮತೋಲನವು ವೇಗವಾಗಿ ಬದಲಾಗುತ್ತಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.