ನೈತಿಕತೆ: ಮುಂದಿನ ತಲೆಮಾರುಗಳಿಗೆ ಬಿಟ್ಟು ಹೋಗುವ ಸಂಪತ್ತು

0
229

ಸನ್ಮಾರ್ಗ ವಾರ್ತೆ

✍️ಖದೀಜ ನುಸ್ರತ್

ಇಸ್ಲಾಮ್ ಧರ್ಮವು ಆರಾಧನೆ, ವಿವಾಹ, ಆಹಾರ, ವಸ್ತ್ರಧಾರಣೆ ಮತ್ತಿತರ ವಿಷಯಗಳಲ್ಲಿ ಸಮಗ್ರ ಹಾಗೂ ಸಮಕಾಲೀನ ಸಂಸ್ಕೃತಿಯನ್ನು ಹೊಂದಿದೆ. ನೈತಿಕತೆ, ಸಭ್ಯತೆ ಮತ್ತು ಸಚ್ಚಾರಿತ್ರ್ಯವೇ ಈ ಜಾಗತಿಕ ಸಂಸ್ಕೃತಿಯ ಬುನಾದಿಯಾಗಿದೆ.

ಹವಾಮಾನ, ಆಹಾರ, ಭಾಷೆ, ವಸ್ತ್ರಧಾರಣೆಯ ಶೈಲಿ, ವಿದ್ಯಾಭ್ಯಾಸ, ಕಲೆ , ಸಾಹಿತ್ಯ, ಭಾವನೆಗಳು ಮತ್ತು ಆಚಾರ ವಿಚಾರಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತದೆ, ಆದರೆ ಧರ್ಮದ ಮೂಲ ತತ್ವ, ಅಡಿಪಾಯ ಒಂದೇ ಆಗಿರುತ್ತದೆ. ಇಸ್ಲಾಂ ಧರ್ಮದ ಆದೇಶಗಳು, ಆರಾಧನೆಗಳು ಮನುಷ್ಯನನ್ನು ನೈತಿಕತೆಯ ಅತ್ಯುನ್ನತ ಮಟ್ಟಕ್ಕೆ ತಲುಪಿಸುತ್ತದೆ. ಧರ್ಮವು ನಿಷೇಧಿಸಿದವುಗಳೆಲ್ಲವೂ ಅನೈತಿಕತೆಯ ಹತ್ತಿರವೂ ಸುಳಿಯದಂತೆ ಮುನ್ನಚ್ಚರಿಕೆಯನ್ನು ನೀಡುತ್ತದೆ. ಧರ್ಮಗ್ರಂಥ ಮತ್ತು ಆರಾಧನೆಗಳ ನಿರ್ಲಕ್ಷ್ಯಭಾವವು ಮನುಷ್ಯನನ್ನು ದುಷ್ಕರ್ಮಗಳತ್ತ ಪ್ರೇರೇಪಿಸುತ್ತದೆ.

ಎಲ್ಲಾ ದುರ್ವರ್ತನೆಗಳು ಆರಂಭದಲ್ಲಿ ಅದೊಂದು ನೋಟ ಅಥವಾ ಆಲೋಚನೆಯಾಗಿರುತ್ತದೆ. ನಂತರ ವಿಚಾರವಾಗುತ್ತದೆ. ಅನಂತರ ಯೋಜನೆಯಾಗಿ ಕ್ರಿಯೆಯಾಗಿ ಮಾರ್ಪಡುತ್ತದೆ. ನಿರಂತರ ಅದನ್ನು ಮಾಡಿದಾಗ ಅದು ಅಭ್ಯಾಸವಾಗುತ್ತದೆ. ಅಭ್ಯಾಸವು ವ್ಯಸನ, ಚಟವಾಗಿಯೂ ಮಾರ್ಪಡುತ್ತದೆ. ಆದುದರಿಂದ ಯಾವಾಗಲೂ ಮನುಷ್ಯನ ಆಲೋಚನೆಗಳು ಸಕಾರಾತ್ಮಕ, ಕ್ರಿಯಾತ್ಮಕವೂ ಪರಿಶುದ್ಧವೂ ಆಗಿರಬೇಕು. ಉತ್ತಮ ಸಮಾಜದ ನಿರ್ಮಾಣಕ್ಕೆ ಮಾತು, ನೋಟ, ವರ್ತನೆ, ಚಿಂತನೆ, ಆಲೋಚನೆಗಳಲ್ಲಿ ನೈತಿಕತೆಯು ಅಗತ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಪ್ರಕೃತಿದತ್ತವಾಗಿ ಒಳಿತು, ಕೆಡುಕು ಯಾವುದೆಂದು ಆಲೋಚಿಸುವ, ತೀರ್ಮಾನಿಸುವ ಶಕ್ತಿ, ಸಾಮಾನ್ಯ ಜ್ಞಾನ ಇರುತ್ತದೆ. ನೈತಿಕತೆಯು ಮೂಲಭೂತವಾಗಿ ಸರಿ ತಪ್ಪು, ಒಳಿತು ಕೆಡುಕು ನಡವಳಿಕೆಯ ಆಧಾರಿತವಾಗಿರುತ್ತದೆ. ಜ್ಞಾನ, ಆಯ್ಕೆ, ಸಂಕಲ್ಪ, ದೇವಭಯ ಉತ್ತಮ ನಡವಳಿಕೆಯ ತತ್ವಗಳನ್ನು ಅನುಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನೈತಿಕತೆಯು ಬಾಹ್ಯವಾಗಿಯೂ ಆಂತರಿಕವಾಗಿಯೂ ನಮ್ಮ ಆಸೆ, ಆಕಾಂಕ್ಷೆ, ಆಚಾರ, ವಿಚಾರ, ಅಭ್ಯಾಸಗಳನ್ನು ನಿಯಂತ್ರಿಸುತ್ತದೆ. ಸ್ವತಃ ತನ್ನೊಂದಿಗೆ, ಸಹಜೀವಿಗಳೊಂದಿಗೆ ಮತ್ತು ಅಲ್ಲಾಹನ ಮುಂದೆ ನೈತಿಕತೆಯನ್ನು ಪಾಲಿಸಬೇಕು. ಲಜ್ಜೆಯು ಬಾಹ್ಯವಾಗಿಯೂ ಆಂತರಿಕವಾಗಿಯೂ ಯಾವುದೇ ಕೆಟ್ಟ ಕೆಲಸಗಳನ್ನು ಮಾಡದಂತೆ ನಿಯಂತ್ರಿಸುತ್ತದೆ. ಲಜ್ಜೆಯು ಮಾತು, ವರ್ತನೆ ಹಾಗೂ ವಸ್ತ್ರಧಾರಣೆಯಲ್ಲಿ ಎದ್ದು ಕಾಣುತ್ತದೆ.

ಮನುಷ್ಯನ ಲೈಂಗಿಕ ಆಸಕ್ತಿಗಳನ್ನು ಕೆರಳಿಸುವ ಅಶ್ಲೀಲ ಹಾಡು, ವಿಡಿಯೋ, ಕಲೆ, ಕಾದಂಬರಿ, ಸಿನಿಮಾ, ಧಾರವಾಹಿಗಳು, ಜಾಹೀರತುಗಳು, ರೀಲ್ ಗಳು ಸಮಾಜದಲ್ಲಿ ಅನೈತಿಕತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿನಿಮಾ ಪರದೆಯ ಮೇಲೆ ರಂಗು ರಂಗಿನ ಕನಿಷ್ಠ ವಸ್ತ್ರವನ್ನು ಧರಿಸಿ ತಮ್ಮ ದೇಹದ ಉಬ್ಬು ತಗ್ಗುಗಳನ್ನು ತೋರಿಸುತ್ತ ಡಾನ್ಸ್ ಮಾಡಿ ಮಿನುಗುತ್ತಿರುವ ಸಿನಿಮಾ ತಾರೆಗಳ ನಿಜವಾದ ಜೀವನದಲ್ಲಿ ಮತ್ತು ತಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ನೈತಿಕತೆ, ಧಾರ್ಮಿಕತೆ, ಶಾಂತಿ ಸಮಾಧಾನವಿಲ್ಲವೆಂದು ಅವರ ಜೀವನವನ್ನು ಅಧ್ಯಯನ ಮಾಡಿದ ತನಿಖಾ ವರದಿಗಳು ಬಹಿರಂಗಪಡಿಸಿದೆ. ಲಕ್ಷಾಂತರ ಅಭಿಮಾನಿಗಳು ದಿನನಿತ್ಯ ಮನಸ್ಸಿನಲ್ಲಿ ಆರಾಧಿಸುತ್ತಿರುವ ಸಿನಿಮಾ ನಟ ನಟಿಯರ ನೈಜ ಜೀವನದಲ್ಲಿ ಅನೈತಿಕತೆಯ ಮತ್ತು ಅಧಾರ್ಮಿಕತೆಯ ದುರ್ಗಂಧದಿಂದ ಕೂಡಿದ ವಾರ್ತೆಗಳು ದಿನನಿತ್ಯ ವಾರ್ತಾ ಮಾದ್ಯಮಗಳು ವರದಿ ಮಾಡುತ್ತಿದೆ.

ಸಮಾಜಿಕ ಜಾಲತಾಣಗಳಾದ ಪೇಸ್ ಬುಕ್, ಯೂಟ್ಯುಬ್, ವಾಟ್ಸಾಪ್ ಮತ್ತು ಇನ್ ಸ್ಟಾಗ್ರಾಮ್ ಗಳು ಅಧಾರ್ಮಿಕವಾದ ಚಿತ್ರ, ಆಡಿಯೋ ಮತ್ತು ವೀಡಿಯೋ ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ಪಸರಿಸಲು ಸಹಾಯ ಮಾಡುತ್ತದೆ. ನಾವು ಉಪಯುಕ್ತವಾದ ವಾರ್ತೆ ಮತ್ತು ಪತ್ರಿಕೆಗಳನ್ನು ಓದುವಾಗ ಅಶ್ಲೀಲ ಜಾಹೀರಾತುಗಳು ನಮಗರಿಯದಂತೆ ನಮ್ಮನ್ನು ಅನೈತಿಕತೆಯಡೆಗೆ ಆಕರ್ಷಿಸುತ್ತದೆ. ಮಹಿಳೆಯರು ಉಪಯೋಗಿಸದೇ ಇರುವಂತಹ ವಸ್ತುಗಳ ಜಾಹಿರಾತಿನಲ್ಲಿ ಜನರನ್ನು ಆಕರ್ಷಿಸಲು ಮಹಿಳೆಯರ ಅರೆನಗ್ನ ದೇಹದ ಪ್ರದರ್ಶನ ಮಾಡಿ ಮಹಿಳೆಯರನ್ನು ಶೋಷಿಸಲಾಗುತ್ತಿದೆ.

ಕಣ್ಣು, ಕಿವಿ, ನಾಲಗೆ ಮತ್ತು ಹೃದಯದ ನಡುವೆ ನಿಕಟ ಬಂಧವಿದೆ. ಒಂದರಿಂದ ಮತ್ತೊಂದು ಪ್ರಭಾವಿತವಾಗುತ್ತದೆ. ದೇಹದ ಯಾವುದಾದರೊಂದು ಭಾಗವು ಭ್ರಷ್ಟಗೊಂಡರೆ ಹೃದಯವು ಕಲ್ಮಶವಾಗುತ್ತದೆ. ಹಾಗೆಯೇ ದೇಹದ ಒಂದು ಭಾಗವು ಸುಧಾರಣೆಯಾದರೆ ಇನ್ನೊಂದು ಭಾಗ ಕೂಡ ಸುಭದ್ರವಾಗಿರುತ್ತದೆ. ಕಣ್ಣಿನಿಂದ ನೋಟ, ಅಶ್ಲೀಲ ಮಾತು ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನುಂಟು ಮಾಡುತ್ತದೆ. ಆದ್ದರಿಂದಲೇ ನಿಖರವಾಗಿ ಮಾತನಾಡಲು, ದೃಷ್ಟಿಯನ್ನು ಕೆಳಗಿರಿಸಿಕೊಳ್ಳಲಿಕ್ಕೆ ಕುರ್ ಆನ್ ನಲ್ಲಿ ಆಜ್ಞಾಪಿಸಲಾಗಿದೆ.

“ಮಾನಸಿಕ ಕೇಡಿಗೊಳಗಾದ ವ್ಯಕ್ತಿಯು ಪ್ರಲೋಭನಕ್ಕೊಳಗಾಗಿ ಬಿಡುವ ರೀತಿಯಲ್ಲಿ ಮೋಹಕ ದನಿಯಲ್ಲಿ ಮಾತನಾಡಬೇಡಿರಿ. ನಿಖರವಾಗಿ ಮಾತಾಡಿರಿ.” (ಪವಿತ್ರ ಕುರ್ ಆನ್ 33:32)

“ಸತ್ಯವಿಶ್ವಾಸಿಗಳೊಡನೆ ಹೇಳಿರಿ- ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿ.” (ಪವಿತ್ರ ಕುರ್ ಆನ್ 24: 30)

“ಪೈಗಂಬರರೇ, ಸತ್ಯವಿಶ್ವಾಸಿನಿಯರೊಡನೆ ಹೇಳಿರಿ – ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿ ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ ಮತ್ತು ತಮ್ಮ ಶೃಂಗಾರಗಳನ್ನು ತೋರಿಸದಿರಲಿ (ಆದರೆ) ಸ್ವಯಂ ಪ್ರಕಟವಾಗುವಂತಹವುಗಳನ್ನು ಹೊರತು. ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ. ಅವರು ತಮ್ಮ ಶೃಂಗಾರವನ್ನು ಇವರ ಹೊರತು ಇತರರಿಗೆ ತೋರಿಸದಿರಲಿ- ಪತಿಯರು, ತಂದೆಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, ತಮ್ಮ ದಾಸಿಯರು, ಯಾವುದೇ ದುರಪೇಕ್ಷೆ ಇಲ್ಲದಂತಹ ಅಧೀನ ಸೇವಕರು ಮತ್ತು ಇನ್ನೂ ಸ್ತ್ರೀಯರ ರಹಸ್ಯ ವಿಷಯಗಳನ್ನರಿಯದ ಬಾಲಕರು. ಅವರು, ತಾವು ಮರೆಸಿಟ್ಟಿರುವಂತಹ ಅಲಂಕಾರದ ಅರಿವು ಜನರಿಗಾಗುವಂತೆ ತಮ್ಮ ಪಾದಗಳನ್ನು ನೆಲಕ್ಕೆ ಬಡಿಯುತ್ತಾ ನಡೆಯದಿರಲಿ.”
(ಪವಿತ್ರ ಕುರ್ ಆನ್ 24: 31)

ಸ್ತ್ರೀಯು ಅಪಘಡಗಳಿಗೆ ಸಿಲುಕದಂತೆ ಸುರಕ್ಷಿತರಾಗಲು ಅವರ ಒಳಿತಿಗಾಗಿ ಕೆಲವು ನೀತಿ ನಿಬಂಧನೆಗಳನ್ನು ಪವಿತ್ರ ಗ್ರಂಥಗಳಲ್ಲಿ ಆದೇಶಿಸಲಾಗಿದೆ. ಮನೆಯಿಂದ ಹೊರಗೆ ಹೋಗುವಾಗ ವಸ್ತ್ರ ಧರಿಸುವುದರ ಉದ್ದೇಶ ಶರೀರ, ಸೌಂದರ್ಯವನ್ನು ಸರಿಯಾಗಿ ಮರೆಸುವುದಾಗಿದೆ. ಜನರ ಕೆಟ್ಟ ದೃಷ್ಟಿಗಳಿಂದ ರಕ್ಷಣೆ ನೀಡಬೇಕು. ವಸ್ತ್ರವು ಸ್ವತಃ ಸೌಂದರ್ಯವಾಗಿ ಇನ್ನೊಬ್ಬರ ನೋಟ, ಶ್ರದ್ಧೆಯನ್ನು ಆಕರ್ಷಿಸಬಾರದು. ಸಾಮಾಜಿಕ ಜಾಲತಾಗಳಲ್ಲಿ ಶೇರ್ ಮಾಡುವ ಫೋಟೋಗಳು ನಿಮ್ಮ ಕಡೆಗೆ ಜನರ ಗಮನವನ್ನು ಆಹ್ವಾನಿಸುತ್ತದೆ. ಸ್ತ್ರೀಯ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಮಾಡಿ ಕೊಡುತ್ತದೆ. ವಸ್ತ್ರಧಾರಣೆ ನಮ್ಮ ಗುರುತು, ದೇವಭಯದ ಪ್ರತೀಕ. ಅದು ನಷ್ಟವಾದರೆ ಸ್ತ್ರೀಯರ ಅವನತಿಯ ಆರಂಭ.

ಕುಟುಂಬದಲ್ಲಿ ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಅನ್ಯ ಸ್ತ್ರೀ ಪುರುಷರೊಂದಿಗೆ ಮಾತನಾಡುವಾಗ ಚಾರಿತ್ರ್ಯ, ಆಚಾರ, ವಿಚಾರದಲ್ಲಿ ದೇವನಿಷ್ಠೆ ಎದ್ದು ಕಾಣಬೇಕು. ಅಲ್ಲಾಹ್ ಎಲ್ಲವನ್ನೂ ನೋಡುವವನು, ಆಲಿಸುವವನೂ ಮತ್ತು ಮನುಷ್ಯನ ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳನ್ನು ಅರಿಯುವವನಾಗಿರುತ್ತಾನೆ ಎಂಬ ಚಿಂತನೆ ನಮ್ಮಲ್ಲಿಯೂ ಮಕ್ಕಳಲ್ಲಿಯೂ ಉಂಟು ಮಾಡಲು ಪ್ರಯತ್ನಿಸಬೇಕು. ಮಕ್ಕಳು ಚಿಕ್ಕವವರಿರುವಾಗಲೇ ಸತ್ಚಾರಿತ್ರ್ಯ ಮತ್ತು ನೈತಿಕತೆಯ ಬಾಲ ಪಾಠಗಳನ್ನು ಮಾತಾಪಿತರಿಂದ ಕಲಿಯಬೇಕು. ಮಕ್ಕಳು ಹೊರ ಜಗತ್ತಿನಲ್ಲಿರುವ ಅನೈತಿಕತೆ ಹಾಗೂ ನೈತಿಕತೆಯ ವ್ಯತ್ಯಾಸ, ವಾಸ್ತವವನ್ನು ಗುರುತಿಸುವಂತಿರಬೇಕು. ನೈತಿಕತೆ ಎಂಬುದು ನಾವು ಮುಂದಿನ ತಲೆಮಾರುಗಳಿಗೆ ಬಿಟ್ಟು ಹೋಗುವ ಸಂಪತ್ತು ಮತ್ತು ಪರಂಪರೆಯಾಗಿರುತ್ತದೆ.