ಬಿಜೆಪಿಯ ಸದಸ್ಯತ್ವ ಅಭಿಯಾನ: ನಿರೀಕ್ಷೆ ಮೀರಿ ಪಕ್ಷಕ್ಕೆ ಸೇರ್ಪಡೆ; ಸಂತಸ ಹಂಚಿಕೊಂಡ ಬಿಜೆಪಿ

0
663

ಸನ್ಮಾರ್ಗ ವಾರ್ತೆ-

ನವದೆಹಲಿ; ಆ.21- ಜುಲೈ 6ರಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ನೀಡಿದ್ದ ಚಾಲನೆಯು ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಪಕ್ಷದ ಉಪಾಧ್ಯಕ್ಷ ಹಾಗೂ ಸದಸ್ಯತ್ವ ಅಭಿಯಾನದ ಸಂಚಾಲಕ ದುಶ್ಯಂತ್ ಕುಮಾರ್ ಗೌತಮ್ ಹೇಳಿದ್ದಾರೆ. ಜುಲೈ 6ರಿಂದ ಆಗಸ್ಟ್ 20ರವರೆಗೆ ಒಟ್ಟು 3,78,67,753 ಮಂದಿ ಹೊಸ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಂಖ್ಯೆ ಬಿಜೆಪಿ ಗುರಿ ಹೊಂದಿದುದಕ್ಕಿಂತ ಹೆಚ್ಚಿನದು ಎಂದು ಅವರೇ ಹೇಳಿದ್ದು, ತಮ್ಮ ಗುರಿಗಿಂತ 1.6 ಕೋಟಿಗೂ ಅಧಿಕ ಸದಸ್ಯರು ಪಕ್ಷಕ್ಕೆ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸದಸ್ಯತ್ವ ಅಭಿಯಾನ ಮುಗಿದಿಲ್ಲ ಎಂದೂ ಅವರು ಹೇಳಿದ್ದಾರೆ. ಇನ್ನೂ ಕೆಲವು ದಿನಗಳು ಸದಸ್ಯತ್ವ ಅಭಿಯಾನ ನಡೆಯಲಿದ್ದು, ಈ ಅವಧಿ ಮುಗಿಯುವ ವೇಳೆಗೆ ಹೊಸ ಸದಸ್ಯರ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ನಿರೀಕ್ಷಿಸಿದ್ದೇವೆ ಎಂದವರು ಹೇಳಿದ್ದಾರೆ.

ಬಿಜೆಪಿಯಲ್ಲಿ ಸುಮಾರು 11 ಕೋಟಿ ಸದಸ್ಯರಿದ್ದು, ಈ ಅಭಿಯಾನದ ಮೂಲಕ ಸದಸ್ಯರ ಸಂಖ್ಯೆಯನ್ನು 20% ಕ್ಕೆ ಏರಿಸುವ ಗುರಿ ಬಿಜೆಪಿಗೆ ಇತ್ತು. ಆದರೆ ಈ ಗುರಿಯನ್ನು ಮೀರಿ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದವರು ತಿಳಿಸಿದ್ದು, ಪಶ್ಚಿಮ ಬಂಗಾಳದಲ್ಲಿ 36 ಲಕ್ಷ ಮಂದಿ, ಉತ್ತರ ಪ್ರದೇಶದಲ್ಲಿ 65 ಲಕ್ಷ ಮಂದಿ, ಗುಜರಾತಿನಲ್ಲಿ 34 ಲಕ್ಷ ಮತ್ತು ದೆಹಲಿಯಲ್ಲಿ 15 ಲಕ್ಷ ಹೀಗೆ ಬಿಜೆಪಿ ಸೇರಿದವರ ಸಂಖ್ಯೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿದೆಯೆಂದು ಅವರು ತಿಳಿಸಿದ್ದಾರೆ.

ಈ ಸದಸ್ಯತ್ವ ಅಭಿಯಾನದಲ್ಲಿ ಆನ್‍ಲೈನ್ ಮೂಲಕ ಕೂಡ ಲಕ್ಷಾಂತರ ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಮೋದಿ ಆ್ಯಪ್ ಮತ್ತು ಬಿಜೆಪಿ ಅಧಿಕೃತ ವೆಬ್‍ಸೈಟ್ ಮೂಲಕ ಹೊಸ ಸದಸ್ಯರು ನೊಂದಣಿಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ಸದಸ್ಯತ್ವ ಅಭಿಯಾನ ಪೂರ್ಣಗೊಂಡ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಪಕ್ಷ ಸಮೀಕ್ಷೆ ಆರಂಭಿಸಲಿದೆ ಅನ್ನುವ ಮಾಹಿತಿ ಬಂದಿದೆ.