ಸನ್ಮಾರ್ಗ ವಾರ್ತೆ
ಸುಮಾರು ಆರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊಂದಿರುವ, ಅಲ್ಲದೆ ಇನ್ನಿತರ ಗಂಭೀರ ಆರೋಪ ಹೊಂದಿರುವ ಸಂಸದ ಬ್ರಜ್ ಭೂಷಣ್ ರನ್ನು ಕಂಬಳ ಸಮಿತಿ ಬೆಂಗಳೂರು ಕಂಬಳ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಕರ್ನಾಟಕ ರಾಜ್ಯ ಅಧ್ಯಕ್ಷ ನ್ಯಾಯವಾದಿ ತಾಹೇರ್ ಹುಸೇನ್ ತೀವ್ರವಾಗಿ ಖಂಡಿಸಿದ್ದಾರೆ.
ಬ್ರಜ್ ಭೂಷಣ್ ಮೇಲೆ ಈಗಾಗಲೇ ದೆಹಲಿ IPC ಸೆಕ್ಷನ್ 354, 354A ಮತ್ತು 354D ಅಡಿಯಲ್ಲಿ ಚಾರ್ಜ್ ಶೀಟ್ ದಾಖಲು ಮಾಡಿದೆ. ಇಂತಹ ಆರೋಪಿಯಿಂದ ಕುಸ್ತಿ ಪಟುಗಳನ್ನು ಸನ್ಮಾನಿಸುವಂತೆ ಆಹ್ವಾನಿಸಿದ್ದು ಕನ್ನಡ ನಾಡು ಮತ್ತು ಸಂಸ್ಕೃತಿಗೆ ಮಾಡಿದ ಅಪಮಾನವಾಗಿದೆ.
ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಯವರ ಈ ನಡೆ ಅತ್ಯಂತ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
ಈ ಕಾರ್ಯಕ್ರಮಕ್ಕೆ ಈಗಾಗಲೇ ರಾಜ್ಯ ಸರಕಾರ ಒಂದು ಕೋಟಿ ರೂಪಾಯಿ ನೆರವು ನೀಡಿದ್ದು ಕಾರ್ಯಕ್ರಮಕ್ಕೆ ಇಂಥ ವ್ಯಕ್ತಿಗೆ ಅಹ್ವಾನ ಕೊಟ್ಟಿರುವುದನ್ನು ತಡೆ ಹಾಕಬಹುದಿತ್ತು. ಕಾರ್ಯಕ್ರಮದ ಆಯೋಜಕರು ಈ ನಿರ್ಧಾರವನ್ನು ಮರು ಪರಿಶೀಲಿಸಿ ಬ್ರಿಜ್ ಭೂಷಣ ಕಾರ್ಯಕ್ರಮಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ಅಗ್ರಹಿಸಿದರು.