ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ಆಯ್ಕೆಯಾದ ಸಂಸದ ಸಸಿಕಾಂತ್ ಸೆಂಥಿಲ್

0
96

ಸನ್ಮಾರ್ಗ ವಾರ್ತೆ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ನೀಡಲಾಗುತ್ತಿರುವ ‘ಮಾನವ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ ಸೆಂಥಿಲ್ ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರಿಸ್ ಹೂಡೆ ಹೇಳಿದರು.

ಅವರು ಇಂದು ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ವಿವಿಧ ಸಮುದಾಯಗಳ ಮಧ್ಯೆ ಉತ್ತಮ ಸಂಬಂಧವನ್ನು ಬೆಸೆಯುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಸಕಾರಾತ್ಮಕ ಕೆಲಸಗಳನ್ನು ಪ್ರೋತ್ಸಾಹಿಸುವ ಕೆಲಸಗಳೊಂದಿಗೆ ಸಾಮುದಾಯಿಕ ಸೇವಾ ಚಟುವಟಿಕೆಗಳಲ್ಲಿ ನಿರಂತರ ಮಾಡುತ್ತಾ ಬಂದಿದೆ ಎಂದರು.

ಈ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ, ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸಿದವರಿಗಾಗಿ ಕೊಡಲಾಗುವ ‘ಮಾನವ ರತ್ನ’ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿ ತನ್ನ ಸಂಪತ್ತು ವ್ಯಯಿಸುವುದು ಸೇರಿದಂತೆ ಇತರ ಸೇವಾ ಕ್ಷೇತ್ರಗಳಲ್ಲಿ ದುಡಿದು ಸಮಾಜದ ಕಲ್ಯಾಣಕ್ಕಾಗಿ ಪ್ರಯತ್ನಿಸಿದವರಿಗೆ ‘ಸೇವಾ ರತ್ನ’ ಪ್ರಶಸ್ತಿಗಳನ್ನು ನೀಡುತ್ತಿದೆ.

ಈ ಪೈಕಿ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ ಸೆಂಥಿಲ್, ‘ಸೇವಾ ರತ್ನ’ ಪ್ರಶಸ್ತಿಗೆ ಮೂಲತಃ ಕಾರ್ಕಳದವರಾದ, ದುಬೈಯಲ್ಲಿ ಉದ್ಯಮಿಯಾಗಿರುವ ಕೆ.ಎಸ್.ನಿಸಾರ್ ಅಹ್ಮದ್ ಆಯ್ಕೆಯಾಗಿದ್ದಾರೆ. ಈ ವರ್ಷದಿಂದ ಈ ಪ್ರಶಸ್ತಿಗಳ ಜೊತೆಗೆ ಸಾಮಾಜಿಕ ಸೌಹಾರ್ದತೆಗಾಗಿ ಶ್ರಮಿಸುವವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿಯನ್ನೂ ಕೊಡಲು ತೀರ್ಮಾನಿಸಲಾಗಿದ್ದು, ಈ ಚೊಚ್ಚಲ ಪ್ರಶಸ್ತಿಗೆ ಉಡುಪಿಯ ಕ್ರೈಸ್ತ ಧರ್ಮ ಗುರುಗಳೂ, ಸಾಮಾಜಿಕ ಹೋರಾಟಗಾರರೂ ಆಗಿರುವ ಫಾ| ವಿಲಿಯಮ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.

ನವೆಂಬರ್ 10ನೇ ತಾರೀಕಿನಂದು ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಮ್ ನಲ್ಲಿ ನಡೆಯಲಿರುವ “ವಿವಿಧ ಸಮುದಾಯಗಳ ಸ್ನೇಹ ಸಮಾವೇಶ” ಮತ್ತು “ಪ್ರಶಸ್ತಿ ಪ್ರಧಾನ ಸಮಾರಂಭ”ದಲ್ಲಿ ಈ ಪ್ರಶಸ್ತಿಗಳನ್ನು ಪ್ರಧಾನಿಸಲಾಗುವುದು ಎಂದವರು ಹೇಳಿದರು.

ಮಾನವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಸಸಿಕಾಂತ ಸೆಂಥಿಲ್ ತಮಿಳುನಾಡಿನ ದಲಿತ ಕುಟುಂಬದಲ್ಲಿ ಜನಿಸಿ, ಇಂಜಿನಿಯರಿಂಗ್ ಪದವೀಧರರಾಗಿ, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ಼್ಯಾಂಕ್ ಪಡೆದು, ಬಳಿಕ ಕರ್ನಾಟಕದ ಬಳ್ಳಾರಿ, ರಾಯಚೂರು ಮತ್ತು ಮಂಗಳೂರಿನಲ್ಲಿ ಕ್ರಮವಾಗಿ ಸಹಾಯಕ ಕಮಿಷನರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆಗಳಿಸಿದವರು. ತಮ್ಮ ಆಡಳಿತಾವಧಿಯಲ್ಲಿ ಅತ್ಯಂತ ದಕ್ಷ, ಸರಳ, ಪ್ರಾಮಾಣಿಕ, ಮತ್ತು ಜನಪರ ಅಧಿಕಾರಿಯಾಗಿ ಜನಪ್ರಿಯರಾದವರು.

ದ.ಕ. ಜಿಲ್ಲಾ ಜಿಲ್ಲಾಧಿಕಾರಿಯಾಗಿದ್ದಾಗ, ದೇಶದಲ್ಲಿ ನಶಿಸುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಬೇಸತ್ತು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ತನ್ನ ಎರಡು ದಶಕಗಳ ಸೇವಾವಧಿ ಉಳಿದಿರುವಾಗಲೇ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜ್ಯದೆಲ್ಲೆಡೆ ಸಂಚರಿಸಿ ಕೋಮುವಾದದ ವಿರುದ್ಧ ಮತ್ತು ಮಾನವೀಯ ಮೌಲ್ಯಗಳ ಪರ ಜಾಗೃತಿ ಮೂಡಿಸಿದವರು. ದೇಶದ ಸಂವಿಧಾನ ಮತ್ತು ಬಹುತ್ವವನ್ನು ಸಾಂವಿಧಾನಿಕ ದಾರಿಯಲ್ಲಿ ರಕ್ಷಿಸಲು ಮೌಲ್ಯಯುತ ರಾಜಕೀಯ ಅತ್ಯುತ್ತಮ ದಾರಿ ಎಂದು ನಿರ್ಧರಿಸಿ ರಾಜಕೀಯ ಪ್ರವೇಶಿಸಿ, ಕಾಂಗ್ರೆಸ್ ಪಕ್ಷ ಸೇರಿ ಭಾರತ್ ಜೋಡೋ ಯಾತ್ರೆ, ಕರ್ನಾಟಕ ವಿಧಾನಸಭಾ ಚುನಾವಣೆ, ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ ಅನಂತರ ಲೋಕಸಭಾ ಚುನಾವಣೆಯಲ್ಲಿ ತಮಿಳು ನಾಡಿನ ತಿರುವಳ್ಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ 5 ಲಕ್ಷ 72 ಸಾವಿರ ಮತಗಳ ಭಾರಿ ಅಂತರದಿಂದ ಗೆದ್ದು ಸಂಸದರಾದವರು.

ಸೇವಾ ರತ್ನ ಪ್ರಶಸ್ತಿ ಆಯ್ಕೆಯಾದ ಕಾರ್ಕಳ ಶೇಖ್ ನಿಸಾರ್ ಅಹ್ಮದ್, ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾಗಿದ್ದು, ‘ದುಬೈಯ ನ್ಯಾಶ್ ಇಂಜಿನಿಯರಿಂಗ್’ ಹಾಗೂ ಅಬುಧಾಬಿಯ ‘ಸೂಪರ್ ಇಂಜಿನಿಯರಿಂಗ್ ಇಂಡಸ್ಟ್ರಿ’ ಮತ್ತು ‘ಸೂಪರ್ ಇಂಜಿನಿಯರಿಂಗ್ ಸರ್ವಿಸ್’ ಸಂಸ್ಥೆಗಳ ಮಾಲಕರು. 1975ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಅಬುಧಾಬಿಗೆ ಹೋಗಿ, ಹಾರ್ಡ್ ವೇರ್ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಕ್ರಮೇಣ ಕೇವಲ ನಾಲ್ಕು ಮಂದಿ ನೌಕರರನ್ನಿಟ್ಟುಕೊಂಡು ಆರಂಭಿಸಿದ ಸಣ್ಣ ಉದ್ಯಮವನ್ನು, ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮಗಳ ಮೂಲಕ ಇಂದು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದಲ್ಲದೆ ಆ ಸಂಸ್ಥೆಯನ್ನು ದುಬೈಯ ಪ್ರತಿಷ್ಠಿತ ಉದ್ಯಮ ಸಂಸ್ಥೆಯಾಗಿ ಬೆಳೆಸಿದವರು.

ವಿದೇಶದಲ್ಲಿದ್ದರೂ ಸದಾ ತನ್ನೂರ ಬಡವರು ಮತ್ತು ಅಸಹಾಯಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವವರು. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಕಳದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು, ನಿರಾಶ್ರಿತರಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ವೃದ್ಧಾಶ್ರಮವೊಂದನ್ನು ನಡೆಸುತ್ತಿದ್ದು, ಬಡವರಿಗೆ ಮನೆ ನಿರ್ಮಾಣ, ವೈದ್ಯಕೀಯ ವೆಚ್ಚ, ಬಡ ಹೆಣ್ಮಕ್ಕಳ ವಿವಾಹ, ಅನಾಥ ಮಕ್ಕಳಿಗೆ ನೆರವು, ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಇತ್ಯಾದಿಗಳ ಜೊತೆಗೆ ವಿವಿಧ ಸಮಾಜ ಕಲ್ಯಾಣ ಚಟುವಟಿಕೆಗಳು, ಸಾಮಾಜಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತವರು.

‘ಸೌಹಾರ್ದ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿರುವ ಫಾ.ವಿಲಿಯಮ್ ಮಾರ್ಟಿಸ್ LIC ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಕ್ರಮೇಣ ಅಧ್ಯಾತ್ಮದ ಕಡೆಗೆ ಒಲವು ತೋರಿ ಧಾರ್ಮಿಕ ಶಿಕ್ಷಣ-ತರಬೇತಿ ಪಡೆದು ಕ್ರೈಸ್ತ ಧರ್ಮಗುರುಗಳಾಗಿ ದೀಕ್ಷೆ ಪಡೆದವರು. ಧರ್ಮಗುರುಗಳಾಗಿರುವಾಗಲೇ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿ ಕೋಮುವಾದದ ವಿರುದ್ಧ ಮತ್ತು ಸಾಮಾಜಿಕ ಸೌಹಾರ್ದತೆಯ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡಿದವರು. ದಲಿತರು, ಅಲ್ಪಸಂಖ್ಯಾತರು, ಮತ್ತು ಹಿಂದುಳಿದ ವರ್ಗಗಳ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದುರ್ಬಲ ಪರವಾಗಿ ಧ್ವನಿಯೆತ್ತಿದವರು. ತನ್ನ ಇಳಿ ವಯಸ್ಸಿನಲ್ಲೂ ವಿಶ್ರಾಂತಿ ಪಡೆಯದೆ ವಿವಿಧೆಡೆಗೆ ಸಂಚರಿಸಿ ಧಾರ್ಮಿಕ ಮತ್ತು ಸಾಮಾಜಿಕ ಸೌಹಾರ್ದತೆಗಾಗಿ ಶ್ರಮಿಸುತ್ತಿರುವವರು.

ಇದೇ ಸಮಾವೇಶದಲ್ಲಿ ಸಮಾಜಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ 6 ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಾಗುವುದು. ಶಿಕ್ಷಣ, ಸಾಹಿತ್ಯ. ಜಾನಪದ, ಸಂಘಟನೆ, ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ, ಹಲವು ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾಗಿರುವ ಸಾಹಿತಿ ಮತ್ತು ವಾಗ್ಮಿ ಡಾ. ಗಣನಾಥ ಎಕ್ಕಾರ್, ಜೀವನದುದ್ದಕ್ಕೂ ಜಾತ್ಯಾತೀತ ಮೌಲ್ಯಗಳಿಗೆ ಬದ್ಧರಾಗಿದ್ದು, ಸ್ವಚ್ಛ ರಾಜಕೀಯ ಜೀವನವನ್ನು ನಡೆಸಿರುವ ಜಿಲ್ಲೆಯ ಈರ್ವರು ಹೆಮ್ಮೆಯ ಮಹಿಳೆಯರಾದ ಉಡುಪಿ ಜಿಲ್ಲಾ ಪಂಚಾಯತಿನ ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ ಮತ್ತು ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ಸಾಮಾಜಿಕ ನ್ಯಾಯದ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ದಲಿತ ನಾಯಕ ಮತ್ತು ಸಂಘಟಕ ಅಣ್ಣಪ್ಪ ನಕ್ರೆ ಹಾಗೂ ಅನಾಥರು, ಅಸಹಾಯಕರು ಹಾಗೂ ನಿರಾಶ್ರಿತರ ಸೇವೆಗೆ ಸದಾ ಸಿದ್ಧರಾಗಿರುವ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೊಡಿ, ಕುಂದಾಪುರ ಈ ಸಂದರ್ಭದಲ್ಲಿ ಸನ್ಮಾನಿಸಲ್ಪಡಲಿದ್ದಾರೆ.

ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಾನಪದ ವಿದ್ವಾಂಸ, ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಪುರುಷೋತ್ತಮ ಬಿಳಿಮಲೆ ‘ಮುಖ್ಯ ಭಾಷಣ’ ಮಾಡಲಿದ್ದಾರೆ. ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ, ಉದ್ಯಮಿ ಅಬ್ದುಲ್ಲಾ ಕುoಞ ಸಮಾವೇಶವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಯಾಸಿನ್ ಮಲ್ಪೆ ಪ್ರಸ್ತಾವನೆ ಹಾಗೂ ಅಭಿನಂದನಾ ಭಾಷಣ ನಿರ್ವಹಿಸಲಿದ್ದಾರೆ. ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್.ಶರ್ಫುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಮಾಜಿ ಸಚಿವರು ಮತ್ತು ಉಡುಪಿಯ ಮಾಜಿ ಸಂಸದರುಗಳಾದ ಶ್ರೀ. ವಿನಯ ಕುಮಾರ್ ಸೊರಕೆ ಮತ್ತು ಶ್ರೀ. ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿರುತ್ತಾರೆ.

ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ಲಾ ಪರ್ಕಳ, ಕರ್ನಾಟಕ ಅಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷರಾದ ಯು.ಟಿ.ಇಫ್ತಿಖಾರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಆಫ್ರೋಜ್ ಅಸ್ಸಾದಿ ದುಬೈ, ಸಹಬಾಳ್ವೆಯ ಅಧ್ಯಕ್ಷ ಕೆ. ಫಣಿರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಗ್ರೇಸಿ ಕೊಯಲೋ, ಕುಂದಾಪುರದ ಕೊಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಫಿರ್ದೌಸ್ ಭಾಗವಹಿಸಲಿದ್ದಾರೆ.

ಎಸ್.ಕೆ ಇಕ್ಬಾಲ್ ಕಡಪಾಡಿ ಅವರು ಸಮಾವೇಶದ ಸಂಚಾಲಕರಾಗಿದ್ದು, ಇಕ್ಬಾಲ್ ಮನ್ನಾ ನಾಯರ್ಕೆರೆ ಸಹ ಸಂಚಾಲಕರು ಮತ್ತು ಇಸ್ಮಾಯಿಲ್ ಹುಸೈನ್ ಮೇಲ್ವಿಚಾರಕರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸಯ್ಯದ್ ಫರೀದ್, ಸಲಾಹುದ್ದೀನ್ ಶೇಖ್, ಇಕ್ಬಾಲ್ ಮನ್ನಾ, ಇಸ್ಮಾಯಿಲ್ ಕಟಪಾಡಿ, ಟಿ.ಎಮ್ ಜಫ್ರುಲ್ಲಾ, ಅಬ್ದುಲ್ ಅಝೀಜ್ ಉದ್ಯಾವರ ಉಪಸ್ಥಿತರಿದ್ದರು.