ಕೇಂದ್ರ ಸರಕಾರ ಮುಸ್ಲಿಮರನ್ನು ಬೇಟೆಯಾಡುತ್ತಿದೆ: ಬಂಧಿತರಿಗೆ ಕಾನೂನು ಸಹಾಯಹಸ್ತ ನೀಡಲು ಮುಸ್ಲಿಂ ಲೀಗ್ ತೀರ್ಮಾನ

0
1331

ಸನ್ಮಾರ್ಗ ವಾರ್ತೆ

ಮಲಪ್ಪುರಂ,ಮೇ.14: ಕೊರೋನಾ ಸಮಸ್ಯೆಯ ಕಾಲದಲ್ಲಿಯೂ ಕೇಂದ್ರ ಸರಕಾರದಿಂದ ಮುಸ್ಲಿಮರನ್ನು ಬೇಟೆಯಾಡುವುದನ್ನು ಮುಂದುವರಿಸುತ್ತಿದೆ ಎಂದು ಮುಸ್ಲಿಂ ಲೀಗ್ ಟೀಕಿಸಿದೆ. ಕೊರೋನಾ ವಿರುದ್ಧ ಎಲ್ಲರೂ ಹೋರಾಡುತ್ತಿರುವಾಗ ಬಿಜೆಪಿ ಕೋಮು ಅಜೆಂಡಾ ಜಾರಿಗೊಳಿಸುತ್ತಿದೆ ಎಂದು ಲೀಗ್ ಸರಕಾರವನ್ನು ಕುಟುಕಿತಲ್ಲದೇ ಯುಎಪಿಎ ಹೇರಿ ಬಂಧಿಸಲಾಗಿರುವ ವಿದ್ಯಾರ್ಥಿ ನಾಯಕರ ಪ್ರಕರಣ ನಡೆಸಲು ಮುಸ್ಲಿಂ ಲೀಗ್ ಆರ್ಥಿಕ ಸಹಾಯ ಒದಗಿಸುವುದಾಗಿ, ಲೀಗ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸರಕಾರಿ ಭಯೋತ್ಪಾದನೆಗೆ ಬಲಿಯಾಗಿ ಜೈಲಿಗೆ ನೂಕಲ್ಪಟ್ಟ ಹೋರಾಟಗಾರರಿಗೆ ಕಾನೂನು ಹೋರಾಟದ ಮೂಲಕ ಬೆಂಬಲ ನೀಡಲು ಮುಸ್ಲಿಮ್ ಲೀಗ್‍ನ ರಾಷ್ಟ್ರೀಯ ಸಮಿತಿ ತೀರ್ಮಾನಿಸಿದೆ.

ಯುಎಪಿಎ, ಎನ್‍ಎಸ್‍ಎ ಮುಂತಾದ ಕರಾಳ ಕಾನೂನುಗಳನ್ನು ಹೇರಿ ಜೈಲಿಗಟ್ಟಲಾದ ಜಾಮಿಅ ಮಿಲ್ಲಿಯಾ ವಿಶ್ವಾವಿದ್ಯಾನಿಲಯದ ವಿದ್ಯಾರ್ಥಿ ನಾಯಕರಾದ ಸಫೂರ್ ಜರ್ಗರ್, ಮೀರಾನ್ ಹೈದರ್, ಮಾಜಿ ವಿದ್ಯಾರ್ಥಿ ನಾಯಕ ಶಫೀಉರ್ರಹ್ಮಾನ್, ಝೀಲಂಪುರದ ಝಹೀರ್ ಬಾಗ್ ಮಾದರಿ ಹೋರಾಟಕ್ಕೆ ನೇತೃತ್ವ ನೀಡಿದ ಗುಲ್‍ ಶಿಫಾರನ್ನು ಬಂಧಿಸಲಾಗಿದೆ.

ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಡಾ.ಝಫರುಲ್ ಇಸ್ಲಾಂ, ಜೆಎನ್‍ಯು ನಾಯಕ ಉಮರ್ ಖಾಲಿದ್, ಸಂಶೋಧನಾ ವಿದ್ಯಾರ್ಥಿ ಚೆಂಗಿಸ್ ಖಾನ್‍ರನ್ನು ದೇಶದ್ರೋಹ ಆರೋಪ ಹೊರಿಸಿ ಕಸ್ಟಡಿಗೆ ಪಡೆಯುವ ಕ್ರಮ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಲೀಗ್ ಅವರಿಗೆಲ್ಲ ಕಾನೂನು ಸಹಾಯ ನೀಡಲು ತೀರ್ಮಾನಿಸಿದೆ.

ಅನ್ಯಾಯವಾಗಿ ಜೈಲುಪಾಲಾಗಿರುವವರಿಗೆ ನ್ಯಾಯಕ್ಕಾಗಿ ಹೋರಾಟದಲ್ಲಿ ಮುಸ್ಲಿಂ ಲೀಗ್ ಅವರ ಜೊತೆಗೆ ನಿಲ್ಲಲಿದೆ ಎಂದು ನಾಯಕರು ಹೇಳಿದರು. ಈ ಹಿಂದೆ ಈ ವಿಷಯವನ್ನು ಪಾರ್ಲಿಮೆಂಟಿನಲ್ಲಿ ಮುಸ್ಲಿಂ ಲೀಗ್ ಎತ್ತಿತ್ತು. ವಿದ್ಯಾರ್ಥಿಗಳನ್ನು ಬೇಟೆಯಾಡುತ್ತಿರುವುದು ಕಟು ಪ್ರಜಾಪ್ರಭುತ್ವ ವಿರೋಧಿ ಕೃತ್ಯವೆಂದು ಪ್ರಧಾನಿಗೆ ಪತ್ರ ಬರೆದು ಮುಸ್ಲಿಂ ಲೀಗ್ ವಿರೋಧವನ್ನು ವ್ಯಕ್ತಪಡಿಸಿತ್ತು.

ಲಾಕ್ ಡೌನ್ ಸಮಯದಲ್ಲಿ ಮೇ 6ಕ್ಕೆ ಯೂತ್ ಲೀಗ್ ದೇಶ ವ್ಯಾಪಕವಾಗಿ ರಾಷ್ಟ್ರೀಯ ಪ್ರತಿಭಟನಾ ದಿನವನ್ನು ಆಚರಿಸಿದೆ. ಕೇಂದ್ರ ಗೃಹ ಸಚಿವರಿಗೆ ಸಾವಿರಾರು ಇಮೇಲ್ ದೂರುಗಳನ್ನು ಕಳುಹಿಸಲಾಗಿದೆ.

ಕೇರಳದ ಪಾಲಕ್ಕಾಡಿನಲ್ಲಿ ಸೇರಿದ ಮುಸ್ಲಿಂ ಲೀಗ್ ಕಾರ್ಯಕಾರಿಣಿ ಸಭೆಯಲ್ಲಿ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಸಂಸದ ಪಿಕೆ ಕುಂಞಲಿಕುಟ್ಟಿ, ಸಂಸದ ಇಟಿ ಮುಹಮ್ಮದ್ ಬಶೀರ್, ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್, ಸಂಸದ ಪಿವಿ ಅಬ್ದುಲ್ ವಹಾಬ್, ಕೆ.ಪಿ.ಎ ಮಜೀದ್, ಡಾ.ಎಂ.ಕೆ ಮುನೀರ್, ಸಿ.ಕೆ ಝುಬೈರ್, ಅಡ್ವಕೇಟ್ ಫೈಝಲ್ ಬಾಬು ಭಾಗವಹಿಸಿದ್ದರು.