ಮುಸ್ಲಿಮರು ಮತ್ತು ನಾಯಿಗಳಿಗೆ ಪ್ರವೇಶ ಇಲ್ಲ; ಕೃಷಿ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ವಿರೋಧಿ ಪೋಸ್ಟರ್

0
935

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬಿಧಾನ್ ಚಂದ್ರ ಕೃಷಿ ವಿಶ್ವವಿದ್ಯಾಲಯದ (BCKV) ಕೃಷಿ ವಿಭಾಗದ ಪ್ರವೇಶದ್ವಾರದಲ್ಲಿ ಮುಸ್ಲಿಂ ವಿರೋಧಿ ಮತ್ತು ಅವಹೇಳನಕಾರಿ ಪೋಸ್ಟರ್ ಕಾಣಿಸಿಕೊಂಡಿದ್ದು, ಕ್ಯಾಂಪಸ್‌ನಲ್ಲಿ ಆಕ್ರೋಶ ಉಂಟುಮಾಡಿದೆ.

“ನಾಯಿಗಳು ಮತ್ತು ಮುಸ್ಲಿಮರಿಗೆ ಅನುಮತಿ ಇಲ್ಲ” ಅಥವಾ ಪ್ರವೇಶ ಇಲ್ಲ, “ಭಯೋತ್ಪಾದನೆ ಎಂದರೆ ಇಸ್ಲಾಂ” ಎಂಬ ಉದ್ರೇಕಕಾರಿ ಸಂದೇಶವಿರುವ ಕೈಬರಹದ ಪೋಸ್ಟರ್ ಹಾಕುವ ಮೂಲಕ ಕೋಮು ದ್ವೇಷವನ್ನು ಪ್ರಚೋದಿಸಲು ಯತ್ನಿಸಲಾಗಿದೆ. ಪೋಸ್ಟರ್‌ನಲ್ಲಿ ಯಾರದೇ ಸಹಿ ಅಥವಾ ಯಾವುದೇ ಗುಂಪಿನ ಹೆಸರು ಇಲ್ಲ.

ಪೋಸ್ಟರ್ ಗಮನಕ್ಕೆ ಬಂದ ಸ್ವಲ್ಪ ಸಮಯದ ನಂತರ ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದು, ಈ ಘಟನೆಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ತೀವ್ರ ಕಳವಳ ಹುಟ್ಟಿಸಿದೆ. ವಿದ್ಯಾಸಂಸ್ಥೆಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

“ಇದು ದುರದೃಷ್ಟಕರ ಮತ್ತು ಖಂಡನೀಯ” ಎಂದು ಒಬ್ಬ ಪ್ರಾಧ್ಯಾಪಕರು ಪ್ರತಿಕ್ರಿಯಿಸಿದರು. ಭಾರತದ ಪ್ರಮುಖ ಕೃಷಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥೆಯಲ್ಲಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ಒಗ್ಗಟ್ಟನ್ನು ರಕ್ಷಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ದೇಶದ ಹಲವು ಭಾಗಗಳಲ್ಲಿ ಮುಸ್ಲಿಂ ವಿರೋಧಿ ಘಟನೆಗಳು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ವಿಶ್ವವಿದ್ಯಾಲಯ ಆಡಳಿತವು ಈ ವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸಿ ದೋಷಿಗಳನ್ನು ಪತ್ತೆ ಹಚ್ಚುವುದಾಗಿ ಆಡಳಿತ ಮಂಡಳಿ ಹೇಳಿದೆ.