ರಸ್ತೆ ಬದಿ ನಮಾಝ್ ಮಾಡಬೇಡಿ: ಮಸೀದಿಯಲ್ಲಿಯೇ ನಮಾಝ್ ನಿರ್ವಹಿಸಿ: ಇಮಾಮ್ ರಾಶಿದ್ ಫರಂಗಿ

0
503

ಅಲಿಗಡ, ಜು. 30: ರಸ್ತೆ ಬದಿ ನಮಾಝ್ ನಿರ್ವಹಿಸದಂತೆ ಆಲ್ ಇಂಡಿಯ ಪರ್ಸನಲ್ ಲಾ ಬೋರ್ಡ್ ಇದರ ಸದಸ್ಯರಾದ ಮೌಲಾನಾ ರಾಶಿದ್ ಫರಂಗಿ ಮಹಲಿಯವರು ಮುಸ್ಲಿಮರಿಗೆ ಕರೆ ನೀಡಿದ್ದಾರೆ. ರಸ್ತೆ ಬದಿ ನಮಾಝ್ ಮಾಡುವುದರಿಂದ ಯಾರಿಗಾದರೂ ತೊಂದರೆ ಆಗುವುದಿದ್ದರೆ ಮುಸ್ಲಿಮರು ರಸ್ತೆಬದಿ ನಮಾಝ್ ಮಾಡಬಾರದು ಎಂದು ಅವರು ಹೇಳಿದರು.

ಒಂದು ಮಸೀದಿಯಲ್ಲಿ ಜಾಗ ಇಲ್ಲ ಎಂದಾದರೆ ಇನ್ನೊಂದು ಮಸೀದಿಗೆ ಹೋಗಿ ನಮಾಝ್ ನಿರ್ವಹಿಸಬಹುದು ಎ೦ದು ಏಶ್‍ಬಾಗ್ ಇದ್‍ಗಾಹ್‍ನ ಇಮಾಮ್ ಕೂಡ ಆಗಿರುವ ಮೌಲಾನಾ ಖಾಲಿದ್ ರಾಶಿದ್ ಫರಂಗಿ ಮಹಲ್ ಹೇಳಿದರು. ಏನಿದ್ದರೂ ನಮಾಝ್ ಕುರಿತು ವಿವಾದ ಸೃಷ್ಟಿಯಾಗದಂತೆ ತಡೆಯಬೇಕು ಎಂದು ಅವರು ಕರೆ ನೀಡಿದರು.

ಮುಸ್ಲಿಮರು ನಮಾಝನ್ನು ಮಸೀದಿಯಲ್ಲಿಯೇ ನಿರ್ವಹಿಸುತ್ತಾರೆ. ಕೇವಲ ಜುಮಾ ನಮಾಝ್‍ ಅನ್ನು ಮಸೀದಿಯಲ್ಲಿ ಸ್ಥಳಾಭಾವ ಇರುವುದರಿಂದ ಮತ್ತು ಮಸೀದಿ ಇಲ್ಲದ ಕಡೆ ಶುಕ್ರವಾರದಂದು ರಸ್ತೆ ಬದಿಯಲ್ಲಿ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು. ಅನುಮತಿ ಇಲ್ಲದೆ ರಸ್ತೆ ಬದಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಬಾರದೆಂದು ಅಲಿಗಢದ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದನ್ನು ಅವರು ಶ್ಲಾಘಿಸಿದ್ದಾರೆ. ಜಿಲ್ಲಾಡಳಿತ ಉತ್ತಮ ಹೆಜ್ಜೆ ಇಟ್ಟಿದೆ. ಇಂತಹ ವ್ಯವಸ್ಥೇ ಮೊದಲಿಂದಲೇ ಕಾನೂನಿನಲ್ಲಿದೆ ಎಂದು ಅವರು ಹೇಳಿದರು.