ದುರ್ಗಾಪೂಜೆಯ ವೇಳೆ ಬಂಗಾಳದ ಕೈದಿಗಳಿಗೆ ಮಟನ್ ಬಿರಿಯಾನಿ, ಮೀನು ಸಾರು

0
74

ಸನ್ಮಾರ್ಗ ವಾರ್ತೆ

ಕೊಲ್ಕತ್ತಾ: ದುರ್ಗಾ ಪೂಜೆಯ ಸಂದರ್ಭದಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಮಟನ್ ಬಿರಿಯಾನಿ, ಬಸಂತಿ ಪಲಾವು ಸೇರಿದಂತೆ ಹಲವು ಖಾದ್ಯಗಳನ್ನು ನೀಡಲು ಬಂಗಾಳದ ಗೃಹ ಇಲಾಖೆ ನಿರ್ಧರಿಸಿದೆ. ಹಬ್ಬದ ಸಂತೋಷವನ್ನು ಖೈದಿಗಳೂ ಅನುಭವಿಸಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ದುರ್ಗಾ ಪೂಜೆ ಅಕ್ಟೋಬರ್ 9 ರಿಂದ 12ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಈ ನಿಟ್ಟಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ವಿಶೇಷ ಖಾದ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಉತ್ತಮ ಆಹಾರ ನೀಡಬೇಕು ಎಂದು ಯಾವಾಗಲೂ ಕೈದಿಗಳಿಂದ ಮನವಿ ಬರುತ್ತಿತ್ತು. ಆದುದರಿಂದ ಈ ಬಾರಿ ವಿಶೇಷವಾಗಿ ಮೆನು ತಯಾರಿಸಲಾಗಿದ್ದು, ಕೈದಿಗಳ ಮುಖದಲ್ಲಿ ಸಂತಸ ತರುತ್ತದೆ ಎನ್ನುವ ಭರವಸೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ .

ಮೀನು ಸಾರು, ಪೂರಿ, ಬೆಂಗಾಳಿ ಚನಾ ದಾಲ್, ಬೆಂಗಾಳಿ ಗಂಜಿ, ಕೋಳಿ ಸಾರು, ಸೋರೆಕಾಯಿ ಮತ್ತು ಆಲೂಗಡ್ಡೆಯೊಂದಿಗೆ ಸಿಗಡಿ, ರಾಯಿತಾ, ಬಸಂತಿ ಪುಲಾವ್ ಜೊತೆಗೆ ಮಟನ್ ಬಿರಿಯಾನಿಯೂ ಮೆನುವಿನಲ್ಲಿ ಇರಲಿದೆ.