ನಾಗಮಂಗಲ ಘರ್ಷಣೆ: ಅಶಾಂತಿ ಸೃಷ್ಟಿಸುವವರನ್ನು ಸಹಿಸುವುದಿಲ್ಲ; ತಪ್ಪಿತಸ್ಥರ ವಿರುದ್ಧ ಕ್ರಮ – ಸಚಿವ ಚೆಲುವರಾಯಸ್ವಾಮಿ

0
164

ಸನ್ಮಾರ್ಗ ವಾರ್ತೆ

ಮಂಡ್ಯ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಘರ್ಷಣೆ ಉಂಟಾಗಿ, ನಲುಗಿ ಹೋಗಿರುವ ನಾಗಮಂಗಲದಲ್ಲಿ ಪ್ರಸ್ತುತದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕರಣ ಸಂಬಂಧ ಈವರೆಗೆ 46 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಚೆಲುವರಾಯ ಸ್ವಾಮಿ, ನಮ್ಮ ನಾಗಮಂಗಲ ಶಾಂತಿ, ಸೌಹಾರ್ದತೆಯ ನೆಲೆ. ಇಲ್ಲಿ ಅಶಾಂತಿ ಮೂಡಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಮರುಸ್ಥಾಪನೆಗೆ ಸಹಕರಿಸಬೇಕು. ಘಟನೆಯ ಕುರಿತು ತಿಳಿದ ತಕ್ಷಣವೇ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿ, ವರದಿ ಪಡೆದಿದ್ದೇನೆ. ಎಲ್ಲಾ ತಪ್ಪಿತಸ್ಥರ ಬಂಧನಕ್ಕೆ ಸೂಚಿಸಿದ್ದು ಶಾಂತಿ‌ ಮರುಸ್ಥಾಪನೆಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣದಲ್ಲಿದೆ. ಸೆಕ್ಷನ್‌ 144 ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ ನಷ್ಟ, ಪ್ರಾಣಹಾನಿಯಾಗದಂತೆ ನೋಡಿಕೊಳ್ಳಿ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ. ಆ ಕೆಲಸ ಆಗುತ್ತಿದೆ ಎಂದು ತಿಳಿಸಿದರು.

40 ವರ್ಷಗಳಿಂದ ನಾನು ಶಾಸಕನಾಗಿದ್ದೇನೆ. ಹಿಂದೆ ಬೇರೆ ಕಾರಣಕ್ಕೆ ಹಿಂದೂ-ಮುಸ್ಲಿಂ ಗಲಾಟೆ ಆಗಿತ್ತು. ಆದರೆ, ಈ ರೀತಿ ಘಟನೆ ಆಗಿರಲಿಲ್ಲ. ಬಹಳ ವರ್ಷಗಳಿಂದ ಹೀಗಾಗಿರಲಿಲ್ಲ. ದುರದೃಷ್ಟವಶಾತ್‌ ಈ ಘಟನೆ ಆಗಿದೆ. ಪ್ರಕರಣ ನಿಯಂತ್ರಣಕ್ಕೆ ತರುವ ಕೆಲಸ ಆಗುತ್ತಿದೆ. ಯಾವುದೇ ಅನಾಹುತ ಆಗದಂತೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಕ್ರಮವಹಿಸಲಿದೆ ಎಂದರು.

ಮಂಡ್ಯ ಎಸ್’ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಮಾತನಾಡಿ, ಘಟನೆ ಸಂಬಂಧ ಈ ವರೆಗೂ 46 ಮಂದಿಯನ್ನು ಬಂಧಿಸಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.