ನನ್ನ ಗೋಮೂತ್ರ ಹೇಳಿಕೆ ಪಾಕ್ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ, ಭಾರತೀಯರಿಗೆ ಎಂದು ಹೇಳಿ ನುಣುಚಿಕೊಳ್ಳಲೆತ್ನಿಸಿದ ಪಾಕ್ ಸಚಿವ: ಮನೆಗೆ ಕಳಿಸಿದ ಇಮ್ರಾನ್ ಖಾನ್

0
751

ಪಾಕಿಸ್ತಾನ: ಇಲ್ಲಿನ ಪಂಜಾಬ್ ಪ್ರಾಂತ ಸರಕಾರದ ಮಾಹಿತಿ ಸಚಿವ ಫಯಾಝುಲ್ ಹಕ್ ಚೊಹಾನ್‍ ರನ್ನು ರಾಜೀನಾಮೆ ಪಡೆದು ಮನೆಗಟ್ಟಲಾಗಿದೆ. ಪಂಜಾಬ್ ಸರಕಾರದ ಮುಖ್ಯಮಂತ್ರಿ ಉಸ್‍ಮಾನ್ ಬುಝ್ದರ್ ಅವರು ಈತನ ರಾಜೀನಾಮೆ ಪಡೆದುಕೊಂಡಿದ್ದಾರೆ. ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಸೈಯದ ಸುಮ್ಸಮ್ ಅಲಿ ಬುಖಾರಿಯವರನ್ನು ಮುಖ್ಯಮಂತ್ರಿ ನೇಮಕಗೊಳಿಸಿದ್ದಾರೆ. ಪಂಜಾಬ್ ರಾಜ್ಯಪಾಲ ಮುಹಮ್ಮದ್ ಚೌಧರಿ ಸರ್‍ವರ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಪಂಜಾಬಿನ ಸಚಿವರು ಹಾಗೂ ಇತರರು ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ದಿನಗಳ ಹಿಂದೆ ಸಚಿವ ಫಯಾಝುಲ್ ಹಕ್ ಚೋಹಾನ್ ಪತ್ರಿಕಾಗೋಷ್ಠಿಯಲ್ಲಿ ಹಿಂದೂಗಳನ್ನು ಅಪಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಹಿಂದೂಗಳು ಗೊಮೂತ್ರ ಸೇವಿಸವ ಜನರು. ನಾವು ಮುಸ್ಲಿಮರು. ನಮ್ಮ ಕೈಯಲ್ಲಿ ಧ್ವಜವಿದೆ. ಮೌಲಾ ಅಲಿಯ ಧೈರ್ಯವಿದೆ. ಹಝ್ರತ್ ಉಮರ್‍ ರ ಧ್ವಜವಿದೆ. ನಿಮ್ಮಲ್ಲಿ ಧ್ವಜವಿಲ್ಲ” ಎಂದು ಹೇಳಿದ್ದರು. ನಂತರ ಸಚಿವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅವರ ಪ್ರಚೋದನಾತ್ಮಕ ಹೇಳಿಕೆ ಅಕ್ಷಮ್ಯವಾದುದು ಮತ್ತು ಅವರ ವಿರುದ್ಧ ಕೂಡಲೇ ಕ್ರಮ ಜರಗಿಸುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಂಜಾಬ್ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದರು.

ನನ್ನ ಹೇಳಿಕೆ ಪಾಕಿಸ್ತಾನದ ಯಾರಿಗೂ ಸಂಬಂಧಿಸಿದ್ದಲ್ಲ. ನಾನು ಕೇವಲ ಭಾರತೀಯರಿಗೆ ಸಂದೇಶ ನೀಡಿದ್ದೆ .ಪಾಕಿಸ್ತಾನದ ಹಿಂದೂಗಳ ಭಾವನೆಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಪಯಾಝ್ ನಂತರ ಕ್ಷಮೆಯಾಚಿಸಿದ್ದರು. ನಾನು ಯಾವುದೇ ಧರ್ಮದ ಕುರಿತು ಹೇಳಿಲ್ಲ. ಹಿಂದುತ್ವದ ಕುರಿತು ಹೇಳಿದ್ದೆ. ನಾನು ಹೇಳಿದ ವಿಷಯ ಅವರ ಧರ್ಮದ ಭಾಗವಾಗಿದೆ ಎಂದು ಫಯಾಝ್ ಹೇಳಿದ್ದರು.

ಫಯಾಝ್‍ರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ, ಇನ್ನೊಬ್ಬರ ಧರ್ಮದ ಮೇಲೆ ದಾಳಿ ನಡೆಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದರು. ನಮ್ಮ ಪ್ರಧಾನಿ ಇತರರನ್ನು ಗೌರವಿಸುವ ಮತ್ತು ಸಹಿಷ್ಣುತೆಯ ಸಂದೇಶ ನೀಡುತ್ತಾರೆ. ಧಾರ್ಮಿಕ ದ್ವೇಷ ಅಥವಾ ಧರ್ಮಾಂಧತೆಯನ್ನು ಹರಡುವವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಸಚಿವೆ ಹೇಳಿದ್ದಾರೆ.