ಅವೈಜ್ಞಾನಿಕ ಕಾಮಗಾರಿಯಿಂದ ಅಪಾಯದಲ್ಲಿ ರಾಷ್ಟ್ರೀಯ ಹೆದ್ದಾರಿ : ಸಂಸದರ ರಾಜೀನಾಮೆಗೆ ವೆಲ್ಫೇರ್ ಪಾರ್ಟಿ ಆಗ್ರಹ

0
1097

ಸನ್ಮಾರ್ಗ ವಾರ್ತೆ

ರಾಷ್ಟ್ರೀಯ ಹೆದ್ದಾರಿ 169 ಬಿಕರ್ಣಕಟ್ಟೆ – ಸಾಣೂರು ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕತೆಗೆ ಕೆತ್ತಿಕಲ್ ಮತ್ತು ಎಡಪದವು ಸಾಕ್ಷಿಯಾಗಿದೆ. ರಸ್ತೆಯನ್ನು ಸುಮಾರು 20 ಅಡಿಗಳಷ್ಟು ಅಗೆದಿರುವ ಎಡಪದವು ಪ್ರದೇಶದಲ್ಲಿ ಈಗಾಗಲೇ ಮಣ್ಣು ಕುಸಿದು ತೀರಾ ಅಪಾಯದ ಸ್ಥಿತಿಯಲ್ಲಿದೆ. ಇದೀಗ ಕೆತ್ತಿಕಲ್ ಗುಡ್ಡವೂ ಕುಸಿಯತೊಡಗಿದೆ.

ಹೆದ್ದಾರಿಯಲ್ಲಿ ವಾಹನ ಸಂಚಾರ ಇರುವಾಗಲೇ ಗುಡ್ಡ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಹಾಗೂ ಸಂಪೂರ್ಣ ಅವೈಜ್ಞಾನಿಕ ಕಾಮಗಾರಿಯಿಂದಾಗಿ ವಾಹನ ಸವಾರರು ಭೀತಿಯಿಂದಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಈ ರಸ್ತೆ ಕಾಮಗಾರಿ ಪೂರ್ತಿಯಾದರೂ ಸಂಚಾರಕ್ಕೆ ಯೋಗ್ಯವೇ ಎಂಬ ಸಂಶಯ ಮೂಡುತ್ತಿದೆ. ಶಿರೂರು ದುರ್ಘಟನೆ ಕೆತ್ತಿಕಲ್‌ನಲ್ಲಿ ಮರುಕಳಿಸಲಿದೆಯೇ? ಇಂತಹ ಅವೈಜ್ಞಾನಿಕ ಕಾಮಗಾರಿಗಳು ಜನರ ತೆರಿಗೆ ಹಣದ ದುರುಪಯೋಗವಲ್ಲವೇ? ಜಿಲ್ಲೆಯ ಸಂಸದ ಬ್ರಿಜೇಶ್ ಚೌಟರಿಗೆ ಇದ್ಯಾವ ಪರಿವೆಯೇ ಇಲ್ಲ. ತಕ್ಷಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂತಹ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಬೇಕು. ವಾಹನ ಸಂಚಾರಕ್ಕೆ ತೊಡಕಾಗದಂತೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು.

ಸಂಸದರೇ, ದಯವಿಟ್ಟು ಕ್ರಮ ಕೈಗೊಳ್ಳಿ ಇಲ್ಲವಾದರೆ ರಾಜೀನಾಮೆ ನೀಡಿ ಎಂದು ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಆಕ್ರೋಶ ವ್ಯಕ್ತಪಡಿಸಿದರು.