ಎ.ಆರ್.
ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಅಬುಲ್ ಕಲಾಮ್ ಆಝಾದ್ರ 135ನೇ ಜನ್ಮ ದಿನ ಕಳೆದ ನವೆಂಬರ್ 11ರಂದು ಕಳೆದು ಹೋಗಿದೆ. ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂರ ಜನ್ಮದಿನವಾದ ನವೆಂಬರ್ 14ನ್ನು ಮಕ್ಕಳ ದಿನವಾಗಿ ದೇಶವು ಆಚರಿಸಿತು. ಪ್ರಥಮ ಉಪರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ರ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಸೆಪ್ಟೆಂಬರ್ 5ಕ್ಕೆ ಆಚರಿಸಲಾಯಿತು. ಆದರೆ ಆಝಾದ್ರ ಜನ್ಮದಿನ ಯಾರೂ ನೆನಪಿಸದೆ, ಹೇಳದೆ ಕಳೆದು ಹೋಗುವುದು ವಾಡಿಕೆ.
ನರೇಂದ್ರ ಮೋದಿಯವರ ಭಾರತವು ಸ್ವಾತಂತ್ರ್ಯ ಸೇನಾನಿಯೂ ಆಗಿದ್ದ ಆಝಾದ್ರನ್ನು ಮರೆತು ಹೋಗುವಂತೆ ಮಾಡುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಪ್ರಥಮ ಶಿಕ್ಷಣ ಸಚಿವರ ಹೆಸರಿನಲ್ಲಿ ನೀಡುತ್ತಿದ್ದ ಸ್ಕಾಲರ್ ಶಿಪ್ಗಳು ಈಗಿನ ಸರ್ಕಾರವು ಕಡಿತಗೊಳಿಸಿದೆ. ಸಂಪಾದಕರೂ, ಗ್ರಂಥಕರ್ತರೂ, ಪವಿತ್ರ ಕುರ್ಆನ್ ವ್ಯಾಖ್ಯಾನಗಾರರೂ, ಮೂರು ಬಾರಿ ದೇಶದ ಸ್ವಾತಂತ್ರ್ಯ ಹೋರಾಟದ ಸಾರಥಿಯೂ ಪ್ರಸಿದ್ಧ ಪಂಡಿತರೂ ಆಗಿದ್ದ ಅಬುಲ್ ಕಲಾಮ್ರ ಚರಿತ್ರೆಯನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ದೇಶ ವಿಭಜನೆಯ ಪಾಪ ಭಾರವನ್ನು ಸಂಪೂರ್ಣವಾಗಿ ಮುಸ್ಲಿಮ್ ಸಮುದಾಯದ ಮೇಲೆ ಹೊರಿಸಲು ಕಟಿಬದ್ಧರಾಗಿರುವವರು ದ್ವಿರಾಷ್ಟ್ರ ಸಿದ್ಧಾಂತದ ಆಜನ್ಮ ಶತ್ರುವಾಗಿದ್ದ ಅಬುಲ್ ಕಲಾಮ್ರನ್ನು ಸಂಪೂರ್ಣವಾಗಿ ಮರೆಸಲು ಪ್ರಯತ್ನಿಸುತ್ತಿದ್ದಾರೆ.
ಏನಿದ್ದರೂ ಅವಿಸ್ಮರಣೀಯ ವ್ಯಕ್ತಿತ್ವವನ್ನು ತಿಳಿಯಲು, ಹೊಸ ತಲೆಮಾರನ್ನು ಪ್ರೇರೇಪಿಸುವ ಕೆಲಸವು ನಡೆಯಬೇಕಾಗಿದೆ. ಅವರ ನಿಜ ಜೀವನದ ಸಂದೇಶವನ್ನು ಯುವ ತಲೆಮಾರಿಗೆ ತಿಳಿಸುವ ಅಗತ್ಯವಿದೆ. ಆದ್ದರಿಂದ ಅಬುಲ್ ಕಲಾಮ್ ಆಝಾದ್ರ ಕುರಿತು ತಿಳಿಯೋಣ.
ಅಹ್ಮದ್ ಖೈರುದ್ದೀನ್ ಎಂಬವರು ಆಝಾದ್ರ ತಂದೆ. ಇವರು ಬಾಬರ್ ಚಕ್ರವರ್ತಿಯ ಕಾಲದಲ್ಲಿ ಪರ್ಶಿಯಾದ ಹರಾತ್ನಿಂದ ಭಾರತಕ್ಕೆ ಬಂದು ಮೊದಲು ಆಗ್ರಾದಲ್ಲಿ, ಬಳಿಕ ದೆಹಲಿಯಲ್ಲಿ ವಾಸಿಸಿದ ಒಂದು ಸೂಫಿ ಕುಟುಂಬದ ಸದಸ್ಯರಾಗಿದ್ದರು. ಮಕ್ಕಾಕ್ಕೆ ವಾಸ ಕೇಂದ್ರವನ್ನು ಬದಲಿಸಿದ ಖೈರುದ್ದೀನ್ರು ಮದೀನಾದ ಮುಫ್ತಿ ಶೈಕ್ ಮುಹಮ್ಮದ್ ಸ್ವಗೀರ್ರ ಮಗಳು ಅಲಿಯ್ಯರನ್ನು ವಿವಾಹವಾದರು. ಈ ದಂಪತಿಗಳ ಐದು ಮಕ್ಕಳಲ್ಲಿ ಕಿರಿಯವನಾಗಿ ಮುಹ್ಯುದ್ದೀನ್ ಆಝಾದ್ 1888 ನವೆಂಬರ್ 11 ರಂದು ಜನಿಸಿದರು. ಇವರಿಗೆ ಮೂರು ವರ್ಷವಾದಾಗ ಖೈರುದ್ದೀನ್ರ ಕುಟುಂಬವು ಭಾರತಕ್ಕೆ ವಾಪಸಾಗಿ ಕಲ್ಕತ್ತದಲ್ಲಿ ವಾಸಿಸಲಾರಂಭಿಸಿತು.
ವಿದ್ವಾಂಸರೂ, ಸೂಫಿಯೂ ಆಗಿದ್ದ ತಂದೆಯಿಂದಲೇ ಮಗನಾದ ಆಝಾದ್ ವಿವಿಧ ಧಾರ್ಮಿಕ ವಿಷಯಗಳಲ್ಲಿ ಅಗಾಧವಾದ ಜ್ಞಾನವನ್ನು ಗಳಿಸಿದರು. ಅರಬಿ, ಪರ್ಶಿಯನ್, ಉರ್ದು ಹಾಗೂ ನಂತರ ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆ ಪಡೆದರು. ಅಸಾಮಾನ್ಯ ಬುದ್ಧಿ ಸಾಮರ್ಥ್ಯ ಹಾಗೂ ಭಾಷಣದ ಕಲೆಯು ಕರಗತವಾಗಿದ್ದುದರಿಂದ ಆಝಾದ್ರಿಗೆ ಅಬುಲ್ ಕಲಾಮ್ (Father of speach) ಎಂಬ ಬಿರುದು ಬಂತು. ಅರಬಿ ಭಾಷೆಯ ಪಾಂಡಿತ್ಯವು ಆಝಾದ್ರನ್ನು ಸಮಕಾಲೀನ ವಿದ್ವಾಂಸರಿಗೆ ಸಮಾನವಾಗಿಸಿತು. ಆದರೆ ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಿ ಸರ್ಟಿಫಿಕೇಟ್ ಅಥವಾ ಬಿರುದನ್ನೋ ಪಡೆಯಲಿಲ್ಲ. ಆಝಾದ್ ಈಜಿಪ್ಟ್ ನ ಅಲ್ ಅಝ್ಝರ್ ಯುನಿವರ್ಸಿಟಿಯಲ್ಲಿ ಬಿರುದು ಗಳಿಸಿರುವರೆಂದು ಹಿಂದಿನ ಕಾಂಗ್ರೆಸ್ ನಾಯಕ ಬಾಲಬಾಯಿ ದೇಸಾಯಿ ಹೇಳಿರುವುದು ವಾಸ್ತವವಲ್ಲ. ಒಮ್ಮೆ ಆಝಾದ್ರ ಶೈಕ್ಷಣಿಕ ಅರ್ಹತೆಯು ವಿವಾದವಾದಾಗ ಅವರು ನೀಡಿದ ಪ್ರತಿಕ್ರಿಯೆ ಹೀಗಿತ್ತು: “ಜನರು ನನ್ನೊಡನೆ ನೀವು ಪಾಶ್ಚಾತ್ಯ ಅಥವಾ ಪೌರ್ವಾತ್ವದ ಯಾವ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೂರ್ತಿಗೊಳಿಸಿದ್ದೀರಿ ಎಂದು ಕೇಳುತ್ತಾರೆ. ನಿಜ ಹೇಳ ಬೇಕೆಂದರೆ ನಾನು ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿಲ್ಲ, ಆದರೆ ಪೂರ್ವ ಮತ್ತು ಪಶ್ಚಿಮದ ದೇವನು ನೀಡಿದ ಜ್ಞಾನವು ನನ್ನಲ್ಲಿದೆ ಎಂದಿದ್ದರು.
ಧಾರ್ಮಿಕ ಜ್ಞಾನವೇ ತರ್ಜುಮಾನುಲ್ ಕುರ್ಆನ್ನಂತಹ ಅದ್ಭುತವಾದ ಕುರ್ಆನ್ ವ್ಯಾಖ್ಯಾನವನ್ನು ನೀಡಲು ಇದರಿಂದ ಅವರಿಗೆ ಸಾಧ್ಯವಾಯಿತು. ಸಾಂಪ್ರದಾಯಕ ಕುರ್ಆನ್ ವ್ಯಾಖ್ಯಾನಗಳಿಗೆ ವಿಭಿನ್ನವಾಗಿ ಮೌಲಾನ ನಡೆಸಿದ ಕೆಲವು ಅವಲೋಕನಗಳು ಮತ್ತು ಸಂಶೋಧನೆಗಳು ಚಿಂತನಾರ್ಹವಾಗಿದೆ.
ಅಸ್ಹಾಬುಲ್ ಕಹ್ಫ್ (ಗುಹಾವಾಸಿಗಳು) ಎಂಬ 18ನೇ ಅಧ್ಯಾಯದಲ್ಲಿ ಗುಹೆಯವರ ಸಂಖ್ಯೆ ಮೂರು, ಐದು, ಎಂಟು ಎಂದು ಜನರು ಹೇಳುವುದನ್ನು ನಿರಾಕರಿಸಿದ ಅವರು ಕುರ್ಆನ್ ಈ ಬಗ್ಗೆ ನಿಖರ ಸಂಖ್ಯೆ ಉಲ್ಲೇಖಿಸಿಲ್ಲವೆಂದು ಹೇಳಿ ಗುಹೆಯಲ್ಲಿ ಇದ್ದ ಕಾಲಾವಧಿಯ ಕುರಿತು ಸ್ಪಷ್ಟತೆಯಿಲ್ಲವೆಂದೇ ಅಭಿಪ್ರಾಯ ಪಡುತ್ತಾರೆ.
ಅದೇ ಅಧ್ಯಾಯದಲ್ಲಿ ಕುರ್ಆನ್ ವಿವರಿಸಿದ ದುಲ್ಕರ್ನೈನ್ ಎಂಬ ಒಳಿತಿನ ಸಾಮ್ರಾಟ, ಮಹಾನನಾದ ಗ್ರೀಕ್ ಚಕ್ರವರ್ತಿಯೆಂದು ಇತಿಹಾಸದಲ್ಲಿ ದಾಖಲಾದ ಅಲೆಕ್ಸಾಂಡರ್ ಚಕ್ರವರ್ತಿಯೆಂದು ಹಿಂದಿನ ಕುರ್ಆನ್ ವ್ಯಾಖ್ಯಾನಗಾರರ ದೃಷ್ಟಿಕೋನವನ್ನು ಆಝಾದ್ ಒಪ್ಪಿರಲಿಲ್ಲ. ಅದು ಪರ್ಶಿಯನ್ ಚಕ್ರವರ್ತಿ ಸೈರಸ್ / ಕ್ರಿ.ಶ. 6ನೆ ಶತಮಾನ ಆಗಿರಬೇಕು ಎಂಬುದನ್ನು ಸಮರ್ಥಿಸುತ್ತಾರೆ. ಆ ವಿಷಯದಲ್ಲಿ ತಫ್ಹೀಮುಲ್ ಕುರ್ಆನ್ನಲ್ಲಿ ಸಯ್ಯದ್ ಮೌದೂದಿ ಇದೇ ಅಭಿಪ್ರಾಯವನ್ನು ವ್ಯಕ್ತಿಪಡಿಸಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರೂ ಮತ್ತು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರೂ ಆಗಿದ್ದ ಅಬುಲ್ ಕಲಾಮ್ ಆಝಾದ್ ಅವರು ತಮ್ಮ ಬದುಕಿನ ಆರಂಭದಲ್ಲಿ ಮತ್ತು ಕೊನೆಯಲ್ಲಿ ಸೈದ್ಧಾಂತಿಕವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದರು ಎಂಬ ಅಂಶವನ್ನು ಮರೆತು ಅವರನ್ನು ವಿಶ್ಲೇಷಿಸಲಾಗುತ್ತದೆ. ಸಯ್ಯದ್ ಮೌದೂದಿ(1908-1979) ಯವರ ತಲೆಯ ಮೇಲೆ ಹುಕೂಮತೆ ಇಲಾಹಿಯನ್ನು ಕಟ್ಟಲು ಪ್ರಯತ್ನಿಸುವ ಜಾತ್ಯತೀತರು ತಮ್ಮ ಅನುಕೂಲಕ್ಕಾಗಿ ಮರೆತು ಬಿಡುವ ಒಂದು ಸತ್ಯವಿದೆ.
ಮೌದೂದಿಯವರಿಗಿಂತ ಬಹಳ ಮುಂಚೆಯೇ ಆಝಾದ್ರು ಈ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು: “ಇಂದು ದೇವನ ಅಧಿಕಾರ ಮತ್ತು ಮಾನವನ ಅಧಿಕಾರದ ನಡುವೆ ಉಗ್ರ ಹೋರಾಟ ನಡೆಯುತ್ತಿದೆ. ಬಹುತೇಕ ಕಡೆಗಳಲ್ಲಿ ಶೈತಾನನ ಸಿಂಹಾಸನವನ್ನು ಸ್ಥಾಪಿಸಲಾಗಿದೆ… ಮುಸ್ಲಿಮರೇ, ನೀವು ಪರಲೋಕದ ಸಂಪತ್ತನ್ನು ಮಾರಿ ಇಹಲೋಕದ ತುಚ್ಛ ಲಾಭದಲ್ಲಿ ಸಂತೃಪ್ತರಾಗ ಬಯಸಿದ್ದೀರಾ? ದೇವನ ಆಡಳಿತದೊಂದಿಗೆ ದೇಶದ್ರೋಹಿಗಳಾಗಿ ಭೌತಿಕ ಆಡಳಿತದೊಂದಿಗೆ ಸಂಧಾನ ಮಾಡುವುದೆಂದು ಯೋಚಿಸಿದ್ದೀರಾ? (ಅಲ್ ಹಿಲಾಲ್, 1914 ಜುಲೈ)
ಆಝಾದ್ ಅವರು ಈ ರೀತಿ ಭೋದಿಸಿರುವುದು ಮಾತ್ರ ವಲ್ಲ ಅದರ ಆಧಾರದಲ್ಲಿ ಕೆಲಸ ಮಾಡುವ ಸಂಘಟನೆಯನ್ನೂ ಹೊಂದಬೇಕೆಂದು ಒತ್ತಾಯಿಸಿದ್ದರು.
ಹಿಝ್ಬುಲ್ಲಾ (ಅಲ್ಲಾಹನ ಪಕ್ಷ) ಎಂಬ ಹೆಸರಿನ ಒಂದು ಸಂಘಟನೆಯನ್ನು ಆರಂಭಿಸಿದ್ದರು. ನಂತರ ಒಮ್ಮೆ ಇಮಾಮುಲ್ ಹಿಂದ್ (ಭಾರತದ ಇಮಾಮ್) ಎಂಬ ಸ್ಥಾನವನ್ನು ಸೃಷ್ಟಿಸಿ, ಸ್ವತಃ ಆಯ್ಕೆಗೊಳ್ಳಲು ಉತ್ಸಾಹ ತೋರಿದ್ದು ಮತ್ತು ಮುಸ್ಲಿಮ್ ಸಮುದಾಯವು ತನ್ನ ನೈಜ ಧ್ಯೇಯವನ್ನು ಮರೆತು ಬಿಟ್ಟಿರುವ ನೋವಿನಿಂದ ಅವರನ್ನು ಆ ದಾರಿಯಲ್ಲಿ ಮುನ್ನಡೆಸಬೇಕೆಂಬ ಆಶೆಯಿಂದಾಗಿತ್ತು.
ಆದರೆ ಖಿಲಾಫತ್ ಚಳುವಳಿಯ ಸಂಸ್ಥಾಪಕ ಮೌಲಾನಾ ಮುಹಮ್ಮದಲಿ, ಪ್ರಮುಖ ವಿದ್ವಾಂಸರಾಗಿದ್ದ ಮೌಲಾನಾ ಮಹ್ಮೂದ್ ಹಸನ್, ಸಯ್ಯಿದ್ ಸುಲೈಮಾನ್ ನದ್ವಿ ಮೊದಲಾದವರ ವಿರೋಧದಿಂದ ಆ ಪದವಿಯೊಂದಿಗೆ ಅವರು ಮುಂದುವರಿಯಲಿಲ್ಲ. ಅಲ್ ಬಲಾಗ್, ಅಲ್ ಹಿಲಾಲ್ ಎಂಬ ಮಾಸ ಪತ್ರಿಕೆಗಳ ಮೂಲಕ ತನ್ನ ವಿಚಾರಗಳನ್ನು ನಿರಂತರವಾಗಿ ಅವರು ಸ್ಪಷ್ಟ ಪಡಿಸುತ್ತಿದ್ದರು.
ಅವರು 1920ರ ದಶಕದಲ್ಲಿ ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನು ಮನದಲ್ಲಿಟ್ಟು ಕೊಂಡು ಖಿಲಾಫತ್ ಚಳವಳಿಯ ಮುಂಚೂಣಿಯಲ್ಲಿದ್ದರು. 1920 ಫೆಬ್ರವರಿಯಲ್ಲಿ ಕಲ್ಕತ್ತಾದಲ್ಲಿ ನಡೆದ ಖಿಲಾಫತ್ ಸಮಿಯ ಸಮ್ಮೇಳನದಲ್ಲಿ ಅವರ ರೋಚಕ ಭಾಷಣವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಖಿಲಾಫತ್ ಚಳುವಳಿಗೆ ಆಝಾದ್ ಸೈದ್ಧಾಂತಿಕವಾದ ವಿಚಾರವನ್ನು ಕೊಡುಗೆಯಾಗಿ ನೀಡಿದ್ದರು. ಇಸ್ಲಾಮಿಗೆ ರಾಜಕೀಯ ಅಡಿಪಾಯ ಇಲ್ಲವೆಂದೋ ಅದು ಕಾಲ ಹರಣಗೊಂಡಿದೆಯೆಂದೋ ಅಥವಾ ಅದು ಉಗ್ರವಾದವೆಂದೋ ಅವರು ಒಮ್ಮೆಯೂ ಬರವಣಿಗೆ ಅಥವಾ ಭಾಷಣದಲ್ಲಿ ಹೇಳಿರಲಿಲ್ಲ. ಒಂದು ರಾಷ್ಟ್ರೀಯ ಜಾತ್ಯತೀತ ಪಕ್ಷದ ಉನ್ನತ ನಾಯಕನಾದರೂ ತಾನು ಈ ಮೊದಲು ಹೇಳಿದ್ದನ್ನು ಅಥವಾ ಬರೆದದ್ದನ್ನು ತಿದ್ದಲೂ ಇಲ್ಲ.
1923, 1936, 1940 ವರ್ಷಗಳಲ್ಲಿ ಅವರು ಎ.ಐ.ಸಿ.ಸಿ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಮತ್ತು 1940 ಮತ್ತು 1946ರ ನಡುವಿನ ಭಾರತೀಯ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ದಿನಗಳಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಚಳವಳಿಯ ನೇತೃತ್ವ ವಹಿಸಿದ್ದರು. ಮುಸ್ಲಿಮರಿಗೆ ಒಂದು ಜನ್ಮ ಸ್ಥಳದ ಬೇಡಿಕೆಯನ್ನು ಅವರು ತೀವ್ರವಾಗಿ ನಿರಾಕರಿಸಿದರು. ಬದಲಾಗಿ ಸ್ವಾಯತ್ತ ಒಕ್ಕೂಟ ವ್ಯವಸ್ಥೆಯನ್ನು ಮುಂದಿಟ್ಟರು. ಮೌದೂದಿಯಂತಹವರು ಇದೇ ರೀತಿಯ ಪರ್ಯಾಯ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದರು. ಬ್ರಿಟಿಷ್ ಕ್ಯಾಬಿನೆಟ್ ಮಿಶನ್ನೊಂದಿಗಿನ ಚರ್ಚೆಯ ಒಂದು ಹಂತದಲ್ಲಿ ಮುಸ್ಲಿಮ್ ಲೀಗ್ನ ಸುಪ್ರಿಮೋ ಮುಹಮ್ಮದಲಿ ಜಿನ್ನಾ ಇದಕ್ಕೆ ಮಣಿದಿದ್ದರು. ಆದರೆ ಜವಾಹರಲಾಲ್ ನೆಹರೂರವರ ಕೆಲವು ಹೇಳಿಕೆಗಳು ಜಿನ್ನಾರನ್ನು ಕೆರಳಿಸಿತೆಂದೂ ಆಝಾದ್ರು ತಮ್ಮ ಆತ್ಮ ಕಥೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯ ಹುದ್ದೆಗೆ ಜಿನ್ನಾರು ಹಠ ಹಿಡಿಯಬಹುದೆಂಬ ಭಯವು ನೆರಹರೂರನ್ನು ವಿಭಜನೆಯ ಪರವಾಗಿ ನಿಲ್ಲಲು ಪ್ರೇರೇಪಿಸಿತೆಂದು ಬೊಟ್ಟು ಮಾಡಲಾಗಿದೆ. ಅದು ಸರಿಯೋ ತಪ್ಪೋ ಏನಿದ್ದರೂ ಅತ್ಯಂತ ನಿರ್ಣಾಯಕವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ದೇಶದ ವಿಭಜನೆಯನ್ನು ಬಲವಾಗಿ ವಿರೋಧಿಸಿದ್ದರು ಎಂಬುದು ಐತಿಹಾಸಿಕ ಸತ್ಯ. ನಿರಾಶೆ ಹಾಗೂ ದುಃಖಿತರಾದ ಅಬುಲ್ ಕಲಾಮ್ ಆಝಾದ್ರ ನಂತರದ ಜೀವನ ಘಾಸಿಗೊಂಡ ಹೃದಯದೊಂದಿಗಾಗಿತ್ತು ಎಂದು ಜೀವನ ಚರಿತ್ರೆಗಾರರು ಅಭಿಪ್ರಾಯ ಪಟ್ಟಿದ್ದಾರೆ.
ಜವಾಹರಲಾಲ್ ನೆಹರೂರ ಒತ್ತಾಯದ ಮೇರೆಗೆ ಅವರು ಮಂತ್ರಿ ಮಂಡಲದ ಭಾಗವಾಗಲು ಒಪ್ಪಿ ಕೊಂಡರು ಎಂಬುದು ನಿಜ. ಶಿಕ್ಷಣವನ್ನು ಆರೋಗ್ಯಕರವಾದ ತಳಹದಿಯಲ್ಲಿ ಪುನರ್ನಿರ್ಮಿಸಲು ಅವರು ನಾಯಕತ್ವ ನೀಡಿದರು. ಆದರೆ ನಾಯಕರು ಮತ್ತು ವಿದ್ವಾಂಸರಿಲ್ಲದೆ ಅನಾಥವಾದ ಮುಸ್ಲಿಮ್ ಅಲ್ಪಸಂಖ್ಯಾತರ ಮನೋಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಭಯ ಮತ್ತು ಅಭದ್ರತೆಯಿಂದ ಅವರನ್ನು ಪಾರು ಮಾಡಲು ಮೌಲಾನಾರಿಗೆ ಸಾಧ್ಯವಾಗಲಿಲ್ಲ. ಆ ಹಂತದಲ್ಲಿ ಅವರ ನೇತೃತ್ವದಲ್ಲಿ ಜಂಇಯ್ಯತುಲ್ ಉಲೆಮಾ ಎ ಹಿಂದ್ ಎಂಬ ವಿದ್ವಾಂಸರ ಸಂಘಟನೆ ಕೂಡಾ ಕಾಂಗ್ರೆಸ್ನ ಪರವಾಗಿ ನಿಂತಿತೇ ಹೊರತು ಆತಂಕ ಮತ್ತು ಭ್ರಮನಿರಸನಗೊಂಡ ಮುಸ್ಲಿಮ್ ಸಮುದಾಯದಲ್ಲಿ ಧೈರ್ಯ ಮತ್ತು ದೃಢಚಿತ್ತತೆಯನ್ನು ಸೃಷ್ಟಿಸಲು ವಿಫಲವಾಯಿತು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ತಮ್ಮ ಆಡಳಿತ ಕಾಲದಲ್ಲಿ ಐವತ್ತು ವರ್ಷದ ಮುಸ್ಲಿಮರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ನೇಮಿಸಿದ ರಾಜಿಂದರ್ ಸಾಚಾರ್ ಸಮಿತಿಯ ವರದಿಯೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.












